ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂಡಾದ ನಿವಾಸಿಗಳು ಸಾಮರಸ್ಯದಿಂದ ಬದುಕಿ: ಹಂಪಣ್ಣ ಸಜ್ಜನ

ಚಾಮನಳ್ಳಿ ತಾಂಡಾದಲ್ಲಿ ಗ್ರಾಮಸಭೆ: ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಸಲಹೆ
Published 29 ಜೂನ್ 2024, 15:43 IST
Last Updated 29 ಜೂನ್ 2024, 15:43 IST
ಅಕ್ಷರ ಗಾತ್ರ

ಚಾಮನಹಳ್ಳಿ (ಯರಗೋಳ): ‘ತಾಂಡಾದ ನಿವಾಸಿಗಳು ಪರಿಶ್ರಮ ಜೀವಿಗಳು. ಸಣ್ಣ-ಪುಟ್ಟ ಕಾರಣಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಮರಸ್ಯದಿಂದ ಬದುಕಬೇಕು’ ಎಂದು ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಸಲಹೆ ನೀಡಿದರು.

ಬಂದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಳ್ಳಿ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಗ್ರಾಮಸಭೆಯಲ್ಲಿ ಮಾತನಾಡಿದ ಅವರು,‘ಈಗಾಗಲೇ ರಾಜ್ಯ ಸರ್ಕಾರ ಅತಿ ಹೆಚ್ಚು ಜನವಸತಿ ಇರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ’ ಎಂದು ಹೇಳಿದರು.

ಆದ ಕಾರಣ ಇಲ್ಲಿನ ಜನರ ಅಭಿಪ್ರಾಯ ಪಡೆದು ಈ ತಾಂಡಾಕ್ಕೆ ಭವಾನಿನಗರ ಎಂದು ಹೆಸರಿಡಲು ಗ್ರಾಮಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕೆಲ ದಿನಗಳ ನಂತರ ಇಲ್ಲಿನ ನಿವಾಸಿಗಳ ಇನ್ನೊಬ್ಬ ನಾಯಕರ ಗುಂಪು ಯಾರಿಗೂ ಮಾಹಿತಿ ನೀಡದೆ ಗ್ರಾಮಸಭೆ ನಡೆಸಿ ಪರಶುರಾಮ ನಗರ ಎಂಬ ಪ್ರಸ್ತಾವ ಮಂಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಂಡಾದ ಜನರು ಮತ್ತೊಮ್ಮೆ ಚರ್ಚಿಸಿ ಭವಾನಿ ನಗರ ಹಾಗೂ ಪರಶುರಾಮ ನಗರ ಹೆಸರು ಬೇಡ. ಎಲ್ಲರೂ ಸೇರಿ ಮರಿಯಮ್ಮ ನಗರ ಎಂದು ಇಡೋಣ ಎಂದು ತೀರ್ಮಾನಿಸಿದರು. ನಂತರ ಗ್ರಾಮಸಭೆ ನಿಗದಿಪಡಿಸಿ ತಾಂಡಾಕ್ಕೆ ಬಂದು ಜನರ ಅಭಿಪ್ರಾಯ ಸಂಗ್ರಹಿಸಿ ಮರಿಯಮ್ಮ ನಗರ ಎಂಬ ಹೆಸರಿಡುವ ಪ್ರಸ್ತಾವ ಮಂಡಿಸಲಾಯಿತು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು ಎಂದು ಹೇಳಿದರು.

ನಂತರ ತಾಂಡಾದ ಅರ್ಜುನ ಚವ್ಹಾಣ ಎಂಬುವರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ಪರಿಣಾಮ ಇಂದು ಮತ್ತೊಮ್ಮೆ ಗ್ರಾಮಸಭೆ ನಡೆಸಲಾಗುತ್ತಿದೆ ಎಂದರು.

ನಿಮ್ಮೆಲ್ಲರಿಗೂ ಒಂದು ಗಂಟೆ ಸಮಯ ನೀಡುತ್ತವೆ. ಎಲ್ಲರೂ ಕೂಡಿ ಒಮ್ಮತದಿಂದ ಒಂದು ಹೆಸರನ್ನು ಪ್ರಸ್ತಾಪ ಮಾಡಿ ಎಂದು ತಿಳಿಸಿದರು. ಅದಕ್ಕೆ ಎರಡೂ ಗುಂಪುಗಳ ಜನರು ಒಪ್ಪಲಿಲ್ಲ. ಇದನ್ನು ಗಮನಿಸಿದ ಅವರು ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ಕೈ ಎತ್ತುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಸೂಚಿಸಿದರು.

ನಂತರ ಮರಿಯಮ್ಮ ನಗರ ಎನ್ನುವ ಹೆಸರಿಡುವ ಪ್ರಸ್ತಾವಕ್ಕೆ ಸಭೆಯಲ್ಲಿದ್ದ 126 ನಿವಾಸಿಗಳು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಅದರಂತೆ ಪರಶುರಾಮ ನಗರ ಎಂಬ ಹೆಸರಿಡುವ ಪ್ರಸ್ತಾವದ ಪರ 73 ಜನ ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ನಂತರ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಚರ್ಚಿಸಿ,‘ಮರಿಯಮ್ಮ ನಗರ ಎಂಬ ಹೆಸರಿಡುವ ಪ್ರಸ್ತಾವ ಅಂಗೀಕರಿಸಿ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಕಳುಹಿಸುತ್ತೇವೆ’ ಎಂದು ಪ್ರಕಟಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ, ಸಿಪಿಐ ಸುನೀಲ್ ಪಾಟೀಲ, ಪಿಎಸ್‌ಐ ಮಂಜನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಹತ್ತಿಕುಣಿ ಉಪತಹಶೀಲ್ದಾರ್ ಸೋಮನಾಥ, ಕಂದಾಯ ನಿರೀಕ್ಷಕ ರಾಜಶೇಖರ ಪಾಟೀಲ, ಪಂಚಾಯಿತಿ ಸದಸ್ಯೆ ಸಂಗೀತಾ ಸಂತೋಷ ಚವ್ಹಾಣ, ಮುಖಂಡರಾದ ರಾಮು ಚವ್ಹಾಣ, ಪರಶುರಾಮ ಚವ್ಹಾಣ, ಥಾರು ಚವ್ಹಾಣ, ಬಲರಾಮ ರಾಠೋಡ, ಸುರೇಶ ಚವ್ಹಾಣ, ರಾಜು ರಾಠೋಡ, ಕಿಶನ ರಾಠೋಡ, ಶಿವಾಜಿ ಚವ್ಹಾಣ, ಕೀರು ಚವ್ಹಾಣ ಸೇರಿದಂತೆ ತಾಂಡಾದ ನಿವಾಸಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT