ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ಮಲೆನಾಡ ನೆನಪಿಸುವ ಜಲಧಾರೆ...

ಚಿತ್ತಾಕರ್ಷಕ ಪ್ರಕೃತಿ ಸೌಂದರ್ಯ ತಾಣ ಚಿಂತನಹಳ್ಳಿ ಹೊರವಲಯದ ಗವಿಸಿದ್ದಲಿಂಗೇಶ್ವರ ಜಲಪಾತ
Published 13 ಆಗಸ್ಟ್ 2023, 6:13 IST
Last Updated 13 ಆಗಸ್ಟ್ 2023, 6:13 IST
ಅಕ್ಷರ ಗಾತ್ರ

ಗುರುಮಠಕಲ್: ಸುತ್ತಲೂ ಹಸಿರು ಗುಡ್ಡಗಳು. ಅವುಗಳ ನಡುವೆ ಪ್ರಶಾಂತವಾಗಿ ಹರಿಯುವ ಜಲರಾಶಿ. ಹಕ್ಕಿಗಳ ಚಿಲಿಪಿಲಿ ಸದ್ದು. ಅಲ್ಲಲ್ಲಿ ಪ್ರವಾಸಿಗರ ಕಲರವ...

ಇದು ಚಿಂತನಹಳ್ಳಿ ಹೊರವಲಯದ ಗವಿಸಿದ್ದಲಿಂಗೇಶ್ವರ ಜಲಪಾತದಲ್ಲಿ ಕಂಡು ಬರುವ ಚಿತ್ರಣ. ತಾಲ್ಲೂಕಿನ ಪ್ರಮುಖ ಧಾರ್ಮಿಕ  ತಾಣವಾಗಿಯೂ ಗುರುತಿಸಿಕೊಂಡಿದೆ.

‘ಶಿವಶರಣ ಸಿದ್ದಲಿಂಗೇಶ್ವರರು ಇಲ್ಲಿನ ಗವಿಯಲ್ಲಿ ತಪಸ್ಸು ಮಾಡಿದ್ದರಿಂದ ಇದನ್ನು ಗವಿಸಿದ್ದಲಿಂಗೇಶ್ವರ ಜಲಪಾತವೆಂದೇ ಕರೆಯಲಾಗುತ್ತದೆ’ ಎಂಬುದು ಚಿಂತನಹಳ್ಳಿ ಗ್ರಾಮಸ್ಥರ ಅಂಬೋಣ.

‘ಬೇಸಿಗೆಯಲ್ಲೂ ಜಲಪಾತದಲ್ಲಿ ನೀರು ಹರಿಯುತ್ತಿರುತ್ತದೆ. ಮೇಲಿಂದ ಧುಮ್ಮಿಕ್ಕುವ ನೀರಿನಲ್ಲಿ ನೆನೆಯುತ್ತಲೇ ಗವಿಯಲ್ಲಿ ಪ್ರವೇಶಿಸಿ, ಸಿದ್ಧಲಿಂಗೇಶ್ವರ ದರ್ಶನ ಪಡೆಯುವುದು ಧನ್ಯತಾಭಾವ ಮೂಡಿಸುತ್ತದೆ. ಜೊತೆಗೆ ಇಲ್ಲಿನ ಪರಿಸರವು ನಮಗೆ ಮಲೆನಾಡಿನಲ್ಲಿ ತಿರುಗಾಡಿದ ಅನುಭವ ನೀಡುತ್ತದೆ’ ಎಂದು ರಾಯಚೂರಿನಿಂದ ಬಂದಿದ್ದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಅನುಭವ ಹಂಚಿಕೊಂಡರು.

‘ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಇಲ್ಲಿ ಬಂದು ಪ್ರಕೃತಿಯ ಮಡಿಲಲ್ಲಿ ಹರಿವ ನೀರು ನೋಡಿದರೆ, ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ನಾವು ಪ್ರತೀ ವರ್ಷ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಲ್ಲಿಗೆ ಬರುತ್ತೇವೆ. ಇಡೀ ದಿನ ಮಕ್ಕಳು ಆಡುತ್ತಾ ಕುಣಿಯುತ್ತಾರೆ. ನಮಗೂ ಕೆಲಸದ ಒತ್ತಡದಿಂದ ಉಂಟಾದ ಬೇಸರ ಕಳೆದು ಜೀವನೋತ್ಸಹ ಮೂಡುತ್ತದೆ’ ಎಂದು ವಿಜಯಪುರದ ಪ್ರವಾಸಿಗರ ತಂಡದ ಸಂದೀಪ ಹಾಗೂ ರಾಜದೀಪ ಅಭಿಪ್ರಾಯಪಟ್ಟರು.

ಹೀಗೆ ಬನ್ನಿ ಜಲಪಾತಕ್ಕೆ: ಯಾದಗಿರಿ ನಗರದಿಂದ 45 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ನೇರವಾಗಿ ವಾಹನ ಸೌಲಭ್ಯವಿಲ್ಲ. ಯಾದಗಿರಿ-ಗುರುಮಠಕಲ್ ಮಾರ್ಗದ ನಡುವಣ ಕಂದಕೂರ ಗ್ರಾಮದ ವರೆಗೆ ಬಸ್ ಮೂಲಕ ಬರಬೇಕು. ಅಲ್ಲಿಂದ ಖಾಸಗಿ ವಾಹನಗಳಲ್ಲಿ ತೆರಳಬಹುದು.

ಕಲಬುರಗಿ, ಸೇಡಂ, ತಾಂಡೂರು, ಹೈದರಾಬಾದ್‌ ಮೂಲಕ ಗುರುಮಠಕಲ್ ಪಟ್ಟಣಕ್ಕೆ ಬಸ್ ಸಂಪರ್ಕವಿದ್ದು, ಖಾಸಗಿ ವಾಹನ ಬಾಡಿಗೆಗೆ ಪಡೆದು ಜಲಪಾತಕ್ಕೆ ಹೋಗಬಹುದು.

ಆಹಾರ ಜೊತೆಗಿರಲಿ: ಗವಿ ಸಿದ್ಧಲಿಂಗೇಶ್ವರ ಜಲಪಾತ ಮತ್ತು ದೇವಸ್ಥಾನವು ಕಾಡಿನ ಮಧ್ಯದಲ್ಲಿದೆ. ಹೀಗಾಗಿ ಪ್ರವಾಸಿಗರು ತಮ್ಮ ಆಹಾರವನ್ನು ಜೊತೆಗೇ ಕೊಂಡೊಯ್ದರೆ ಉತ್ತಮ. ವಿಶೇಷ ದಿನಗಳಲ್ಲಿ ದೇವಸ್ಥಾನದಿಂದ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ.

ಬೇಕಿದೆ ಮೂಲಸೌಕರ್ಯ: ಜಲಪಾತವು ತಾಲ್ಲೂಕು ವ್ಯಾಪ್ತಿಯ ಪ್ರಮುಖ ಪ್ರವಾಸಿ ಕ್ಷೇತ್ರವಾಗಿದ್ದು, ಬರುವ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸಿದರೆ ಪ್ರವಾಸೋದ್ಯಮ ಬೆಳೆಯಲಿದೆ.

ಡಾಂಬರ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯೂ ಕಲ್ಪಿಸಲಾಗಿಲ್ಲ. ಬಟ್ಟೆ ಬದಲಿಸಲು ಒಂದು ಕೋಣೆ ಮಾತ್ರವಿದೆ. ಇಲ್ಲಿನ ದೈವೀವನವು ನಿರ್ವಹಣೆ ಕೊರತೆಯಿಂದ ಬಳಲಿದೆ. ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಮೂಲ ಸೌಕರ್ಯ ಒದಗಿಸಬೇಕಿದೆ’ ಎಂಬುದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕ ಒತ್ತಾಯ.

ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದ ಗವಿ ಸಿದ್ದಲಿಂಗೇಶ್ವರ ಜಲಪಾತದ ಹತ್ತಿರದ ದೈವೀವನದಲ್ಲಿನ ಶಿವನ ಪ್ರತಿಮೆ
ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದ ಗವಿ ಸಿದ್ದಲಿಂಗೇಶ್ವರ ಜಲಪಾತದ ಹತ್ತಿರದ ದೈವೀವನದಲ್ಲಿನ ಶಿವನ ಪ್ರತಿಮೆ
ಗವಿಸಿದ್ಧಲಿಂಗೇಶ್ವರ ಜಲಪಾತ ಚೆನ್ನಾಗಿದೆ. ಅಲ್ಲಿ ಮೊಬೈಲ್‌ಗೆ ನೆಟ್‌ವರ್ಕ್‌ ಸಿಗದ ಕಾರಣ ಕಾರ್ಯದೊತ್ತಡದ ಜಂಜಡವಿಲ್ಲದೆ ಪ್ರಶಾಂತವಾಗಿ ಸಮಯ ಕಳೆಯಬಹುದು. ಇದರಿಂದ ಉತ್ಸಾಹ ಮರುಪೂರಣವಾಗುತ್ತದೆ
-ಮನೀಷಕುಮಾರ, ಪ್ರವಾಸಿಗ
ಇಲ್ಲಿಗೆ ಬಂದಾಗಲೆಲ್ಲ ಮಲೆನಾಡಿನಲ್ಲಿ ತಿರುಗಾಡಿದಂತೆ ಭಾಸವಾಗುತ್ತದೆ. ಮನೆಯ ಮಕ್ಕಳು ಹಿರಿಯರು ಎಲ್ಲರೂ ಸೇರಿ ಬರುವಂಥ ‍ಪ್ರವಾಸಿ ತಾಣವಾಗಿದೆ. ಸ್ವಲ್ಪ ಶೌಚಾಲಯಗಳ ವ್ಯವಸ್ಥೆ ಮಾಡಿದರೆ ಉತ್ತಮ
-ವೆಂಕಟೇಶ ಜೇವರ್ಗಿ, ಪ್ರವಾಸಿಗ
ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವುದರಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಶೌಚಾಲಯ ಡ್ರೆಸ್ಸಿಂಗ್ ರೂಂ ರಾತ್ರಿ ವೇಳೆ ತಂಗಲು ವ್ಯವಸ್ಥೆ ಮಾಡಬೇಕು
-ನಾಗೇಶ ಗದ್ದಿಗಿ ಅಧ್ಯಕ್ಷ ಜಯಕರ್ನಾಟಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT