ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ಮಳೆಯಿಂದಾಗಿ ಸೋರುವ ಶಾಲೆ, ಮಕ್ಕಳಿಗೆ ಬಯಲಲ್ಲಿ ಪಾಠ!

10 ತರಗತಿ ಕೋಣೆಗಳಲ್ಲಿ 7 ಕೋಣೆಗಳ ಚಾವಣಿ ಶಿಥಿಲ
Published 30 ಜುಲೈ 2023, 6:30 IST
Last Updated 30 ಜುಲೈ 2023, 6:30 IST
ಅಕ್ಷರ ಗಾತ್ರ

ತೋಟೇಂದ್ರ ಎಸ್.ಮಾಕಲ್

ಯರಗೋಳ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 10 ಕೋಣೆಗಳಲ್ಲಿ 7 ಕೋಣೆಗಳ ಚಾವಣಿಗಳು ಸೋರುತ್ತಿದ್ದು, ವಿದ್ಯಾರ್ಥಿಗಳು ಬಯಲಲ್ಲಿ ಕುಳಿತು ಪಾಠ ಆಲಿಸುವಂತಾಗಿದೆ.

ನಿರಂತರ ಮಳೆ ಸುರಿದರೆ ಮಕ್ಕಳು ತರಗತಿ ಕೋಣೆ ಒಳಗೆ ಕೂಡಲು ಆಗುವುದಿಲ್ಲ ಮತ್ತು ಶಾಲಾ ಆವರಣದಲ್ಲೂ ಕೂಡ ಕುಳಿತುಕೊಳ್ಳಲು ಆಗುವುದಿಲ್ಲ. ಹೀಗಾಗಿ ಮಕ್ಕಳ ಕಲಿಕೆಗೆ ತೊಂದರೆ ಆಗಿದೆ. ಮುಖ್ಯಶಿಕ್ಷಕರ ಕಚೇರಿ ಕೋಣೆಯೂ ಸೋರುತ್ತಿದೆ. ಇದರಿಂದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಸಂರಕ್ಷಿಸುವುದು ಸವಾಲಿನ ಕೆಲಸವಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 580 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್‌ ಮಾಧ್ಯಮವನ್ನೂ ಶಾಲೆಯಲ್ಲಿ ಕಲಿಸಲಾಗುತ್ತಿದೆ. ಸುತ್ತಲಿನ ಥಾವರುನಾಯಕ ತಾಂಡಾ, ಅಡ್ಡಮಡ್ಡಿ ತಾಂಡಾ, ಲಿಂಗಸನಳ್ಳಿ ತಾಂಡಾ, ಖೇಮುನಾಯಕ ತಾಂಡಾ ಸೇರಿದಂತೆ ವಿವಿಧ ತಾಂಡಾಗಳ ವಿದ್ಯಾರ್ಥಿಗಳು ಯರಗೋಳ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

‘ನಾವು ಕುಳಿತುಕೊಳ್ಳುವ ಕಬ್ಬಿಣದ ಬೆಂಚ್‌ಗಳ ಮೇಲೆ ನೀರು ಬಿದ್ದು, ತುಕ್ಕು ಹಿಡಿದಿವೆ. ಮಳೆ ನಿಂತಾಗ ಅವುಗಳ ಮೇಲೆ ಕೂಡಲು ಹೋದರೆ ಸಮವಸ್ತ್ರ ಗಲೀಜಾಗುತ್ತವೆ. ಅಂಗಳದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವಾಗ ಹಂದಿ–ನಾಯಿಗಳ ಕಾಟ ಇರುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಗ್ರಾಮದ ಬಹುತೇಕ ಜನ ಕೂಲಿ ಮಾಡಲು ಮತ್ತು ಕೃಷಿ ಕಾಯಕಕ್ಕೆ ತೆರಳುತ್ತಾರೆ. ಮಕ್ಕಳಾದರೂ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಶಾಲೆಗೆ ಕಳುಹಿಸುತ್ತಿದ್ದೇವೆ. ಆದರೆ, ಶಾಲೆ ಕೋಣೆಗಳು ಸೋರುವುದರಿಂದ ನೆನೆದುಕೊಂಡು ಸಂಜೆ ಮನೆಗೆ ಬರುತ್ತಿದ್ದಾರೆ. ಇದರಿಂದ ಅವರಿಗೆ ಅನಾರೋಗ್ಯ ಕಾಡುತ್ತಿದೆ’ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕ ತರಗತಿ ಕೊಠಡಿಗಳನ್ನು ನಿರ್ಮಿಸಬೇಕು. ಶಿಥಿಲ ಕೊಠಡಿಗಳು ಬಿದ್ದು ಅನಾಹುತ ಸಂಭವಿಸುವ ಮುಂಚೆ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಅವರು.

‘ಮಧ್ಯಾಹ್ನ ಬಿಸಿಯೂಟದ ಆಹಾರ ಸಾಮಗ್ರಿಗಳ ಸಂಗ್ರಹದ ಕೋಣೆ ಸೋರುತ್ತಿದ್ದು, ಆಹಾರಧಾನ್ಯಗಳು ಕೆಡದಂತೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದೆ’ ಎಂದು ಮುಖ್ಯ ಶಿಕ್ಷಕಿ ರಾಜೇಶ್ವರಿ ಹೇಳಿದರು.

‘ಮಳೆ ಬಂದರೆ ಮಕ್ಕಳಿಗೆ ತರಗತಿ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ಮಧ್ಯಾಹ್ನದ ಬಿಸಿಯೂಟ ಕೂಡ ಸರಿಯಾಗಿ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಸಹ ಶಿಕ್ಷಕಿ ಕಲ್ಪನಾ ಬೇಸರ ವ್ಯಕ್ತಪಡಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕ್ರಪ್ಪ, ‘ಶಾಲೆಯ ಬಹುತೇಕ ಕೋಣೆಗಳ ಚಾವಣಿಗಳು ಸಂಪೂರ್ಣ ಸೋರುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗುತ್ತಿರುವುದು ನಿಜ. ನೂತನ ಕೋಣೆಗಳ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ ಎಂದು ಸಂಬಂಧಪಟ್ಟ ಎಂಜಿನಿಯರ್ ತಿಳಿಸಿದ್ದಾರೆ’ ಎಂಬುದಾಗಿ ತಿಳಿಸಿದರು.

ಸೋರುತ್ತಿರುವ ಶಾಲಾ ಕೋಣೆಗಳ ವಿಡಿಯೊ ದೃಶ್ಯಗಳು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಸ್ಥಿತಿಗೆ ಶಿಕ್ಷಣಪ್ರೇಮಿಗಳು ಮರಗುವ ಜೊತೆಗೆ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೋಣೆ ಮಳೆಯಿಂದಾಗಿ ಸೋರುತ್ತಿರುವುದು
ಯರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೋಣೆ ಮಳೆಯಿಂದಾಗಿ ಸೋರುತ್ತಿರುವುದು
ಮಳೆ ಬಂದರೆ ಶಾಲಾ ಕೋಣೆಗಳು ಬಚ್ಚಲುಮನೆಗಳಾಗುತ್ತಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಜೀವನಕ್ಕೆ ದಾರಿತೋರಿದ ಜ್ಞಾನದೇಗುಲ ದುಸ್ಥಿತಿಗೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಸಕರು ಕೂಡಲೇ ಪರಿಹಾರ ಕಲ್ಪಿಸಬೇಕು.
–ಸಾಬಣ್ಣ ಎಸ್‌.ಬಾನರ ಗ್ರಾಮದ ಯುವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT