ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ನೀರು ಪೋಲಾಗದಂತೆ ‘ಸ್ಕಾಡಾ’ ತಂತ್ರಜ್ಞಾನ

ದೇಶದಲ್ಲೇ ಮೊದಲ ಬಾರಿಗೆ ಸ್ವಯಂ ಚಾಲಿತ ಗೇಟುಗಳು ಅಳವಡಿಕೆ, ಪ್ರಧಾನಿಯಿಂದ ನಾಳೆ ಲೋಕಾರ್ಪಣೆ
Last Updated 17 ಜನವರಿ 2023, 23:45 IST
ಅಕ್ಷರ ಗಾತ್ರ

ಯಾದಗಿರಿ/ಹುಣಸಗಿ: ದೇಶದಲ್ಲೇ ಮೊದಲ ಬಾರಿಗೆ ಸ್ಕಾಡಾ (ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಯಾಂತ್ರೀಕೃತಗೊಂಡ ವ್ಯವಸ್ಥೆ) ಸ್ವಯಂ ಚಾಲಿತ ಗೇಟ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವುಳ್ಳ ಯೋಜನೆಗೆ ಪ್ರಧಾನಿ ಚಾಲನೆ ನೀಡಲಿದ್ದು, ಈ ಯೋಜನೆಯಿಂದ 4,400 ಗೇಟ್‌ಗಳ ಮೂಲಕ ಹರಿಯುವ ನೀರು ಪೋಲಾಗದಂತೆ ನೋಡಿಕೊಳ್ಳಲಾಗುತ್ತಿದೆ.

ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಮತ್ತು ಇದರ ಅಡಿಯಲ್ಲಿ ಬರುವ ಎಚ್‍ಬಿಸಿ ವಿತರಣಾ ಕಾಲುವೆಗಳಿಗೆ ಗೇಟು ಅಳವಡಿಸುವ ಕಾಮಗಾರಿ 2014ರ ಫೆಬ್ರವರಿಯಲ್ಲಿ ಆರಂಭವಾಗಿ 2016ರಲ್ಲಿ ಪೂರ್ಣಗೊಂಡಿದೆ. ರೈತರಿಗೆ ತಾವು ಗ್ರಾಮ ಪಂಚಾಯಿತಿಗಳಲ್ಲಿಯೇ ಕಿಯೋಸ್ಕ್‌ ಯಂತ್ರದ ಮೂಲಕ ತಮ್ಮ ಬೆಳೆಗೆ ನೀರು ಹರಿಸಬೇಕು ಎನ್ನುವುದು ಕೆಬಿಜೆಎನ್‌ಎಲ್‌ ಅಧಿಕಾರಿಗಳ ವಿವರಣೆಯಾಗಿದೆ.

ಆಧುನಿಕ ತಂತ್ರಜ್ಞಾನದ ಸ್ಕಾಡಾ ಯೋಜನೆಯ ಅಡಿಯಲ್ಲಿ ಮುಖ್ಯ ಕಾಲುವೆಗೆ ಹಾಗೂ ಇತರೆ ಕಾಲುವೆಗಳಿಗೆ ಅಳವಡಿಸಿರುವ ಸ್ವಯಂಚಾಲಿತ ವಾಲ್ಯೂಮೆಟ್ರಿಕ್ ಗೇಟ್‌ಗಳ ಕಾರ್ಯಾಚರಣೆ, ನಿರ್ವಹಣೆ ಕುರಿತು ಈಗಾಗಲೇ ಪರಿಶೀಲನೆ ಮಾಡಲಾಗಿದೆ.

ಕೃಷ್ಣಾ ಭಾಗ್ಯಜಲ ನಿಮಗದ ಅಡಿಯಲ್ಲಿ ನಿರ್ವಹಿಸಲಾಗಿರುವ ಈ ಸ್ಕಾಡಾ ಗೇಟ್ (ವೈರ್ ಲೆಸ್ ಆಧಾರಿತ) ರಿಮೋಟ್ ಗೇಟ್ ಕಾಮಗಾರಿ ಇದಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ (SCADA) ರಿಮೋಟ್ ತಂತ್ರಜ್ಞಾನದ ಮುಖಾಂತರ ಕೃಷ್ಣಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್)ದ ಕಾಲುವೆಗಳ ಗೇಟ್ ನಿಯಂತ್ರಿಸಲಾಗುತ್ತಿದ್ದು, ಈ ತಂತ್ರಜ್ಞಾನ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಹುಣಸಗಿ ತಾಲ್ಲೂಕಿನಲ್ಲಿರುವ ನಾರಾಯಣಪುರ ಡ್ಯಾಂ (ಬಸವಸಾಗರ) ನಲ್ಲಿ ಪ್ರಯೋಗಿಸಲಾಗುತ್ತಿದೆ.

ಅಗತ್ಯ ಸಿದ್ಧತೆ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭಕ್ಕೆ ಗುರುವಾರ ಜ.19 ರಂದು ಆಗಮಿಸಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ 1150-450 ಅಡಿ ಸುತ್ತಳತೆಯಲ್ಲಿ ಚಪ್ಪರ ಆಕಾರದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇರುವುದರಿಂದಾಗಿ ಇನ್ನು ಎರಡು ಸಮಾನಂತರ ವೇದಿಕೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ಅಧಿಕಾರಿಗಳ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ವಿವಿಐಪಿ ಮತ್ತು ವಿಐಪಿ, ಮಾಧ್ಯಮದವರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದ್ದು, ಸುಮಾರು ಒಂದು ಲಕ್ಷ ಜನ ಕುಳಿತುಕೊಳ್ಳಲು ಸದ್ಯ ಕುರ್ಚಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇನ್ನು ಹೆಚ್ಚು ಆಸನದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ‘ ಎಂದು ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದರು.

ಮಂಗಳವಾರ ಬೆಳಿಗ್ಗೆ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ, ವಿಭಾಗ ಸಂಘಟನಾ ಕಾರ್ಯದರ್ಶಿ ಅರುಣ ಭಿನ್ನಾಡಿ, ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಅವರು ಸ್ಥಳದಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ವಿವಿಧ ಸಮಿತಿಯವರು ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ಸಲಹೆಗಳನ್ನು ನೀಡಿದರು.

***

ಏನಿದು ಸ್ಕಾಡಾ ಸ್ವಯಂ ಚಾಲಿತ ವ್ಯವಸ್ಥೆ?

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಯಿಂದ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಈ ಗೇಟ್‍ಗಳು ಬೇಗನೇ ತುಕ್ಕು ಹಿಡಿಯದಂತೆ ಸ್ಟೈನ್‍ಲೆಸ್ ಸ್ಟೀಲ್ ಅಳವಡಿಸಲಾಗಿದೆ. ನೀರಾವರಿ ಬಳಕೆ ಸಾಮರ್ಥ್ಯ ಹೆಚ್ಚಿಸುವುದು, ನೀರು ಪೋಲಾಗುವುದನ್ನು ತಡೆಗಟ್ಟುವುದು, ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ಬೇಡಿಕೆಯಂತೆ ಸಮರ್ಪಕವಾಗಿ ನೀರು ಒದಗಿಸುವುದು, ಸಮರ್ಪಕ ನೀರು ನಿರ್ವಹಣೆಯಿಂದ ಮುಖ್ಯ ಕಾಲುವೆ /ವಿತರಣಾ ಕಾಲುವೆಗಳಲ್ಲಿ ನಿಗದಿತ ಹರಿವಿನ ಪ್ರಮಾಣವನ್ನು ಕಾಯ್ದು ಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

ಯೋಜನೆಯಡಿ ಬರುವ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲಗಳ ಸಂಪೂರ್ಣ ನಕ್ಷೆ, ಗ್ರಾಮ ಹೋಬಳಿ, ತಾಲ್ಲೂಕು, ಜಿಲ್ಲಾವಾರಿ ಕಂದಾಯ ವ್ಯಾಪ್ತಿಯ ನಕ್ಷೆ, ಕಾರ್ಟೂನ್ ನಕ್ಷೆ ಇತ್ಯಾದಿ ಸಾಫ್ಟ್‌ವೇರ್‌ ತಂತ್ರಜ್ಞಾನ ಹೊಂದಿದೆ.

********

50 ಉಪ ಸಮಿತಿ ರಚನೆ

ಅಧಿಕಾರಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸುಮಾರು 50ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸುವ ಯೋಜನೆ ರೂಪಿಸಲಾಗಿದೆ. ಸುಮಾರು 14 ಕ್ಕೂ ಹೆಚ್ಚು ಪ್ರತ್ಯೇಕ ಕಂಪಾರ್ಟ್‌ಮೆಂಟ್‌ಗಳನ್ನು ಮಾಡಲಾಗಿದ್ದು, ಪ್ರತಿಯೊಂದಕ್ಕೂ ಒಂದೊಂದು ತಂಡ ರಚಿಸಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಸ್ಥಳಗಳಲ್ಲಿ ಸೂಕ್ತ ಭದ್ರತೆಗೆ ಒತ್ತು ನೀಡಲಾಗುತ್ತಿದ್ದು, ಅದಕ್ಕಾಗಿ ಸಾಕಷ್ಟು ಜನ ಪೊಲೀಸ್ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ನಿಯೋಜಿಸುತ್ತಿದ್ದಾರೆ.

300 ಎಕರೆಯಲ್ಲಿ ಪಾರ್ಕಿಂಗ್‌: ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರ ಸೇರಿದಂತೆ ನೆರೆಯ ವಿಜಯಪುರ, ರಾಯಚೂರು ಜಿಲ್ಲೆಯ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಲಿದ್ದು, ಎಲ್ಲ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸುಮಾರು 300 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.

ಗೋಧಿ ಹುಗ್ಗಿ ಪಲಾವ್: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಜನರಿಗೆ ಗೋಧಿ ಹುಗ್ಗಿ, ಪಲಾವ್, ಉಪ್ಪಿನಕಾಯಿಯ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

***

ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಕ್ಷೇತ್ರ ಹಾಗೂ ಛಾಯಾ ಭಗವತಿಯ ಸನ್ನಿಧಾನವಾಗಿರುವ ನಮ್ಮ ಮತಕ್ಷೇತ್ರಕ್ಕೆ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು, ಅವರ ಬರುವಿಕೆಗಾಗಿ ಜಿಲ್ಲೆಯ ಎಲ್ಲ ಕಾರ್ಯಕರ್ತ ಅಭಿಮಾನಿಗಳು ಅತ್ಯಂತ ಉತ್ಸುಕತೆಯಿಂದ ಕಾಯುತ್ತಿದ್ದಾರೆ
ರಾಜೂಗೌಡ, ಸುರಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT