ಗುರುವಾರ , ಆಗಸ್ಟ್ 22, 2019
26 °C

ಉದ್ಯೋಗ ಖಾತ್ರಿ ಹಣ ಬಿಡುಗಡೆಗೆ ಮನವಿ

Published:
Updated:
Prajavani

ಯಾದಗಿರಿ: ತಾಲ್ಲೂಕಿನ ಚಾಮನಾಳ ಗ್ರಾಮದಲ್ಲಿ ಎರಡು ತಿಂಗಳಿನಿಂದ ಉದ್ಯೋಗ ಖಾತ್ರಿ ಕೂಲಿ ಹಣ ನೀಡದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಬಿದ್ದುಹೋಗಿ ವರ್ಷವಾದರೂ ದುರಸ್ತಿ ಮಾಡಿಲ್ಲ. ಆರ್.ಓ.ಪ್ಲಾಂಟ್ ಸಿದ್ಧವಾಗಿ ವರ್ಷವಾಗಿದೆ. ಆದರೆ, ಜನರ ಬಳಕೆ ಮಾಡಲು ಅನುಕೂಲ ಕಲ್ಪಿಸಬೇಕು. ಗ್ರಾಮದಲ್ಲಿ ರಸ್ತೆ ಹಾಳಾಗಿವೆ. ಚರಂಡಿಗಳು ಒಡೆದು ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗ್ರಾಮ ಘಟಕದ ಅಧ್ಯಕ್ಷ ಮುದುಕಪ್ಪ ಚಾಮನಳ್ಳಿ ಮಾತನಾಡಿ, ‘ತಾಲ್ಲೂಕಿನ ಚಾಮನಳ್ಳಿ ಗ್ರಾಮದಲ್ಲಿ ಕೈಗೊಂಡ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳ ಪಾವತಿಸಿಲ್ಲ. ಇದರಿಂದ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ತಕ್ಷಣ ಕೂಲಿ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಅಬ್ದುಲ್ ರಹೆಮಾನ್‌, ರಮೇಶ ಹತ್ತಿಕುಣಿ, ಮಲ್ಲಪ್ಪ ಕೌಳೂರು, ಮಲ್ಲಿಕಾರ್ಜುನ ಹತ್ತಿಕುಣಿ, ಮರೆಮ್ಮ, ಮಹಾಲಿಂಗಮ್ಮ, ಭೀಮವ್ವ, ಶಾಂತಾ ಇದ್ದರು.
 

Post Comments (+)