ಶನಿವಾರ, ಮೇ 21, 2022
20 °C
ಗೋಜಿಮಾತ ದೇವಿಯ ಜಾತ್ರೆಗೆ ಆಗಮಿಸುತ್ತಿದ್ದವರು ಅಪಘಾತದಲ್ಲಿ ಮೃತ್ಯು

ಯಾದಗಿರಿ: ರಸ್ತೆ ಅಪಘಾತ; ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 150ರ ಮುದ್ನಾಳ ಕ್ರಾಸ್ ಬಳಿ ಶುಕ್ರವಾರ ಮಧ್ಯರಾತ್ರಿ ಲಾರಿ ಮತ್ತು ಆಟೊ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ಕೆಂಚಗಾರಹಳ್ಳಿ ನಿವಾಸಿ ಲಕ್ಷ್ಮಣ ನಾಮದೇವ (26), ಶಹಾಪುರ ತಾಲ್ಲೂಕಿನ ಹೋತಪೇಟ ತಾಂಡಾ ಜಯರಾಮ ರಾಮಚಂದ್ರ ಚವಾಣ್ (45), ಹೋರ್ತಿ ತಾಂಡಾದ ಎರಡು ವರ್ಷ ಐದು ತಿಂಗಳ ಮಗು ಕೃಷ್ಣ ಸಂತೋಷ ಸಾವನ್ನಪ್ಪಿದ್ದಾರೆ. ಪೂಜಾ ಸಂತೋಷ ರಾಥೋಡ್‌, ಸಂತೋಷ ರವಿದಾಸ್‌ ರಾಥೋಡ್‌, ರವಿದಾಸ್‌ ಖೀರು ರಾಥೋಡ್‌, ಅನ್ನಪೂರ್ಣ ರವಿದಾಸ್‌ ರಾಥೋಡ್‌, ಲಲಿತಾ ಮಾನಸಿಂಗ್‌ ಚವಾಣ್‌, ಕವಿತಾ ಜಯರಾಮ ಚವಾಣ್‌ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಶುಕ್ರವಾರ ರಾತ್ರಿ ಮುಂಬೈನಿಂದ ರೈಲು ಮೂಲಕ ಯಾದಗಿರಿಗೆ ಆಗಮಿಸಿದ ತಾಂಡಾ ನಿವಾಸಿಗಳು ಭಾನುವಾರ ತಾಂಡಾದಲ್ಲಿ ಜರುಗಲಿದ್ದ ಗೋಜಿಮಾತ ದೇವಿಯ ಜಾತ್ರೆಯ ಅಂಗವಾಗಿ ಗ್ರಾಮಕ್ಕೆ ತೆರಳುತ್ತಿದ್ದರು.

ಶುಕ್ರವಾರ ಮಧ್ಯರಾತ್ರಿ 12:30 ಕ್ಕೆ ವಾಡಿ ಕಡೆಯಿಂದ ಆಗಮಿಸುತ್ತಿದ್ದ ಲಾರಿ, ಯಾದಗಿರಿಯಿಂದ ಕಂಚಗಾರ ಹಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೊ ಪರಸ್ಪರ ಡಿಕ್ಕಿಯಾಗಿವೆ. ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.‌ ಗಾಯಾಳುಗಳು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಯಾದಗಿರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ 279, 337,338, 304 (A) ಮತ್ತು 187 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಂಡಾದಲ್ಲಿ ಕುಟುಂಬಸ್ಥರ ಆಕ್ರಂದನ: ಕಂಚಗಾರಳ್ಳಿ ತಾಂಡಾದಲ್ಲಿ ಭಾನುವಾರ ನಡೆಯಲಿದ್ದ ಜಾತ್ರೆಗೆ ಮುಂಬೈನಿಂದ ಯಾದಗಿರಿಗೆ ರೈಲಿಗೆ ಬಂದು ಅಲ್ಲಿಂದ ಆಟೊದಲ್ಲಿ ತಾಂಡಾಗೆ ತೆರಳುವ ವೇಳೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಜಾತ್ರೆಯ ಸಂಭ್ರಮದಲ್ಲಿದ್ದ ಜನರು, ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದು, ಸೂತಕದ ಛಾಯೆ ಆವರಿಸಿದೆ. ಖುಷಿಯಿಂದ ಜಾತ್ರೆಗೆ ಬರುತ್ತಿದ್ದವರು ಮಸಣ ಸೇರಿದ್ದು, ತಾಂಡಾದಲ್ಲಿ ಆಕ್ರಂದನ ಮನೆ ಮಾಡಿದೆ.

ಮುಂಬೈನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ಮಿಕ ಜಯರಾಮ, ಜಾತ್ರೆ ಮಾಡಲು ತಾಂಡಾಕ್ಕೆ ಬರುವುದು ವರ್ಷಕ್ಕೆ ಒಮ್ಮೆ ಮಾತ್ರ. ಖುಷಿಯಿಂದ ಹೆಂಡತಿ, ಮಕ್ಕಳೊಂದಿಗೆ ಶುಕ್ರವಾರ ತಡರಾತ್ರಿ ಯಾದಗಿರಿಗೆ ಬಂದಿದ್ದರು. ಪರಿಚಯದ ಲಕ್ಷ್ಮಣನ ಆಟೋದಲ್ಲಿ ತಮ್ಮ ತಾಂಡಾಕ್ಕೆ ತೆರಳುತ್ತಿದ್ದರು. ಮುದ್ನಾಳ ಕ್ರಾಸ್ ಹತ್ತಿರ ತೆರಳುತ್ತಿದ್ದ ಆಟೊಗೆ ಕಲಬುರಗಿ ಕಡೆಯಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಆಟೊ ಚಾಲಕ ಸೇರಿದಂತೆ 3 ಜನ ಮೃತಪಟ್ಟಿದ್ದಾರೆ.

‘ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯರಾಮ, ನುಜ್ಜುಗುಜ್ಜಾದ ಆಟೊದಲ್ಲಿ ಸಿಲುಕಿ ಪ್ರಾಣ ಬಿಟ್ಟ ಚಾಲಕ ಲಕ್ಷ್ಮಣ್, ಜಗತ್ತನೇ ಅರಿಯದ ಎರಡೂವರೆ ವರ್ಷದ ಪುಟ್ಟ ಕಂದ ಕೃಷ್ಣ.. ಈ ಎಲ್ಲ ದೃಶ್ಯಗಳನ್ನು ನೋಡಿ ಕಣ್ಣು ತೇವವಾದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.

‘ಲಾರಿ ಚಾಲಕನ ನಿರ್ಲಕ್ಷ್ಯತನವೇ ಅಪಘಾತಕ್ಕೆ ಕಾರಣ’ ಎಂದು ಲಾರಿ ಚಾಲಕನ ವಿರುದ್ಧ ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.