ಭಾನುವಾರ, ಆಗಸ್ಟ್ 14, 2022
26 °C
ರೈತ-– ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಸಮಿತಿಯಿಂದ ಧರಣಿ

ರೈತ, ಜನ ವಿರೋಧಿ ತಿದ್ದುಪಡಿ ಕಾಯ್ದೆ ಹಿಂಪಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರೈತ ಹಾಗೂ ಜನ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಖಂಡಿಸಿ ಇಲ್ಲಿನ ರೈತ- ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಸಮಿತಿ ವತಿಯಿಂದ ನಗರದ ಹಳೆ ಬಸ್‌ ನಿಲ್ದಾಣದ ಬಳಿ ಪ್ರತಿಭಟನಾ ಧರಣಿ ನಡೆಯಿತು.

ಜಿಲ್ಲಾ ಘಟಕ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ, ಎಐಕೆಕೆಎಂಎಸ್ ಕರೆ ನೀಡಿರುವ ದೇಶವ್ಯಾಪಿ ‘ಅಖಿಲ ಭಾರತ ಐಕ್ಯತಾ ದಿನ’ದ ಅಂಗವಾಗಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಮಡಿಲಿಗೆ ಹಾಕುವ ನೂತನ ಕೃಷಿ ನೀತಿಗಳನ್ನು ಧಿಕ್ಕರಿಸಬೇಕು ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಗಳಿಂದ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ಬಂಡವಾಳಶಾಹಿಗಳ ನಿಷ್ಠಾವಂತ ಸೇವಕರಾಗಿ ಅಧಿಕಾರ ನಡೆಸಿದ್ದಾರೆ.  ಕೇಂದ್ರದ ಬಿಜೆಪಿ ಸರ್ಕಾರ ಲಾಕ್‍ಡೌನ್ ಅವಧಿಯನ್ನು ದುರುಪಯೋಗ ಪಡಿಸಿಕೊಂಡು ಕೃಷಿಗೆ ಸಂಬಂಧಿಸಿದ್ದ ಎಲ್ಲಾ ಕಾನೂನುಗಳನ್ನು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿಗೊಳಿಸಿ ರೈತರ ಮರಣಶಾಸನವನ್ನು ಬರೆಯಲು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಕಳೆದ ಒಂದು ವಾರದಿಂದ ದೇಶದ ರಾಜಧಾನಿಗೆ ಹೊರಟಿದ್ದ ಲಕ್ಷೋಪ ಲಕ್ಷ ರೈತರನ್ನು ತಡೆದಿದ್ದಾರೆ. ರಸ್ತೆಗಳನ್ನೇ ಅಗೆದು, ಬ್ಯಾರಿಕೇಡ್‌ಗಳನ್ನು ಹಾಕಿ, ಅವರ ಮೇಲೆ ಜಲಫಿರಂಗಿ, ಗುಂಡಿನ ಮಳೆಗೆರೆದು ತಡೆಹಿಡಿಯುವ ಪ್ರಯತ್ನ ಮಾಡಿರುವುದು ಖಂಡನೀಯ. ಇಂಥ ಕುಟೀಲ ಪ್ರಯತ್ನವನ್ನು ಸರ್ಕಾರ ನಿಲ್ಲಿಸಬೇಕು. ಕೂಡಲೇ ರೈತರ ಸಮಸ್ಯೆಗಳನ್ನು ಚರ್ಚಿಸಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೈತರ ಹೋರಾಟವನ್ನು ಬೆಂಬಲಿಸಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಎಚ್.ಪಿ.ಸೈದಪ್ಪ ಮಾತನಾಡಿದರು.

ಈ ವೇಳೆ ಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ, ಜಮಾಲ್‍ಸಾಬ್, ಗುರಪ್ಪಗೌಡ, ಸಿದ್ದಣ್ಣ ಗೂಗಲ್, ದೇವಿಂದ್ರಪ್ಪ ಗೆಂಜಲಬಾವಿ, ಶಿವರಾಜ, ವೆಂಕಟೇಶ, ಅಶೋಕ, ಯಲ್ಲಪ್ಪ, ಮೋನಪ್ಪ, ಸಾಬಣ್ಣ, ಹಣಮಂತ, ಸೂರಪ್ಪ ಸೇರಿದಂತೆ ರೈತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು