ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಕುಸಿಯುವ ಭೀತಿಯಲ್ಲಿ ಶಾಲಾ ಕಟ್ಟಡ

57 ವರ್ಷಗಳಷ್ಟು ಹಳೆಯ ಶಾಲೆ; ಶೌಚಾಲಯಗಳಲ್ಲಿ ಸ್ವಚ್ಛತೆ ಕೊರತೆ
Last Updated 1 ಡಿಸೆಂಬರ್ 2021, 6:55 IST
ಅಕ್ಷರ ಗಾತ್ರ

ಗುರುಮಠಕಲ್: ಕಟ್ಟಡದಲ್ಲಿನ ಎಲ್ಲಾ 15 ಕೋಣೆಗಳ ಮೇಲ್ಛಾವಣಿಯ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಹೊರಚಾಚಿವೆ. ತುಂತುರು ಮಳೆ ಸುರಿದರೂ ನೀರು ನೇರವಾಗಿ ವಿದ್ಯಾರ್ಥಿಗಳ ಮೇಲೆ ಸುರಿಯುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಮೇಲ್ಛಾವಣಿಯ ಸಿಮೆಂಟಿನ ಉಂಡೆಗಳು ಬಿದ್ದು ಗಾಯಗೊಂಡ ಪ್ರಸಂಗಗಳು ನಡೆದಿವೆ. ಆದರೂ, ಭೀತಿಯ ನಡುವೆಯೇ ಪಾಠ ಹೇಳುವ ದುಸ್ಥಿತಿ ಶಿಕ್ಷಕರದ್ದು, ಕೇಳುವ ಅನಿವಾರ್ಯತೆ ವಿದ್ಯಾರ್ಥಿಗಳದ್ದು.

ಹೌದು. ಇದು ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲೆ ಇರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಕಟ್ಟಡದ ಇಂದಿನ ಸ್ಥಿತಿ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಕಡ್ಡಾಯ ಶಿಕ್ಷಣ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ, ಡಿಜಿಟಲ್ ತರಗತಿ, ಪರಿಣಾಮಕಾರಿ ಬೋಧನೆ ಎಂದೆಲ್ಲಾ ಹೇಳುತ್ತಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಸಂಬಂಧಿತರ ನಿರ್ಲಕ್ಷ್ಯಕ್ಕೊಳಗಾಗಿ ಯಾವಾಗ ಯಾರ ಪ್ರಾಣ ಕಸಿಯಲಿ ಎನ್ನುವಂತೆ ಪಟ್ಟಣದ ಐತಿಹಾಸಿಕ ಸರ್ಕಾರಿ ಶಾಲೆಯೊಂದು ಕುಸಿಯಲು ಕಾತರದಲ್ಲಿ ನಿಂತಿದೆ.

ಮೊದಲೊಮ್ಮೆ ಪಾಠ ಕೇಳುವಾಗ ವಿದ್ಯಾರ್ಥಿ ಮೇಲೆ ಮೇಲ್ಚಾವಣಿಯ ತುಣುಕು ಬಿದ್ದು ಗಾಯವಾಗಿತ್ತು. ಆದರೆ, ನಾವು ಇಲ್ಲೇ ಕೂತು ಓದಬೇಕಿದೆ. ಪಾಠ ಕೇಳುವಾಗ ನಮ್ಮ ಮೇಲೇನಾದರೂ ಬಿದ್ದರೆ ಎನ್ನುವ ಭಯದಿಂದ ಪಾಠದ ಕಡೆಗೆ ಗಮನ ಹರಿಸಲು ಸಾಧ್ಯವಾಗದಂತಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿಗಳಾದ ಅನೀಲಕುಮಾರ ಹಾಗೂ ಭಾಸ್ಕರಪ್ರಿಯಾ.

57 ವರ್ಷಗಳಷ್ಟು ಹಳೆಯದಾದ ಮತ್ತು ಅಂದಿನ ಮೈಸೂರು ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡು, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಪಾಲಿನ ಅಕ್ಷರದ ಅಕ್ಷಯ ಪಾತ್ರೆಯಾಗಿದ್ದ ಶಾಲೆ ಕುಸಿಯುವ ಹಂತಕ್ಕೆ ತಲುಪಿದೆ. ಪಟ್ಟಣದ ಗುಮಡಾಲ ಪರಿವಾರದ ಉದ್ಯಮಿ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂಬ ಆಶಯದಿಂದ ದಾನವಾಗಿ ನೀಡಿದ್ದ ಜಮೀನಿನಲ್ಲಿ ಈ ಶಾಲೆ ನಿರ್ಮಾಣವಾಗಿದೆ.

ಹಂತ ಹಂತವಾಗಿ ಶಾಲೆಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಅದಕ್ಕೆ ತಕ್ಕಂತೆ 4 ಕೋಣೆಗಳ ನಿರ್ಮಾಣವೂ ಮುಗಿದಿದೆ. ಆದರೆ, ಎರಡು ಕೋಣೆಗಳು ಮಾತ್ರ ಶಾಲೆಗೆ ಹಸ್ತಾಂತರಿಸಲಾಗಿದ್ದು, ಇನ್ನೊಬ್ಬ ಗುತ್ತಿಗೆದಾರ ನಿರ್ಮಿಸಿದ ಎರಡು ಕೋಣೆಗಳನ್ನು ಇನ್ನೂ ಹಸ್ತಾಂತರ ಮಾಡಿಲ್ಲ. ಕೋಣೆಗಳನ್ನು ನೋಡಿ, ಅಭ್ಯಾಸಕ್ಕೆ ಪೂರಕವಾಗಿವೆಯೇ ಎಂದು ಪರಿಶೀಲಿಸಲೂ ಶಿಕ್ಷಕರಿಗೆ ಈವರೆಗೆ ಅವಕಾಶ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಹಲವು ಬಾರಿ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಾಗೂ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರವೂ ಹೊಸ ಕೋಣೆಗಳು ಶಾಲಾ ಉಪಯೋಗಕ್ಕೆ ಸಿಗುತ್ತಿಲ್ಲ. ಇಂತಹ ಸರ್ಕಾರಿ ಶಾಲೆಗೆ ಕಳುಹಿಸಿದರೆ ಯಾವಾಗ ಏನಾಗುತ್ತೋ ಎನ್ನುವ ಭಯ. ಮಕ್ಕಳು ಶಾಲೆಯಿಂದ ಮನೆಗೆ ಬರುವವರೆಗೂ ನಮ್ಮಲ್ಲಿ ಆತಂಕವಂತೂ ಇದ್ದೇ ಇದೆ ಎಂದು ಪೋಷಕರೊಬ್ಬರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT