ಮಂಗಳವಾರ, ಫೆಬ್ರವರಿ 7, 2023
27 °C
ಕೆಂಭಾವಿ ಪಟ್ಟಣದ ನಿವಾಸಿಗಳಿಂದ ತಹಶೀಲ್ದಾರ್‌ಗೆ ಮನವಿ

‘ಮತದಾರರ ಪಟ್ಟಿ ಗೊಂದಲ ನಿವಾರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮತದಾರರ ಯಾದಿಯಲ್ಲಿ ಗೊಂದಲ ನಿವಾರಣೆ ಮಾಡಿ ನಮ್ಮ ಮನೆಯ ಹತ್ತಿರ ಇರುವ ಮತಗಟ್ಟೆಯಲ್ಲಿಯೇ ಮತದಾನ ಮಾಡುವಂತೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೆಂಭಾವಿ ಪಟ್ಟಣದ ನಿವಾಸಿಗಳು ತಹಶೀಲ್ದಾರ್‌ಗೆ ಮನವಿ ಮಾಡಿದರು.

ಪಟ್ಟಣದ ವಿವಿಧ ಮತಗಟ್ಟೆಗಳಿಗೆ ಈಚೆಗೆ ಭೇಟಿ ನೀಡಿದ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಮಾಡಿದ ಮತದಾರರು ಮತ್ತು ಮುಖಂಡರು, ಹಲವು ಮತಗಟ್ಟೆಗಳು ದೂರವಾಗುವ ಪ್ರಯುಕ್ತ ನಾವು ಮತದಾನದಿಂದ ವಂಚಿತರಾಗುತ್ತಿದೇವೆ ಎಂದು ಪಟ್ಟಣದ ಕೆಂಚಮ್ಮ ದೇವಿ ಗುಡಿ ಹತ್ತಿರ ಇರುವ ಹರಿಜನ ಬಡಾವಣೆಯಲ್ಲಿ ಮತದಾರರು ಅಳಲು ತೋಡಿಕೊಂಡರು.

ಮತಗಟ್ಟೆ ಸಂಖ್ಯೆ ನಂ. 94, 95, 96, 97 ಹಾಗೂ 98 ಸೇರಿದಂತೆ 107,108 ಮತಗಟ್ಟೆಗಳಲ್ಲಿನ ಮತದಾರರರು ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮತದಾರರ ಯಾದಿಯಲ್ಲಿ ಬಹಳಷ್ಟು ಗೊಂದಲವಿದೆ. ನಮ್ಮ ಮನೆ ಇರುವುದು 1ನೇ ಮತಗಟ್ಟೆಯಲ್ಲಿ. ನಾವು ಮತ ಹಾಕಬೇಕಾದದ್ದು ಮತ್ತೊಂದು ಮತಗಟ್ಟೆಯಲ್ಲಿ. ಅಲ್ಲಿಯ ಮತದಾರರು ಇಲ್ಲಿಗೆ ಬಂದು ಮತದಾನ ಮಾಡಬೇಕಾಗಿದೆ. ಇದರಿಂದ ಮತದಾನದ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗುವ ಸಂಭವವಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತದಾರರಿಗೆ ಚುನಾವಣಾ ಗುರುತಿನ ಚೀಟಿಗಳು ಬಂದು ತಲುಪದ ಕಾರಣ ಮತದಾನವಾಗಿಲ್ಲ. ಮತದಾನಕ್ಕೆ ಹೋಗುವುದು ಇಲ್ಲ. ಅದೇ ಪುರಸಭೆ ಚುನಾವಣೆಯಲ್ಲಿ ನಮ್ಮ ಮತದಾನದ ಅವಶ್ಯಕತೆ ಇರುತ್ತದೆ. ಆ ಸಂದರ್ಭದಲ್ಲಿ ಸರಿಯಾಗಿ ನಮ್ಮ ಮನೆ ಹತ್ತಿರ ಇರುವ ಮತಗಟ್ಟೆಗೆ ಅಲ್ಲಿಯೇ ನಮ್ಮ ಹೆಸರು ಬರುವಂತೆ ಮಾಡಿ ಮತದಾನ ಮಾಡಿಸಿಕೊಳ್ಳುತ್ತಾರೆ ಎಂದರು.

ಅದೇ ಪ್ರಕಾರವೇ ಮತದಾರ ಪಟ್ಟಿ ಸಿದ್ಧಪಡಿಸಬೇಕು. ಪತಿಯ ಹೆಸರು ಕ್ರಮ ಸಂಖ್ಯೆ ಒಂದರಲ್ಲಿದ್ದರೆ, ಪತ್ನಿಯ ಹೆಸರು ಕ್ರಮ ಸಂಖ್ಯೆ 300ರಲ್ಲಿ ಇರುತ್ತದೆ. ಇದು ಸರಿಯಲ್ಲ.ಈ ಕುರಿತು ನಾವು ಮತಗಟ್ಟೆ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಇದನ್ನು ಸರಿಪಡಿಸಲು ಅವರಿಂದ ಇನ್ನೂವರೆಗೂ ಆಗಿಲ್ಲ ಎಂದರು.

ಕೆಂಗೇರಿಯ ಸುಡುಗಾಡ ಸಿದ್ದರ ಬಡಾವಣೆಯಲ್ಲಿ ನಮ್ಮ ಮನೆಯಿದೆ. ಎಸ್‌ಬಿಸಿ ಕ್ಯಾಂಪಿನಲ್ಲಿ ನಾವು ಮತದಾನ ಮಾಡಬೇಕಿದೆ. 2 ಕಿಲೋಮೀಟರ್ ಅಂತರಕ್ಕೆ ಹೋಗಿ ಮತದಾನ ಮಾಡಬೇಕು. ಮನೆ ಇರುವುದು ಆಶ್ರಯ ಕಾಲೊನಿಯಲ್ಲಿ, ಸಂಜೀವನಗರಕ್ಕೆ ಹೋಗಿ ಮತದಾನ ಮಾಡಬೇಕು. ಅಲ್ಲಿ ಮತಗಟ್ಟೆ ಸ್ಥಾಪನೆ ಮಾಡಲು ಬೇಕಾಗುವಷ್ಟು ಮತದಾರರು ಇದ್ದರೂ ಅಲ್ಲಿ ಮತಗಟ್ಟೆ ಸ್ಥಾಪನೆ ಮಾಡಲು ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ. ಅದರಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವೆಂದು ವಾಸ್ತವ ಸಮಸ್ಯೆಯನ್ನು ತಹಶೀಲ್ದಾರ್ ಗಮನಕ್ಕೆ ತಂದರು.

ಮತದಾರರ ಯಾದಿಯಲ್ಲಿ ಮೃತಪಟ್ಟವರು, ವರ್ಗಾವಣೆಯಾಗಿ ಹೋದವರು ಅವರ ಹೆಸರುಗಳು ಹಾಗೆ ಮುಂದುವರಿದಿದೆ. ಇವುಗಳನ್ನು ತೆಗೆದು ಹಾಕಬೇಕು. ಕೆಂಭಾವಿ ಪಟ್ಟಣದಲ್ಲಿ ಜನಸಂಖ್ಯೆಗಿಂತ ಮತದಾರರೇ ಜಾಸ್ತಿ ಇದ್ದಾರೆ. ಮತದಾನ ಪ್ರಮಾಣ ಜಾಸ್ತಿಯಾಗುವ ಸಲುವಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೆ, ಅದು ಇಲ್ಲಿ ಅದು ಜಾರಿ ಬರುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಖುದ್ದು ಪರಿಶೀಲನೆ ಮಾಡಿ, ಇಲ್ಲಿ ಮತದಾನ ಪ್ರಮಾಣ ಜಾಸ್ತಿಯಾಗುವಂತೆ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದರು.

ಉಪತಹಶೀಲ್ದಾರ್ ಅವಿನಾಶ, ಕಂದಾಯ ನಿರೀಕ್ಷಕ ರಾಜಾಸಾಬ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು