ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯ ತಾಣ ಮುಷ್ಠಹಳ್ಳಿ ಗೂಳಿಬಸವೇಶ್ವರ ದೇವಸ್ಥಾನ

Last Updated 20 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಕೃಷ್ಣೆಯ ತಟದಲ್ಲಿ ಇರುವ ಮುಷ್ಠಹಳ್ಳಿ ಗ್ರಾಮ ಗೂಳಿಬಸವೇಶ್ವರ ದೇವಸ್ಥಾನದಿಂದ ಖ್ಯಾತಿ ಪಡೆದಿದೆ. ಧಾರ್ಮಿಕತೆ ಹಾಸುಹೊಕ್ಕಾಗಿರುವ ಈ ಊರು ಸೌಹಾರ್ದತೆಯ ನೆಲೆ ಬೀಡಾಗಿದೆ.

ಜಾತಿ ಬೇಧವಿಲ್ಲದೆ ಎಲ್ಲರೂ ಗೂಳಿ ಬಸವೇಶ್ವರನಿಗೆ ನಡೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಾವು ಅಪಾರವಾಗಿ ನಂಬಿದ ಆ ದೇವನ ಮೇಲೆ ಅನನ್ಯ ಶ್ರದ್ಧೆ ಹೊಂದಿದ್ದಾರೆ.

ಸುಮಾರು 150 ವರ್ಷಗಳ ಹಿಂದೆ ದೇವದುರ್ಗ ತಾಲ್ಲೂಕಿನ ಜಾಗಟಗಲ್ ಮೇಗಿನಮಠದ ದೊಡ್ಡರಾಚಯ್ಯಪ್ಪ ತಾತಾ ಸಂಚಾರ ಮಾಡುತ್ತ ಈ ಗ್ರಾಮಕ್ಕೆ ಬರುತ್ತಾರೆ. ಇಲ್ಲಿ ಯಾವುದೋ ದೈವ ಶಕ್ತಿ ತಮ್ಮನ್ನು ಸೆಳೆಯುತ್ತಿದೆ ಎಂದು ಎರಡು ಮೂರು ದಿನ ಗ್ರಾಮದಲ್ಲೆ ನೆಲೆಸುತ್ತಾರೆ.

ಶರಣ ದೊಡ್ಡರಾಚಯ್ಯಪ್ಪ ತಾತಾನವರು ಗ್ರಾಮಸ್ಥರನ್ನು ಕರೆದು, ‘ನನಗೆ ಉಂಟಾದ ದೇವವಾಣಿಯಂತೆ ನಿಮ್ಮ ಊರಿನಲ್ಲಿ ಇರುವ ಗೂಳಿ ಶಿವನ ನಂದಿಯ ಪ್ರತಿರೂಪವಾಗಿದೆ’ ಎಂದು ತಿಳಿಸುತ್ತಾರೆ.

‘ಕೆಲ ದಿನಗಳಲ್ಲಿ ಅದು ಬೇರೆ ಸೀಮೆಯಲ್ಲಿ ಅವಸಾನವಾಗುತ್ತದೆ. ನಿಮ್ಮ ಊರಿನಲ್ಲಿ ಅದರ ಸಮಾಧಿ ಮಾಡಿ. ದೇಗುಲ ನಿರ್ಮಿಸಿ ನಿತ್ಯವೂ ಪೂಜೆ ಸಲ್ಲಿಸಿ. ನಿಮಗೆ ಒಳಿತಾಗುತ್ತದೆ. ಗ್ರಾಮ ಧಾರ್ಮಿಕ ಕ್ಷೇತ್ರವಾಗುತ್ತದೆ’ ಎಂದು ಸಾರುತ್ತಾರೆ.

ತಾತನವರ ಹೇಳಿಕೆಯಂತೆ ಕೆಲ ದಿನಗಳಲ್ಲಿ ಗೂಳಿ ಪಕ್ಕದ ಊರಿನಲ್ಲಿ ಮರಣ ಹೊಂದುತ್ತದೆ. ಗ್ರಾಮಸ್ಥರು ಅದನ್ನು ತಾತಾನವರು ಹೇಳಿದಂತೆ ಗ್ರಾಮದಲ್ಲಿ ಹೂಳುತ್ತಾರೆ. ಚಿಕ್ಕ ದೇಗುಲ ನಿರ್ಮಿಸಿ, ನಿತ್ಯವೂ ಭಜನೆ, ಪೂಜೆ ನಡೆಸುತ್ತಾ ಬಂದಿದ್ದಾರೆ.

ಗೂಳಿ ಬಸವೇಶ್ವರ ಜನರ ಕಷ್ಟ, ಕಾರ್ಪಣ್ಯ ನಿವಾರಿಸುತ್ತಾನೆ. ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿ, ಆರೋಗ್ಯ ಭಾಗ್ಯ, ನೆಮ್ಮದಿ, ಸಮೃದ್ಧಿ ಕರುಣಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಪ್ರತಿ ಅಮಾವಾಸ್ಯೆಯಂದು ವಿವಿಧೆಡೆಯಿಂದ ಜನರು ಬಂದು ಆಶೀರ್ವಾದ ಪಡೆಯುತ್ತಿದ್ದಾರೆ.

ಚಿಕ್ಕದಾಗಿದ್ದ ದೇವಸ್ಥಾನ ಈಗ ಭವ್ಯವಾಗಿ ಅರಳಿ ನಿಂತಿದೆ. ಲಕ್ಷಾಂತರ ವೆಚ್ಚದಲ್ಲಿ ಕಲ್ಲು ಕಂಬಗಳ ದೊಡ್ಡ ದೇಗುಲ ನಿರ್ಮಿಸಲಾಗಿದೆ. ಆಕರ್ಷಕ ನವರಂಗ, ಭಕ್ತಿ ಮೂಡಿಸುವ ಗರ್ಭಗುಡಿ ಆಕರ್ಷಿತವಾಗಿವೆ. ಲಕ್ಷಾಂತರ ಖರ್ಚು ಮಾಡಿ ಈಗ ನೂತನ ರಥ ಮಾಡಿಸಲಾಗಿದೆ. ನೂತನ ಬಸವಣ್ಣನ ಮೂರ್ತಿ ಕೆತ್ತಿಸಲಾಗಿದೆ. ಗ್ರಾನೈಟ್ ಹಾಸು, ಭಕ್ತರಿಗೆ ತಂಗಲು ಭವನ ನಿರ್ಮಿಸಲಾಗಿದೆ. ನಿತ್ಯವೂ ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಅವಿನಾಭಾವ ಸಂಬಂಧ: ತಮ್ಮನ್ನು ಹರಸಿದ ಜಾಗಟಗಲ್ ಮಠದೊಂದಿಗೆ ಮುಷ್ಠಹಳ್ಳಿ ಗ್ರಾಮಸ್ಥರು ಶತಮಾನದಿಂದ ಅವಿನಾಭಾವ ಸಂಬಂಧ ಬೆಸೆದುಕೊಂಡಿದ್ದಾರೆ. ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮ ಇದ್ದರೂ ಜಾಗಟ್‍ಗಲ್ ತಾತನವರ ಅಶೀರ್ವಾದ ಇಲ್ಲದೆ ಮಾಡುವುದಿಲ್ಲ. ವರ್ಷಕ್ಕೆ 3 ಬಾರಿ ಜಾಗಟ್‍ಗಲ್ಲಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಭಾಗವಹಿಸಿ ಸೇವೆ ಸಲ್ಲಿಸುತ್ತಾರೆ.

*****

ಮುಷ್ಠಹಳ್ಳಿ ಗ್ರಾಮಸ್ಥರು ನಮ್ಮ ಮಠದ ಅನನ್ಯ ಭಕ್ತರಾಗಿದ್ದಾರೆ. ನಮ್ಮ ಹಿರಿಯರಿಂದಲೂ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಅಣತಿಯಂತೆ ನಡೆಯುತ್ತವೆ

- ರಾಚಯ್ಯಪ್ಪ ತಾತಾ, ಮೇಗಿನಮಠ, ಜಾಗಟಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT