ಸೋಮವಾರ, ಜನವರಿ 27, 2020
17 °C
ಉತ್ತರ ಕರ್ನಾಟಕದಲ್ಲಿ ಖಡಕ್ ಸಜ್ಜೆ ರೊಟ್ಟಿ ವಿಶೇಷ

ಸಂಕ್ರಾಂತಿಗೆ ಹೋಳಿಗೆ ಘಮ, ಘಮ

ತೋಟೇಂದ್ರ ಎಸ್.ಮಾಕಲ್ Updated:

ಅಕ್ಷರ ಗಾತ್ರ : | |

prajavani

ಯರಗೋಳ: ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಗ್ರಾಮದ ಪ್ರತಿ ಮನೆಯಲ್ಲಿಯು ಶೇಂಗಾ ಹೋಳಿಗೆ ಮತ್ತು ಎಳ್ಳು ಹಚ್ಚಿದ ಖಡಕ್ ಸಜ್ಜೆ ರೊಟ್ಟಿ ತಯಾರಿ ಜೋರಾಗಿದೆ.

ಹಬ್ಬಕ್ಕೆಂದು ಹಳ್ಳಿಗಳಿಗೆ ಬಂದ ಯುವಕರು ಮತ್ತು ಯುವತಿಯರು ನದಿ ಅಥವಾ ಕೆರೆ ದಂಡೆಯ ದೇವಸ್ಥಾನಗಳಿಗೆ ಗೆಳೆಯರೊಂದಿಗೆ ತೆರಳಿ ನೀರಿನಲ್ಲಿ ಮುಳಗಿ ದೇವರ ದರ್ಶನ ಪಡೆದು ಪುನೀತರಾಗಲು, ಜೊತೆಗೆ ಹಬ್ಬದ ಸಂಭ್ರಮಕ್ಕೆ ಸಿಹಿಯಾದ ಶೇಂಗಾ ಹೋಳಿಗೆ, ತುಪ್ಪ, ಎಳ್ಳು ಹಚ್ಚಿದ ಖಡಕ್ ಸಜ್ಜೆರೊಟ್ಟಿ, ಎಣ್ಣೆ ಬದನೆಕಾಯಿ ಬುತ್ತಿಯ ಊಟ ಸವಿಯಲು ಸಜ್ಜಾಗಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ಶೇಂಗಾ ಹೋಳಿಗೆ ಮತ್ತು ಎಳ್ಳು ಹಚ್ಚಿದ ಸಜ್ಜೆರೊಟ್ಟಿ ತಯಾರಿಸಲಾಗುತ್ತದೆ. ಕೆಲವರು ಬೇರೆ ಜಿಲ್ಲೆಯಲ್ಲಿರುವ ತಮ್ಮ ಆಪ್ತರಿಗೆ, ಸ್ನೇಹಿತರಿಗೆ, ಬಂಧು ಬಳಗದವರಿಗೆ ಕಳುಹಿಸಿಕೊಡುತ್ತಾರೆ.

ಶೇಂಗಾ ಹೋಳಿಗೆಯು 15 ದಿನಗಳವರೆಗೂ ಕೆಡದಂತೆ ಸಂಗ್ರಹಿಸಿ ಇಡಬಹುದಾದ ರುಚಿಕರವಾದ ಖಾದ್ಯವಾಗಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಖಾನಾವಳಿಗಳಲ್ಲಿ ವಿಶೇಷವಾಗಿ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕಾಗಿ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ ಊಟ ದೊರೆಯುತ್ತದೆ.

ತಯಾರಿಸುವ ವಿಧಾನ– ಶೇಂಗಾ ಹೋಳಿಗೆ: 1 ಕೆ.ಜಿ ಶೇಂಗಾವನ್ನು ಹಂಚಿನ ಮೇಲೆ ಹುರಿದು, ಕೆಂಪಾದ ಸಿಪ್ಪೆ ಸುಲಿದ ನಂತರ 1 ಕೆ.ಜಿ ಬೆಲ್ಲ, 250 ಗ್ರಾಂ. ಉರಿದ ಎಳ್ಳನ್ನು ಮಿಶ್ರಣ ಮಾಡಲಾಗುತ್ತದೆ. ಗೋಧಿ ಹಿಟ್ಟಿನಲ್ಲಿ ಅದುಮಿ ತುಪ್ಪ ಅಥವಾ ಎಣ್ಣೆಯಿಂದ ಹೋಳಿಗೆ ತಯಾರಿಸಲಾಗುತ್ತದೆ.

ಸಜ್ಜೆ ರೊಟ್ಟಿ: ಜೋಳದ ರೊಟ್ಟಿಯ ಹಾಗೆಯೇ ಸಜ್ಜೆ ರೊಟ್ಟಿ ಮಾಡಲಾಗುತ್ತದೆ. ಸಂಕ್ರಾಂತಿ ಸಂದರ್ಭದಲ್ಲಿ ಹುರಿದ ಎಳ್ಳನ್ನು ಮಿಶ್ರಣ ಮಾಡಿ ಸಜ್ಜೆ ರೊಟ್ಟಿ ತಯಾರಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು