ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಆರೋಗ್ಯ ವಿಚಾರಿಸಿದ ಶಾಸಕ ರಾಜೂಗೌಡ

ಸುರಪುರ ಆಸ್ಪತ್ರೆಗೆ 10 ಆಮ್ಲಜನಕ ಯಂತ್ರಗಳ ವಿತರಣೆ
Last Updated 20 ಮೇ 2021, 4:37 IST
ಅಕ್ಷರ ಗಾತ್ರ

ಸುರಪುರ: ಇಲ್ಲಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶಾಸಕ ರಾಜೂಗೌಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೈಯಕ್ತಿಕ ಹಣದಿಂದ ಈಗಾಗಲೇ 50 ಆಮ್ಲಜನಕ ಯಂತ್ರಗಳನ್ನು ತರಿಸಿದ್ದು, ಈ ಪೈಕಿ 10 ಯಂತ್ರಗಳನ್ನು ಈ ಆಸ್ಪತ್ರೆಗೆ ನೀಡಲಾಗಿದೆ. ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಅವರು ವೈದ್ಯರಿಗೆ ಸಲಹೆ ನೀಡಿದರು. ಏನೇ ಸಮಸ್ಯೆ ಇದ್ದರೆ ತಕ್ಷಣ ತಿಳಿಸುವಂತೆ ವೈದ್ಯಾಕಾರಿಗಳಿಗೆ ತಿಳಿಸಿದರು.

ರೋಗಿಗಳ ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ಪಡೆದರು. ನಂತರ ಆಸ್ಪತ್ರೆಯ ಕೋವಿಡ್ ಕೇಂದ್ರಕ್ಕೆ ಭೇಟಿ ಕೊಟ್ಟು ಸೋಂಕಿತರ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಧೈರ್ಯದಿಂದ ಇರಿ...ಆರಾಮ ಆಗುತ್ತದೆ ಎಂದು ರೋಗಿಗಳಿಗೆ ಧೈರ್ಯ ತುಂಬಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ ರಫಗಾರ್, ಡಾ.ಓಂಪ್ರಕಾಶ ಅಂಬೂರೆ, ಮುಖಂಡ ಡಾ. ಬಿ.ಎಂ.ಹಳ್ಳಿಕೋಟಿ, ಆಸ್ಪತ್ರೆಯ ಸಿಬ್ಬಂದಿ ಮತ್ತು ರಾಜೂಗೌಡ ಸೇವಾ ಸಮಿತಿಯ ಸದಸ್ಯರು ಇದ್ದರು.

***

ತಾಯಿಯನ್ನು ಆಸ್ಪತ್ರೆಗೆ ಸೇರಿಸಿಕೈ ತೊಳೆದುಕೊಂಡ ಮಕ್ಕಳು

ಸುರಪುರ: ಐದು ದಿನಗಳ ಹಿಂದೆ ತಾಲ್ಲೂಕಿನ ಸೂಗೂರ ಗ್ರಾಮದ ವೃದ್ಧೆಗೆ ಸೋಂಕು ತಗುಲಿತ್ತು. ಉಸಿರಾಟದ ಸಮಸ್ಯೆ ಉಂಟಾಗಿತ್ತು. ಸೋಂಕಿತ ತಾಯಿಯನ್ನು ಸುರಪುರದ ಆಸ್ಪತ್ರೆಗೆ ಸೇರಿಸಿ ಮಕ್ಕಳು ಕೈತೊಳೆದುಕೊಂಡು ಬಿಟ್ಟರು. ಐದು ದಿನ ಕಳೆದರೂ ತಾಯಿ ಹೇಗಿದ್ದಾಳೆ ಎಂದು ವಿಚಾರಿಸಲು ಬರಲಿಲ್ಲ. ಹೀಗಾಗಿ ವೃದ್ಧೆ ಆತಂಕದಲ್ಲಿದ್ದಳು. ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಬುಧವಾರ ಶಾಸಕ ರಾಜೂಗೌಡ ಪಿಪಿಇ ಕಿಟ್ ಧರಿಸಿ ವೃದ್ಧೆಯ ಯೋಗಕ್ಷೇಮ ವಿಚಾರಿಸಿದರು.

ಸೋಂಕಿತರಿಗೆ ಅತ್ಮಸ್ಥೈರ್ಯ ತುಂಬಿದರು. ನಾನು ನಿನ್ನ ಮಗನಿದ್ದ ಹಾಗೆ. ಧೈರ್ಯದಿಂದ ಇರು. ಶೀಘ್ರ ಗುಣಮುಖಳಾಗುತ್ತಿಯಾ. ನಾನೇ ನಿನ್ನ ಮನೆಗೆ ಬಿಟ್ಟು ಬರುತ್ತೇನೆ ಎಂದು ತಿಳಿಸಿದರು.

ತಮ್ಮ ಕಾರ್ಯಕರ್ತರಿಗೂ ದಿನಾಲೂ ಅಹಾರ, ಹಣ್ಣು, ಡ್ರೈಫ್ರೂಟ್ ನೀಡುವಂತೆ ತಿಳಿಸಿದರು. ವೈದ್ಯರಿಗೆ ವೃದ್ಧೆಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು. ಇದು ವೃದ್ಧೆಯಲ್ಲಿ ಸಮಾಧಾನ ತಂದಿತು. ಕಳಾಹೀನವಾಗಿದ್ದ ಆಕೆಯ ಮುಖ ಅರಳಿತು. ನೂರ್ಕಾಲ ಸುಖವಾಗಿ ಬಾಳು ಎಂದು ವೃದ್ಧೆ ಶಾಸಕ ರಾಜೂಗೌಡ ಅವರನ್ನು ಹರಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT