ಶನಿವಾರ, ಡಿಸೆಂಬರ್ 5, 2020
25 °C
ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ, ಕುಲದೇವತೆ, ಸಂತ ಸೇವಾಲಾಲ್‌ ಪೂಜೆ

ತಾಂಡಾಗಳಲ್ಲಿ ವಿಶಿಷ್ಟ ದೀಪಾವಳಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಮಹಿಳೆಯರು ಹಾಗೂ ಯುವತಿಯರು ಸೇರಿ ವಿಶಿಷ್ಟವಾಗಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ತಾಂಡಾಗಳಲ್ಲಿ ದೀಪಾವಳಿ ಎಂದರೆ ಆರತಿ ಬೆಳೆಗುವುದು, ಹಾಡು ಹಾಡುವುದು, ನೃತ್ಯ ಮಾಡುವುದು, ಭಕ್ತಿಗೀತೆಗಳ ಮೂಲಕ ಕುಲದೇವತೆ ಮತ್ತು ಸಂತ ಸೇವಾಲಾಲ್‌ ಅವರನ್ನು ಪೂಜಿಸುವುದಾಗಿದೆ.

ಅವಿವಾಹಿತ ಯುವತಿಯರು ತಾಂಡಾಗಳಲ್ಲಿ ಸಮುದಾಯದ ‘ನಾಯಕ’ ನ ಮನೆಗೆ ತೆರಳಿ ಆರತಿ ಬೆಳಗಿ ಪೂಜೆ ಸಲ್ಲಿಸುವುದರಿಂದ ಹಿಡಿದು ಇಡೀ ತಾಂಡಾದಲ್ಲಿ ಸುತ್ತಾಡಿ ಆರತಿ ಬೆಳಗುವುದು ನಡೆಯುತ್ತದೆ.

ಇಲ್ಲಿ ಯುವತಿಯರು ಆಕರ್ಷಕವಾಗಿ ನೃತ್ಯ ಮಾಡುತ್ತಾ ಹಾಡು ಹಾಡುವ ದೃಶ್ಯ ನೋಡಲು ಹಲವಾರು ಜನರು ಸೇರಿರುತ್ತಾರೆ. ನಾಯಕ, ನಾಯಕನ ಪತ್ನಿಯನ್ನು ಕುಳ್ಳರಿಸಿ ಅವರಿಗೆ ಪೂಜೆ ಮಾಡುವುದು ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರಾದಾಯ. ಅವರಿಗೆ ಪೂಜೆಯಾದ ನಂತರ ಎಲ್ಲ ಮನೆಗಳಿಗೆ ಭೇಟಿ ನೀಡಿ ಹಿರಿಯರಿಗೆ ನಮಸ್ಕರಿಸಿ ಆರತಿ ಬೆಳಗುವುದು ಇಂದಿಗೂ ನಡೆದುಕೊಂಡು ಬಂದಿದೆ.

ಮನೆಗೆ ತೆರಳಿದ ಮೇಲೆ ಮನೆಯಲ್ಲಿರುವ ಎಲ್ಲರ ಹೆಸರನ್ನು ಹೇಳಿ ಹಾಡು ಹಾಡುವುದು ವಿಶಿಷ್ಟವಾಗಿದೆ. ಇದು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಲ್ಲ ಕಡೆಯೂ ಮಾಡುತ್ತಾರೆ.

ಆರತಿ ಬೆಳಗಿದ ಯುವತಿಯರಿಗೆ ಕಾಣಿಕೆಯಾಗಿ ತಮ್ಮ ಶಕ್ತ್ಯಾನುಸಾರ ಹಣವನ್ನು ನೀಡುತ್ತಾರೆ. ಹಿಂದೆ ಜೋಳ, ಅಕ್ಕಿ, ಗೋಧಿ ಸೇರಿದಂತೆ ಇನ್ನಿತರ ದವಸ ಧಾನ್ಯ ನೀಡುತ್ತಿದ್ದರು. ಈಗ ಹಣವನ್ನು ನೀಡಲಾಗುತ್ತಿದೆ. ಯುವತಿಯರ ಗುಂಪಿನಲ್ಲಿರುವ ಒಬ್ಬರು ಇದನ್ನು ಸಂಗ್ರಹಿಸಿಕೊಳ್ಳುತ್ತಾರೆ. ಎಲ್ಲ ಮನೆಗಳು ಸುತ್ತಾಡಿದ ನಂತರ ದೇವರಿಗೆ ಕಾಣಿಕೆಯನ್ನು ತೆಗೆದಿರಿಸಿ ಯುವತಿಯರು ತಮ್ಮತಮ್ಮಲ್ಲಿ ಹಂಚಿಕೊಳ್ಳುತ್ತಾರೆ.

ಇದೆಲ್ಲ ಅಮಾವಾಸ್ಯೆ ದಿನ ಮಾಡುತ್ತಾರೆ.  ಅಮಾವಾಸ್ಯೆ ಮರುದಿನ ಪಾಡ್ಯದಲ್ಲಿ ಯುವತಿಯರೆ ಕಾಡು, ಹೊಲ ಗದ್ದೆಗಳಿಗೆ ತೆರಳಿ ಹೂವುನ ಕಿತ್ತುಕೊಂಡು ಬರುವುದು ಸಾಮಾನ್ಯ. ಪ್ರಕೃತಿಯಲ್ಲಿ ಸಿಗುವ ಬಣ್ಣಬಣ್ಣದಿಂದ ಅರಳಿ ನಿಂತ ಹೂಗಳನ್ನು ಮನೆಗೆ ತಂದು ಪೂಜಿಸುವುದೇ ವಿಶಿಷ್ಟವಾಗಿದೆ.

ಪಾಡ್ಯದಂದು ಮನೆಯಿಂದ ಎಲ್ಲಿಗೂ ಸಗಣಿ, ಕಸಯನ್ನು ಸಾಗಿಸುವುದಿಲ್ಲ. ಎಲ್ಲವನ್ನು ಒಂದು ಕಡೆ ಶೇಖರಿಸಿ ಹೂವುಗಳಿಂದ ಶೃಂಗರಿಸಿ ಪೂಜೆ ಮಾಡುವುದು ಕಾಣಬರುತ್ತದೆ.

ಬಲಿ ಪಾಡ್ಯದಂದು ತಾಂಡಾ, ಊರಿಗೆ ಅಂಟಿರುವ ಶಾಪವನ್ನು ತೊಲಗಿಸಲು ಬಲಿ ಕೊಡುತ್ತಾರೆ. ತಾಂಡಾದಲ್ಲಿ ಯಾವುದಾದರೂ ದುಷ್ಟ ಶಕ್ತಿ ಇದ್ದರೆ, ಪೀಡೆ ತೊಲಗಲಿ ಎಂದು ಇದರ ಹಿಂದಿರುವ ಉದ್ದೇಶವಾಗಿದೆ. ಇದರಲ್ಲಿ ಸಮುದಾಯದ ಎಲ್ಲರೂ ಪಾಲ್ಗೊಳ್ಳುತ್ತಾರೆ. ತಮ್ಮ ಶಕ್ತಿ ಅನುಸಾರ ಬೇಟೆಗಾಗಿ ಹಣ ಹೊಂದಿಸುತ್ತಾರೆ. ಇದರಲ್ಲಿ ಇಷ್ಟೆ ಹಣ ಹಾಕಬೇಕು ಎನ್ನುವ ನಿಯಮವಿಲ್ಲ. ಆದರೆ, ಬೇಟೆಯನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ.

ಹಬ್ಬಕ್ಕೆ ಸಿದ್ದತೆ: ಸಮುದಾಯಕ್ಕೆ ದಸರಾ ಮತ್ತು ದೀಪಾವಳಿ ಪ್ರಮುಖ ಹಬ್ಬಗಳು. ಇದರಲ್ಲಿ ಯುವತಿಯರು, ಮಹಿಳೆಯರ ಪಾತ್ರ ವಿಶೇಷವಾಗಿದೆ. ಯುವಕರು, ಪುರುಷರು ಮಹಿಳೆಯರ ಜೊತೆಗೆ ಇರುತ್ತಾರೆ. ಆದರೆ, ಪೂಜೆ, ಪುನಸ್ಕಾರ ಎಲ್ಲವೂ ಮಹಿಳೆಯರಿಂದಲೇ ಆಗುತ್ತದೆ.

ಹಬ್ಬದ ಕೆಲ ದಿನಗಳ ಮೊದಲೆ ಹಬ್ಬಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಮನೆ, ಗುಡಿಸಲು ಇನ್ನಿತರ ಪ್ರದೇಶಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಯುವತಿಯರು ಲಮಾಣಿ ಸಮುದಾಯ ಬಿಂಬಿಸುವ ಬಟ್ಟೆಗಳನ್ನು ತಯಾರಿಸುವುದು, ಅದರಲ್ಲಿ ಸಿದ್ಧತೆಗೆ ಆದ್ಯತೆ ನೀಡುತ್ತಾರೆ. ಕಾಂಚಳಿ (ಜಾಕೀಟು), ಪೇಟಿಯಾ (ಲಂಗ), ಛಾಟೀಯ (ಮೇಲು ವಸ್ತ್ರ) ಅಲಂಕಾರಕ್ಕೆ ಬೇಕಾಗುವ ಸಾಮಗ್ರಿ ಹಾಗೂ ರಂಗೋಲಿ ಪುಡಿ ಖರೀದಿಸುತ್ತಾರೆ.

ಆರತಿ ಪೂಜೆ: ‌ಇದೆಲ್ಲ ತಾಂಡಾ ಸಮುದಾಯಕ್ಕೆ ಸಂಬಂಧಿಸಿದರೆ ಹಿಂದೂಗಳು ಆರತಿ ಪೂಜೆ ಮಾಡುವ ಮೂಲಕ ಆಚರಿಸುತ್ತಾರೆ. ಪಾಂಡವರು ಯುದ್ದಕ್ಕೆ ತೆರಳುವ ಸಂದರ್ಭದಲ್ಲಿ ಆರತಿ ಬೆಳಗಿದ ನಿದರ್ಶನವಾಗಿ ಸೂರ್ಯೋದಯಕ್ಕೆ ಮುಂಚಿತವಾಗಿ ಆರತಿ ಬೆಳಗುವುದು ನಡೆಯುತ್ತಿದೆ.

ಸುರಪುರದಲ್ಲಿ ಹಿಂದೆ ಐದು ದಿನಗಳ ಕಾಲ ವನ ಭೋಜನ ಮಾಡಲಾಗುತ್ತಿದೆ. ವರ್ಷಗಳು ಉರುಳಿದಂತೆ ಇದು ಒಂದೇ ದಿನಕ್ಕೆ ಸೀಮಿತವಾಗಿದೆ.

ಶಹಾಪುರ ತಾಲ್ಲೂಕಿನ ಸಗರದಲ್ಲಿ ದಸರಾ ಹಬ್ಬದಿಂದ ದೀಪಾವಳಿ ವರೆಗೆ ರೈತಾಪಿ ವರ್ಗ ತಮ್ಮ ಕಷ್ಟ ಮರೆಯಲು ಕೋಲಾಟ ಆಡುತ್ತಿದ್ದರು. ವರ್ಷಗಳ ಉರುಳಿದಂತೆ ಎಲ್ಲೆಡೆ ಕೋಲಾಟ ಕಡಿಮೆಯಾಗುತ್ತಿದೆ.

ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ವಿಶಿಷ್ಟವಾಗಿ ಹಬ್ಬವನ್ನು ಲಂಬಾಣಿ ಸಮುದಾಯವರು ಆಚರಿಸುತ್ತಾರೆ. ದಸರಾ ಹಬ್ಬದಿಂದ ದೀಪಾವಳಿ ವರೆಗೆ ಪ್ರತಿ ನಿತ್ಯ ರಾತ್ರಿ ಮಹಿಳೆಯರು ನೃತ್ಯ ಮಾಡುವ ಸಂಪ್ರಾದಾಯ ಇಂದಿಗೂ ಕಂಡು ಬರುತ್ತದೆ.

ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ತಾಲ್ಲೂಕಿನ ಹೆಚ್ಚಿನ ತಾಂಡಾಗಳಿದ್ದು, ಇನ್ನುಳಿದ ವಡಗೇರಾ, ಹುಣಸಗಿ ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ತಾಂಡಾಗಳಿವೆ. ವಿವಿಧ ತಾಂಡಾಗಳಲ್ಲಿ ನೃತ್ಯವೇ ಆಕರ್ಷಣೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು