ಸೋಮವಾರ, ಡಿಸೆಂಬರ್ 9, 2019
17 °C
ಸುರಪುರ: ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಿಂದ ಪ್ರತಿಭಟನೆ

ಖರೀದಿ ಕೇಂದ್ರಗಳನ್ನು ಆರಂಭಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ (ಯಾದಗಿರಿ):  ವಿವಿಧ ಬೆಳೆಗಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮುಖಂಡ ಚನ್ನಪ್ಪ ಆನೆಗುಂದಿ ಮಾತನಾಡಿ, ‘ಸರ್ಕಾರಗಳು ರೈತರ ಕಣ್ಣೀರನ್ನು ಒರೆಸಲು ಮುಂದಾಗುತ್ತಿಲ್ಲ. ಸಾಲಮನ್ನಾ ಮಾಡಿದರೂ ಬ್ಯಾಂಕ್‌ಗಳು ನೋಟೀಸ್ ನೀಡಿ ಜಮೀನು ಹರಾಜು ಹಾಕಲು ಮುಂದಾಗುತ್ತಿದ್ದಾರೆ ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉಪಕರಣಗಳನ್ನು ಸಾಹುಕಾರರಿಂದ ಶೇಕಡ 5ರ ಬಡ್ಡಿದರದಲ್ಲಿ ಸಾಲ ತಂದು ಬೆಳೆ ಬೆಳೆದಿದ್ದಾರೆ. ಆದರೆ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯದೆ ದಲ್ಲಾಳಿಗಳ ಹೇಳಿದ ಬೆಲೆಗೆ ಮಾರಾಟ ಮಾಡುವಂತಾಗಿದೆ ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

‘ಸರ್ಕಾರ ರೈತರ ನೆರವಿಗೆ ಧಾವಿಸಿ ತೊಗರಿ, ಭತ್ತ, ಹತ್ತಿ, ಶೇಂಗಾ, ಖರೀದಿ ಕೇಂದ್ರಗಳನ್ನು ತೆರೆದು ಬೆಳೆದಿರುವ ಬೆಳೆಯನ್ನು ಷರತ್ತಿಲ್ಲದೇ ಖರೀದಿಸಬೇಕು, ಡಾ.ಸ್ವಾಮಿನಾಥ ವರದಿ ಜಾರಿಗೆ ತಂದು ಪ್ರತಿ ಕ್ವಿಂಟಲ್ ಭತ್ತಕ್ಕೆ ₹3200, ತೊಗರಿಗೆ ₹7500, ಹತ್ತಿಗೆ ₹6900, ಶೇಂಗಾ ₹7000 ದರದಲ್ಲಿ ಖರೀದಿಸಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ‘ನೆರೆ ಹಾವಳಿಯಿಂದ ಹಾನಿಯಾಗಿರುವ ಸುರಪುರ, ಶಹಾಪುರ, ಯಾದಗಿರಿ, ವಡಗೇರಾ ತಾಲ್ಲೂಕಿನ ರೈತರ ಪ್ರತಿ ಎಕರೆಗೆ ₹50 ಸಾವಿರ ಹಣ ಪರಿಹಾರ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು. ಹಿಂದಿನ ಸರ್ಕಾರ ₹2 ಲಕ್ಷ ವರೆಗಿನ ಸಾಲ ಮನ್ನಾ ಘೋಷಣೆಯನ್ನು ಜಾರಿಗೆ ತಂದು ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರಿಗೆ ಎಕರೆಗೆ ₹1 ಲಕ್ಷ ಬೆಳೆ ಸಾಲ ನೀಡಬೇಕು. ಭತ್ತದ ರಾಶಿ ಮಿಷನ್ ಪ್ರತಿ ಗಂಟೆಗೆ ₹2000  ಬದಲಾಗಿ ₹2800  ಸುಲಿಗೆ ಮಾಡುತ್ತಿರುವುದನ್ನು ತಡೆಗಟ್ಟಬೇಕು. ಹುಣಸಗಿಯಿಂದ ದೇವಪುರ ಕ್ರಾಸ್‍ವರೆಗಿನ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕು. ಈ ರಸ್ತೆಯಲ್ಲಿರುವ ರೈತರ ಜಮೀನುಗಳಿಗೆ ಪ್ರತಿ ಎಕರೆಗೆ ₹15 ಲಕ್ಷ ಹಣ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.  ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಎಂ. ಸಾಗರ, ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಣ್ಣ ದೊರೆ, ಮಲ್ಲಣ್ಣಗೌಡ ಪಾಟೀಲ, ರಫೀಕ್, ಚಂದ್ರಗೌಡ ಚಂದಲಾಪುರ, ನಿಂಗಣ್ಣ ಕನಾಳಿ, ರಾಮನಗೌಡ ಇತರರು ಇದ್ದರು.

ಪ್ರತಿಕ್ರಿಯಿಸಿ (+)