ಶನಿವಾರ, ಮಾರ್ಚ್ 25, 2023
26 °C
‘₹ 500 ಕೋಟಿ ಅನುದಾನಕ್ಕೆ ಮನವಿ’

ಸಫಾಯಿ ಕರ್ಮಚಾರಿ ಸಮುದಾಯಕ್ಕೆ ಸೌಲಭ್ಯ ತಲುಪಿಸಲು ಪ್ರಯತ್ನ: ಹನುಮಂತಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಸಫಾಯಿ ಕರ್ಮಚಾರಿ ನಿಗಮದಲ್ಲಿ ₹ 80 ಕೋಟಿ ಅನುದಾನ ಲಭ್ಯವಿದ್ದು, ಎಲ್ಲಾ ಜಿಲ್ಲೆಗಳಿಗೂ ವಿತರಿಸಲಾಗುವುದು‘ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

‘ಸಫಾಯಿ ಕರ್ಮಚಾರಿಗಳಿಗೆ ಗೃಹಭಾಗ್ಯ, ಉದ್ಯೋಗಾವಕಾಶ, ಗುಣಮಟ್ಟ ಆಹಾರ ಧಾನ್ಯಗಳ ವಿತರಣೆ, ಆರೋಗ್ಯ ಹೀಗೆ ಹಲವಾರು ಯೋಜನೆಗಳನ್ನು ಕಲ್ಪಿಸಲು ₹ 500 ಕೋಟಿ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಹಿಂದೆ 700 ಜನರಿರುವ ಸ್ಥಳಕ್ಕೆ ಒಬ್ಬ ಪೌರ ಕಾರ್ಮಿಕನನ್ನು ನೇಮಿಸುತ್ತಿದ್ದರು. 100 ಜನಕ್ಕೆ ಒಬ್ಬ ಪೌರಕಾರ್ಮಿಕನನ್ನು ನೇಮಕ ಮಾಡಿಕೊಳ್ಳಲು ಸ್ಥಳೀಯ ಮಟ್ಟದ ಅಧಿಕಾರಿಗಳೊಡನೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸಫಾಯಿ ಕರ್ಮಚಾರಿ ಸಮುದಾಯ ವರ್ಗದವರನ್ನು ಮುಖ್ಯ ವಾಹಿನಿಗೆ ತರುವುದರ ಮೂಲಕ ಸರ್ಕಾರದಿಂದ ಸಿಗುವ  ಸೌಲಭ್ಯಗಳನ್ನು ತಲುಪಿಸಲಾಗುವುದು ಎಂದರು.

‘ರಾಜ್ಯದ 23 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷ ಈ ಸಮುದಾ ಯದವರೂ ಇದ್ದಾರೆ. ಜಿಲ್ಲೆಯಲ್ಲಿ 230 ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಎಲ್ಲಾ ಯೋಜನೆಗಳು ಸಮರ್ಪಕವಾಗಿ ದೊರಕಿಸಲು ಪ್ರಯತ್ನಿಸ ಲಾಗುವುದು‘ ಎಂದು ಹೇಳಿದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಕಳೆದ 5 ವರ್ಷಗಳಿಂದ ಆರಂಭವಾಗಿದ್ದರೂ ಯಾವುದೇ ಅಭಿವೃದ್ಧಿಯ ಯೋಜನೆಗಳ ಕಾರ್ಯಗಳು ಸಮರ್ಪಕ ಅನುಷ್ಠಾನ ಆಗಿಲ್ಲ. ನಿಗಮದ ಅಧ್ಯಕ್ಷನಾಗಿ 7 ತಿಂಗಳು ಕಳೆದಿವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಯಾವ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದರು.

ಸಫಾಯಿ ಕರ್ಮಚಾರಿ ಸಮುದಾಯ ಆರ್ಥಿಕತೆಯಿಂದ ಕುಂಠಿತರಾಗಿದ್ದಾರೆ. ಅವರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುವುದು ಅನಿವಾರ್ಯವಾಗಿದೆ. ಸ್ವಯಂ ಸೇವಾ ಉದ್ಯೋಗ, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಈ ವರ್ಗದವರು ಬೇಡಿಕೆಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ವಿತರಿಸುವುದಾಗಿ ತಿಳಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಅಂಬೇಡ್ಕರ್‌ ನಿಗಮದ ಅಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು