ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಜನಪದವನ್ನೇ ಉಸಿರಾಡುವ ತನಿಖೆದಾರ ಕುಟುಂಬ

ಶಿವಮೂರ್ತಿಗೆ ಒಲಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯತ್ವ
Published 21 ಮಾರ್ಚ್ 2024, 6:23 IST
Last Updated 21 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ಸುರಪುರ:

‘ಜಗದೊಳಗಿನ ಘನ ಹಗರಣ
ಹೇಳುವೇ ನಾನು|
ಹೆಚ್ಚಾಯಿತೋ ವಿಶ್ವಾಸ
ಘಾತಕ ತಾಣ||’

ಈ ಮೊಹರಂ ಪದ ನಿಮಗೆ ಕೇಳಿಸಿತೆಂದರೆ ಅಲ್ಲಿ ಶಿವಮೂರ್ತಿ ತನಿಖೆದಾರ ಅವರ ಕಂಚಿನ ಕಂಠವಿದೆ ಎಂದೇ ಈ ಭಾಗದವರ ನಂಬಿಕೆ. ಅಷ್ಟರ ಮಟ್ಟಿಗೆ ಜನಪದ ಗಾಯನಕ್ಕೆ ಶಿವಮೂರ್ತಿ ಹೆಸರಾಗಿದ್ದಾರೆ.

ಶಿವಮೂರ್ತಿ ತಾಲ್ಲೂಕಿನ ಪೇಠಅಮ್ಮಾಪುರ ಗ್ರಾಮದವರು. ನಾಲ್ಕು ತಲೆಮಾರುಗಳಿಂದ ಅವರ ಕುಟುಂಬ ಜನಪದ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಶಿವಮೂರ್ತಿ ಅವರ ಮುತ್ತಾತ ಹಣಮಂತಪ್ಪ ಶ್ರೇಷ್ಠ ಜನಪದ ವಿದ್ವಾಂಸ. ನೂರಾರು ತತ್ವಪದ, ಗೀಗೀ ಹಾಡು, ಮೊಹರಂ ಪದ, ಭಜನಾ ಹಾಡು, ಡಪ್ಪಿನ ಆಟ ರಚಿಸಿದ್ದು ಅವರ ಹೆಗ್ಗಳಿಕೆ. ಅವರ ಹಾದಿಯಲ್ಲಿಯೇ ಅಜ್ಜ ಮಲ್ಲಯ್ಯ, ತಂದೆ ಭೀಮರಾಯ ತಮ್ಮ ಜೀವಿತಾವಧಿಯನ್ನು ಜನಪದಕ್ಕೆ ಸವೆಸಿದ್ದಾರೆ. ಅವರ ಮಾರ್ಗದಲ್ಲೇ ಸಾಗುತ್ತಿರುವ ಶಿವಮೂರ್ತಿ, ಇದೀಗ ಜನಪದ ಮುಂದಿನ ಪೀಳಿಗೆಗೆ ಉಳಿಸುವ ಹೊಣೆ ನಿಭಾಯಿಸುತ್ತಿದ್ದಾರೆ.

100ಕ್ಕೂ ಹೆಚ್ಚು ಗೀಗೀ ಪದಗಳು, 200ಕ್ಕೂ ಹೆಚ್ಚು ಭಜನಾ ಹಾಡುಗಳು, 150ಕ್ಕೂ ಹೆಚ್ಚು ಮೊಹರಂ ಗೀತೆಗಳು, ಡಪ್ಪಿನಾಟದ ಗಾಯನ, ರಿವಾಯತ್ ಎಲ್ಲವೂ ಅವರಿಗೆ ಕರತಲಾಮಲಕ. 15 ತತ್ವಪದಗಳು, ನಾಲ್ಕು ಮೊಹರಂ ಪದಗಳ ಸಾಹಿತ್ಯ ರಚಿಸಿದ್ದಾರೆ.

ಹರದೇಶಿ ಗೀಗೀ ಪಂಥದ ಅನುಯಾಯಿ ಆಗಿರುವ 60ರ ಆಸು ಪಾಸಿನಲ್ಲಿರುವ ಶಿವಮೂರ್ತಿ ಎಂಟ್ಹತ್ತು ಜನರ ತಂಡ ಕಟ್ಟಿಕೊಂಡು ಕಳೆದ 40 ವರ್ಷಗಳಿಂದ ಜನಪದದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಕಾರ್ಯಕ್ರಮಗಳು, ಬೆಂಗಳೂರಿನಲ್ಲಿ ನಡೆದ ಜನಪದ ಸಂಭ್ರಮ, ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ, ಗಿರಿಜನೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮೈಸೂರು ಉತ್ಸವ, ಹಂಪಿ ಉತ್ಸವದಂತಹ ದೊಡ್ಡ ಸಮಾರಂಭಗಳಲ್ಲಿ ಅವಕಾಶ ದೊರಕಿಲ್ಲ.

ಯಾವುದೇ ಹಣದ ನಿರೀಕ್ಷೆ ಮಾಡದೆ ಕಾರ್ಯಕ್ರಮ ನೀಡುವುದು, ಸಂಸಾರ ಲೆಕ್ಕಿಸದೆ ಜನಪದಕ್ಕೇ ಮೊದಲ ಆದ್ಯತೆ ನೀಡುವುದು ಅವರ ಗುಣ. ಮದುವೆ ಇನ್ನಿತರ ಕಾರ್ಯಕ್ರಮಗಳು, ಜಾತ್ರೆ,  ಉತ್ಸವ, ಮೊಹರಂ ಆಚರಣೆಯಲ್ಲಿ ಹಾಡುಗಾರಿಕೆ ಪ್ರದರ್ಶಿಸುತ್ತಾರೆ. ಕೇವಲ ಎರಡು ಎಕರೆ ಜಮೀನು ಹೊಂದಿರುವ ಶಿವಮೂರ್ತಿ ಅವರಿಗೆ ಪತ್ನಿ, ಇಬ್ಬರು ಮಕ್ಕಳ ಸಂಸಾರ ತೂಗಿಸುತ್ತಿದ್ದಾರೆ.‌

ಉತ್ತರಾದೇವಿ ಮಠಪತಿ
ಉತ್ತರಾದೇವಿ ಮಠಪತಿ
ಶಿವಮೂರ್ತಿ ಅವರ ನೇಮಕದಿಂದ ಹರ್ಷವಾಗಿದೆ. ನಮ್ಮ ಇಲಾಖೆಯಿಂದ ಅವರಿಗೆ ಹೆಚ್ಚೆಚ್ಚು ಹಾಡುವ ಅವಕಾಶ ಕಲ್ಪಿಸಲಾಗುವುದು
ಉತ್ತರಾದೇವಿ ಮಠಪತಿ ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬಸವರಾಜ ತನಿಖೆದಾರ
ಬಸವರಾಜ ತನಿಖೆದಾರ
ಚಿಕ್ಕಪ್ಪ ಶಿವಮೂರ್ತಿ ತಂಡದ ಸದಸ್ಯನಾಗಿ ನೂರಾರು ಕಾರ್ಯಕ್ರಮಗಳಲ್ಲಿ ದಮಡಿ ಕಲಾವಿದನಾಗಿ ಭಾಗವಹಿಸಿದ್ದೇನೆ. ಜನಪದದ ಮೇಲಿನ ಅವರ ಮೋಹ ಅನನ್ಯ.
ಬಸವರಾಜ ತನಿಖೆದಾರ ಕಲಾವಿದ

ಜನಪದದ ಹುಚ್ಚು ಪ್ರೇಮ

ಶಿವಮೂರ್ತಿ ಅವರ ಪತ್ನಿ ಒಮ್ಮೆ ಅನಾರೋಗ್ಯ ಪೀಡಿತರಾಗಿದ್ದರು. ಒಂದು ದೊಡ್ಡ ಕಾರ್ಯಕ್ರಮದಲ್ಲಿ ಇಡೀ ರಾತ್ರಿ ಶಿವಮೂರ್ತಿ ಅವರ ತಂಡ ಹಾಡಬೇಕಿತ್ತು. ಪತ್ನಿಯ ಅನಾರೋಗ್ಯದ ಕಡೆಗೆ ಗಮನ ಕೊಡದೆ ಅಹೋರಾತ್ರಿ ಭಜನೆ ಮಾಡಿ ಎಲ್ಲರ ಮನ ಗೆದ್ದಿದ್ದರು ಶಿವಮೂರ್ತಿ. ಕುಟುಂಬ ಸದಸ್ಯರು ‘ನಿನಗೆ ಹೆಂಡತಿಯ ಆರೋಗ್ಯಕ್ಕಿಂತ ಜನಪದವೇ ಮುಖ್ಯವೇ’ ಎಂದು ಬೈದಿದ್ದರು. ಹೀಗೆ ಕುಟುಂಬಕ್ಕಿಂತ ಜನಪದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಅವರ ಜಾನಪದದ ಅಭಿರುಚಿಗೆ ಸಾಕ್ಷಿ.

ಒಲಿದ ಅಕಾಡೆಮಿ ಸದಸ್ಯತ್ವ

ಶಿವಮೂರ್ತಿ ಅವರ ಜನಪದ ಸೇವೆಗಾಗಿ 2020ರಲ್ಲಿ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಶಿವಮೂರ್ತಿ ಭಾಜನರಾಗಿದ್ದರು. ಇದೀಗ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯತ್ವ ಅವರನ್ನು ಹುಡುಕಿಕೊಂಡು ಬಂದಿದೆ. ಈ ಹಿಂದೆ ಯಾದಗಿರಿ ಜಿಲ್ಲೆಯಿಂದ ಪ್ರಕಾಶ ಅಂಗಡಿ ಮತ್ತು ಅಮರಯ್ಯಸ್ವಾಮಿ ಹಿರೇಮಠ ಈ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ‘ನಂಗ... ಅಕಾಡೆಮಿ ಕೆಲಸದ ಬಗ್ಗೆಗ ಗೊತ್ತಿಲ್ರಿ. ಶನಿವಾರ ರಾತ್ರಿ ಯಾರೋ ಫೋನ್ ಮಾಡಿ ಹೇಳಿದ್ರು ಬಲ್ಲವರ ಹತ್ರಾ ತಿಳಕೊಂಡು ಜನಪದ ಬೆಳಿಸಲಿಕ್ಕ ಶ್ರಮ ಪಡ್ತೀನ್ರಿ’ ಎನ್ನುತ್ತಾರೆ ಶಿವಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT