ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಊರು ನಮ್ಮ ಜಿಲ್ಲೆ‌: ನಿಸರ್ಗ ಮಡಿಲಲ್ಲಿ ಸಿದ್ಧಲಿಂಗೇಶ್ವರ ದೇಗುಲ

ಗುರುಸುಣಿಗಿ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ಆರಾಧ್ಯ ದೈವ, ಇಲ್ಲಿವೆ ಹಲವು ಶಾಸನಗಳು
Last Updated 23 ಅಕ್ಟೋಬರ್ 2021, 16:07 IST
ಅಕ್ಷರ ಗಾತ್ರ

ಯಾದಗಿರಿ: ವಡಗೇರಾ ತಾಲ್ಲೂಕಿನ ಗುರುಸುಣಿಗಿ ಗ್ರಾಮದ ಹೊರವಲಯದಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯವೂ ಪುರಾತನ ದೇವಸ್ಥಾನವಾಗಿದ್ದು, ಪ್ರತಿ ಅಮಾವಾಸ್ಯೆ, ಸೋಮವಾರ ಹೆಚ್ಚಿನ ಭಕ್ತರು ಭೇಟಿ ನೀಡುವ ತಾಣವಾಗಿದೆ.

ಯಾದಗಿರಿ ನಗರದಿಂದ ಶಹಾಪುರ ಮಾರ್ಗದಲ್ಲಿ 9 ಕಿ.ಮೀ. ದೂರದಲ್ಲಿರುವ, ಗ್ರಾಮದಿಂದ ಮೂರು ಕಿ.ಮೀ ಅಂತರದಲ್ಲಿ ಬೆಟ್ಟದ ಮೇಲೆ ದೇವಸ್ಥಾನ ನಿರ್ಮಿಸಲಾಗಿದೆ. ಗುರುಸುಣಿಗಿ, ಗುಲಸರಂ ಎಂದು ಗ್ರಾಮದ ಹೆಸರಿನಿಂದ ಕರೆಯಲಾಗುತ್ತಿದೆ.

ಗುಡಿಯ ಬಳಿಯಲ್ಲಿನ ಬಾವಿಗೆ ಹೊಂದಿಕೊಂಡ ಬಂಡೆಯ ಮೇಲೆ ಕಳಚೂರಿ ಸಂಕಮನ ಕಾಲದ ಎರಡು ಹಾಗೂ ಕಳಚೂರಿ ಸಂಗಣದೇವನ ಕಾಲದ ಒಂದು ಶಾಸನವಿದೆ. ಅಲ್ಲದೇ ಶಾತವಾಹನರ ಅವಶೇಷಗಳು ಕಂಡು ಬಂದಿದ್ದೂ ಕಲ್ಯಾಣ ಚಾಳುಕ್ಯ ಅರಸರ ಅಂಶಗಳು ಇಲ್ಲಿ ಆಡಳಿತ ನಡೆಸಿರುವುದು ತಿಳಿದು ಬರುತ್ತದೆ. ನೆಲದ ಮೇಲಿನಿಂದ ನೂರಾರು ಅಡಿ ಎತ್ತದಲ್ಲಿ ದೇಗುಲ ನಿರ್ಮಾಣಗೊಂಡಿದೆ.

1177, 1179, 1182 ರ ಶಾಸನಗಳಿಂದ ಶಾಸನೇಕ್ತ ಸ್ತಯಂಭು ಸಿದ್ಧೇಶ್ವರವೇ ಸಿದ್ದಲಿಂಗೇಶ್ವರ ದೇಗುಲವೆಂದು ಗೊತ್ತಾಗುತ್ತದೆ. ಈ ದೇವಾಲಯದ ಮೂಲದಲ್ಲಿ ಗರ್ಭಗೃಹ, ತೆರೆದ ಅಂತರಾಳ, ನವರಂಗ ಹಾಗೂ ನಂದಿ ಮಂಟಪಗಳನ್ನು ಹೊಂದಿದ್ದು, ಇದರ ಸುತ್ತ ಕಂಬಗಳನ್ನು ಬಳಸಿ ಹಜಾರ ನಿರ್ಮಿಸಲಾಗಿದೆ.

ಬೆಟ್ಟಗಳ ಮಧ್ಯೆ, ನಿಸರ್ಗದ ಸುಂದರ ಪರಿಸರದಲ್ಲಿ ನೆಲಸಿರುವ ಸಿದ್ದಲಿಂಗೇಶ್ವರರು ಭಕ್ತರ ಪಾಲಿಗೆ ಚೈತನ್ಯ ಶಕ್ತಿಯಾಗಿ ಮನೆ ಮಾತಾಗಿದ್ದಾರೆ. ಬೆಟ್ಟದಲ್ಲಿ ಮೂರು ಬಾವಿಗಳಿದ್ದು, ಭಕ್ತರ ದಾಹ ತಣಿಸುತ್ತಿವೆ.

ಶ್ರಾವಣದಲ್ಲಿ ವಿಶೇಷ: ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಈ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಶ್ರಾವಣ ಮಾಸದ ನಾಲ್ಕನೇ ಸೋಮವಾರ ದೇವರನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಗ್ರಾಮದ ಮೂಲಕ ಭೀಮಾ ನದಿಯ ಸನ್ನಧಿಗೆ ಬಂದು ಗಂಗಾ ಸ್ನಾನದೊಂದಿಗೆ ಪುರವಂತಿಗೆ ನಂದಿಕೋಲಿನ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪುವರು. ಬೆನಕನ ಅಮಾವಾಸ್ಯೆಯಲ್ಲಿ ಉಚ್ಚಾಯ, ಮಾರನೇಯ ದಿನ ಜಾತ್ರೆ, ರಥೋತ್ಸವ ನಡೆಯಲಿದೆ. ಎಂಟು ವರ್ಷಗಳಿಂದ ರಥೋತ್ಸವ ನಡೆಯುತ್ತದೆ. ಮುಂಚೆ ಪಲ್ಲಕ್ಕಿ ಉತ್ಸವ ಮಾತ್ರ ನಡೆಯುತ್ತಿತ್ತು.

ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳಾದ ಹುಲಕಲ್, ಬಬಲಾದ, ನಾಯ್ಕಲ್‌, ಬೀರನಳ್ಳಿ, ಉಳ್ಳೆಸೂಗುರು ಸೇರಿದಂತೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಕಲಬುರಗಿ, ರಾಯಚೂರು ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಪ್ರತಿ ಅಮಾವಾಸ್ಯೆ ದಿನ ಅನ್ನ, ಸಾಂಬರ್ ದಾಸೋಹ ಇರುತ್ತದೆ.

ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ತಕ್ಕಂತೆ ದೇವಸ್ಥಾನ ಸಮಿತಿಯು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ದೇಗುಲಕ್ಕೆ ತೆರಳುವ ರಸ್ತೆ ತುಂಬಾ ಹದಗೆಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳು ಇದನ್ನು ದುರಸ್ತಿ ಮಾಡಿಸಬೇಕು. ಇದರಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಿ ಜಿಲ್ಲೆಯಲ್ಲಿನ ‍ಪವಿತ್ರ ಧಾರ್ಮಿಕ ಕ್ಷೇತ್ರವಾಗಲಿದೆ.

***

ಚಾರಣಕ್ಕೆ ಹೇಳಿ ಮಾಡಿಸಿದ ತಾಣ!

ಸಿದ್ಧಲಿಂಗೇಶ್ವರ ದೇವಾಲಯದ ಪರಿಸರ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ದೇಗುಲ ಹಿಂಭಾಗದಲ್ಲಿ ಬೃಹತ್‌ ಆಕಾರದ ಬಂಡೆ ಸಣ್ಣ ಕಲ್ಲಿನ ಆಸರೆಯಿಂದ ನಿಂತುಕೊಂಡಿದೆ.

ಬೆಟ್ಟದ ಮಧ್ಯದೊಳಗೆ ಗವಿ ಇದ್ದು, ಇಲ್ಲಿಯೇ ಶಿವಲಿಂಗ ಉದ್ಬವಿಸಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಬಂಡೆ ಸಂದಿನೊಳಗೆ ಒಬ್ಬೊಬ್ಬರೇ ನುಸುಳಿಕೊಂಡು ತೆರಳಬೇಕು. ಅಲ್ಲಲ್ಲಿ ನೀರು ನಿಂತು ಬಾವಿಗಳಾಗಿವೆ. ಬೆಟ್ಟ ಹತ್ತಲು ಪರಿಚಯ ಇದ್ದವರು ಇದ್ದರೆ ಸುಲಭವಾಗಿ ಹತ್ತಬಹುದು. ಬೃಹತ್‌ ಬೆಟ್ಟದ ಮೇಲಿನಿಂದ ಅಕ್ಕಪಕ್ಕದ ಜಮೀನುಗಳು ವಿಮಾನದಲ್ಲಿ ಪ್ರಯಾಣಿಸುವಾಗ ಕಾಣಿಸುವಂತೆ ಗೋಚರಿಸುತ್ತವೆ.

ಬೆಳಿಗ್ಗೆ ಮತ್ತು ಸಂಜೆ ಇಲ್ಲಿಗೆ ಭೇಟಿ ನೀಡಿದರೆ ಆಹ್ಲಾದಕರ ವಾತಾವರಣ ಸವಿಯಬಹುದು. ಬೆಟ್ಟದ ಮೇಲೆ ವಿದ್ಯುತ್‌ ತಂತಿ ಹಾದುಹೋಗಿದ್ದು, ಜಾಗೃತೆಯಿಂದ ತೆರಳಬೇಕು. ಮಧ್ಯಾಹ್ನದ ವೇಳೆ ಬಂಡೆಗಳು ಬಿಸಿಯಾಗಿ, ಚಾರಣಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಪ್ರತಿದಿನ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತದೆ.

******

ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಪ್ರತಿದಿನ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ಪೂಜೆ, 9 ಗಂಟೆಗೆ ಅಭಿಷೇಕ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಎರಡು ಬಾರಿ ಪೂಜೆ ನಡೆಯುತ್ತದೆ
ಸಿದ್ಧಲಿಂಗಪ್ಪ ಹೂಗಾರ, ಸಿದ್ದಲಿಂಗೇಶ್ವರ ದೇವಸ್ಥಾನ ಪೂಜಾರಿ

***

ಪ್ರಕೃತಿಯ ಸುಂದರ ಮಡಿಲಲ್ಲಿ ಇರುವ ಸಿದ್ಧಲಿಂಗೇಶ್ವರರ ದೇವಸ್ಥಾನ ಪವಿತ್ರ ತಾಣವಾಗಿದೆ. ಉತ್ತಮ ರಸ್ತೆ ಸೇರಿದಂತೆ ಭಕ್ತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು
ಶರಣಯ್ಯ ಡಿ, ಸಿದ್ದಲಿಂಗೇಶ್ವರ ದೇವಸ್ಥಾನದ ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT