ಭಾನುವಾರ, ಮೇ 22, 2022
23 °C
ರಾಮ ಮಂದಿರಗಳಲ್ಲಿ ಪ್ರಸಾದ ವಿತರಣೆ; ಕುಟುಂಬ ಸಮೇತ ದರ್ಶನ ಪಡೆದ ಭಕ್ತರು

ಜಿಲ್ಲೆಯಾದ್ಯಂತ ರಾಮನವಮಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ರಾಮನವಮಿ ಹಿನ್ನೆಲೆ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಹನುಮ ಮಂದಿರಗಳು ಭಾನುವಾರ ಭಕ್ತರ ಪೂಜೆ, ನೈವೇದ್ಯ ಹಾಗೂ ಪ್ರಸಾದ ಸ್ವೀಕಾರದಿಂದ ರಾಮ ನವಮಿಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು.

ಬಿಜೆಪಿ ಕಚೇರಿ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು, ರಾಮನು ಪಿತೃವಾಕ್ಯ ಪಾಲನೆ ಸೇರಿದಂತೆ ಜೀವನದ ಎಲ್ಲಾ ಹಂತಗಳಲ್ಲೂ ಆದರ್ಶಗಳನ್ನು ಎತ್ತಿಹಿಡಿದ ಮರ್ಯಾದಾ ಪುರುಷೋತ್ತಮ. ರಾಮನು ಸರ್ವಕಾಲದಲ್ಲಿಯೂ ನಮಗೆ ಆದರ್ಶಪ್ರಾಯ ಎಂದರು.

ಡಾ.ಶರಣಭೂಪಾಲರೆಡ್ಡಿ, ಲಲಿತಾ ಅನಪೂರ, ದೇವೇಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರ, ಸುರೇಶ ಅಂಬಿಗೇರ, ಹಣಮಂತ ಇಟಗಿ, ಮಲ್ಲು ಹೊನಗೇರಾ ಸೇರಿದಂತೆ ಪ್ರಮುಖರು ಇದ್ದರು.

ಬೊರಬಂಡಾ: ಕಲ್ಯಾಣೋತ್ಸವ, ರಥೋತ್ಸವ: ಗುರುಮಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ಹೊರವಲಯದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾಮನವಮಿ ಆಚರಣೆಗಳು ಸಂಭ್ರಮದಿಂದ ಜರುಗಿದವು.

ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಕೀರ್ತನೆಗಳ ಮೂಲಕ ನವಮಿ ಉತ್ಸವ ಆರಂಭಗೊಂಡಿತು. ನಂತರ ಕಲಬುರಗಿಯ ಶ್ರದ್ಧಾ ಸಂಗೀತ ತಂಡದಿಂದ ಸಂಗೀತ ಸೇವೆ ಮತ್ತು ಭಜನೆಗಳು, ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿದ ನಂತರ ರಥೋತ್ಸವಗಳು ಜರುಗಿದವು.

ವೇದ ಘೋಷಗಳು, ಸಂಗೀತ ವಾದ್ಯಗಳೊಂದಿಗೆ ಸೀತಾ, ರಾಮರ ಕಲ್ಯಾಣೋತ್ಸವ ಹಾಗೂ ಪಟ್ಟಾಭಿರಾಮ ದೇವರ ಪಟ್ಟಾಭಿಷೇಕವನ್ನು ಮಾಡಲಾಯಿತು. ಮಹಾ ಮಂಗಳಾರತಿ ಮಾಡಿದ ನಂತರ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ತೀರ್ಥ-ಪ್ರಸಾದಗಳನ್ನು ವಿತರಿಸಲಾಯಿತು. ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬೋರಬಂಡಾ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹಾಗೂ ನೆರೆಯ ತೆಲಂಗಾಣದ ಭಕ್ತರು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಮ ನಾಮ ಸ್ಮರಣೆಯೊಡನೆ ನವಮಿಯನ್ನು ಸಂಭ್ರಮಿಸಿದರು.

ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ ,ಪೂಜೆ, ಪಲ್ಲಕಿ ಸೇವೆ ಹಾಗೂ ಕಲ್ಯಾಣೋತ್ಸವಗಳು ಜರುಗಿದವು.

ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಸಹಯೋಗದಲ್ಲಿ ಪಟ್ಟಣದ ಮುಖ್ಯರಸ್ಥೆಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ನಾರಾಯಣಪುರ: ವಿಶೇಷ ಅಭಿಷೇಕ, ಪೂಜೆ

ನಾರಾಯಣಪುರ: ಪಟ್ಟಣದ ಹನುಮ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ರಾಮದೇವರ ತೊಟ್ಟಿಲೋತ್ಸವ ಹಾಗೂ ಆರತಿ ಸೇವೆಗಳ ನಂತರ ಕೋಸಂಬರಿ ಪ್ರಸಾದ, ಪಾನಕ ವಿತರಿಸಿ ಭಕ್ತರು ಸಂಭ್ರಮಿಸಿದರು.

ದೇವಸ್ಥಾನದ ಅರ್ಚಕ ಈರಯ್ಯಸ್ವಾಮಿ ಶ್ರೀರಾಮ ಸೇವೆ ಹಾಗೂ ಆರಾಧನೆಯಿಂದ ಎಲ್ಲವೂ ಮಂಗಲಮಯವಾಗುತ್ತವೆ ಎಂದರು.

ಆನಂದಪ್ಪ ಚೀನಿವಾಲರ, ಸಂಗನಬಸ್ಸು ಚಟ್ಟೇರ, ನರಸಿಂಹ ದೇಸಾಯಿ, ಪಿಡಿಒ ಹಣಮಂತ ಹೆಗ್ಗೂರ, ಮಲ್ಲು ಮಸ್ತೇಕ, ಶಿವಾಜಿ ನಾಯ್ಡು, ಮಲ್ಲು ತಂಗಡಗಿ, ಗಜೇಂದ್ರ, ಸಂಗು ಇದ್ದರು.

ಸುರಪುರ: ಶ್ರದ್ಧಾ, ಭಕ್ತಿಯ ರಾಮನವಮಿ

ಸುರಪುರ: ‘ಭಗವಂತನ ದಶಾವತಾರಗಳಲ್ಲಿ ತ್ರೇತಾ ಯುಗದ ಶ್ರೀ ರಾಮಚಂದ್ರನ ಅವತಾರ ಪ್ರಮುಖವಾದದ್ದು. ಶ್ರೇಷ್ಠ ಬದುಕು ನಡೆಸಿದ ಶ್ರೀರಾಮ ಮರ್ಯಾದಾ ಪುರುಷೋತ್ತಮ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ’ ಎಂದು ನರಸಿಂಹ ಭಂಡಿ ಹೇಳಿದರು.

ನಗರದ ಪುರಾತನ ರಾಮದೇವರ ಗುಡಿಯಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ರೀರಾಮನ ಆದರ್ಶ ಗುಣಗಳು ನಮಗೆಲ್ಲ ಪ್ರೇರಕವಾದವು. ಅವರ ಜೀವನದ ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ. ಶ್ರೀರಾಮನನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ’
ಎಂದರು.

ಬೆಳಿಗ್ಗೆ ಸುಪ್ರಭಾತ, ವಿಶೇಷ ಅಲಂಕಾರ, ಪೂಜೆ ನಡೆಯಿತು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯಿಂದ ವಿಶೇಷ ಭಜನೆ ನಡೆಯಿತು.

ಸ್ಥಳೀಯ ಕಲಾವಿದರಾದ ಮೋಹನ ಮಾಳದಕರ, ಪ್ರಾಣೇಶರಾವ ಕುಲಕರ್ಣಿ, ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಮಹಾಂತೇಶ ಶಹಾಪುರಕರ, ರಮೇಶ ಉಳ್ಳೆಸುಗೂರ, ರಾಘವೇಂದ್ರ ಭಕ್ರಿ ಇದ್ದರು.

ಅರ್ಚಕರಾದ ರಾಮಚಂದ್ರ ಪುರೋಹಿತ, ಪ್ರಶಾಂತ ಪುರೋಹಿತ, ಪ್ರಸಾದ, ಪ್ರಮೋದ, ಸಂಪತ್ ಪೂಜಾ ಕೈಂಕರ್ಯ ಕೈಗೊಂಡರು.

ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಪ್ರಸಾದ ವಿತರಿಸಿದರು. ರಾಜಾ ಪಿಡ್ಡನಾಯಕ, ಸಚಿನ್ ನಾಯಕ, ಗುರುನಾಥರಡ್ಡಿ ಶೀಲವಂತ, ರಾಜೇಶಭಟ್ಟ ಕನಕಗಿರಿ, ಗಣಪತರಾವ ಕುಲಕರ್ಣಿ, ವಿನಾಯಕ ಜೋಷಿ, ರಘುಪತಿ ಪುರೋಹಿತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು