ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತತ ಪ್ರಯತ್ನ ಇಲ್ಲದೇ ಸಾಧನೆ ಅಸಾಧ್ಯ’

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ತರಬೇತಿ ಕಾರ್ಯಾಗಾರ ಉದ್ಘಾಟನೆ
Last Updated 11 ಫೆಬ್ರುವರಿ 2019, 14:48 IST
ಅಕ್ಷರ ಗಾತ್ರ

ಮುಖ್ಯಾಂಶಗಳು

* ಹಿಂದೆ ಸೌಲಭ್ಯಗಳಿಲ್ಲದೇ ಮಕ್ಕಳು ಸಾಧನೆ ತೋರಿದ್ದರು

* ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕಾರ್ಯಾಗಾರ

* ಕಾರ್ಯಾಗಾರ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಯಾದಗಿರಿ: ‘ಉತ್ತಮ ಸಾಧನೆಗೆ ಶ್ರದ್ಧಾ ಮನೋಭಾವ, ಸತತ ಪ್ರಯತ್ನ ಅಗತ್ಯ’ ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ ಅಭಿಪ್ರಾಯ ಪಟ್ಟರು.

ಸೈದಾಪುರದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡು ದಶಕಗಳ ಹಿಂದೆ ಈಗಿನಷ್ಟು ಶೈಕ್ಷಣಿಕ ಸೌಲಭ್ಯಗಳಿರಲಿಲ್ಲ. ಕನಿಷ್ಠ ವಿದ್ಯುತ್‌ ದೀಪದ ಬೆಳಕಿನ ವ್ಯವಸ್ಥೆಯೂ ಇರಲಿಲ್ಲ. ಆಗಿನ ಮಕ್ಕಳು ಕಷ್ಟಪಟ್ಟು ನಿರಂತರ ಅಧ್ಯಯನಶೀಲರಾಗಿ ಓದಿದ್ದರಿಂದ ಹಲವರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ದೇಶದ ಕೀರ್ತಿ ತರುವಂತಹ ಸಾಧನೆ ತೋರಿದ್ದಾರೆ’ ಎಂದರು.

‘ಬದಲಾದ ಶಿಕ್ಷಣ ಪದ್ಧತಿಯಲ್ಲಿ ಈಗಿನ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಕುಸಿದಿರುವ ಪರಿಣಾಮ ಈ ಕಾರ್ಯಾಗಾರವನ್ನು ಶಿಕ್ಷಣ ಇಲಾಖೆ ಆಯೋಜಿಸಿದೆ. ಮಕ್ಕಳು ಉತ್ತಮ ಫಲಿತಾಂಶ ಪಡೆದರೆ ಮಾತ್ರ ಈ ಕಾರ್ಯಾಗಾರ ಆಯೋಜನೆ ಸಾರ್ಥಕವಾಗುತ್ತದೆ’ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಜಿಲ್ಲಾ ನೋಡಲ್‌ ಅಧಿಕಾರಿ ಮಲ್ಲಪ್ಪ ಮಾತನಾಡಿ,‘ಶಿಕ್ಷಕರ ಕೊರತೆ ಇರುವುದು ಬಹಿರಂಗ ಸತ್ಯ. ಆದರೆ, ನಮ್ಮ ಮಕ್ಕಳು ದಡ್ಡರಿಲ್ಲ. ಕನಿಷ್ಠ ತರಬೇತಿ ನೀಡಿದರೂ ಸಾಕು, ಉತ್ತಮ ಯಶಸ್ಸು ಪಡೆಯುವಂತಹ ಸಾಮರ್ಥ್ಯ ಅವರಲ್ಲಿದೆ ಎಂಬುದನ್ನು ಮನಗಂಡಿರುವ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಈ ಕಾರ್ಯಾಗಾರ ಆಯೋಜಿಸಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು’ ಎಂದರು.

ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಪ್ರೇರಣ ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ, ಮುಖ್ಯಗುರುಮಾರುತಿ ಬೇಂದ್ರೆ, ಗ್ಯಾನಪ್ಪ, ಚಾಂದಸಾಬ, ಸಂಪನ್ಮೂಲ ವ್ಯಕ್ತಿ ರಾಚಯ್ಯ, ಶಿವಾನಂದ, ವಿಜಯ, ಗಂಗಾಧರ ಯಳಗೇರಾ, ವಿರೂಪಾಕ್ಷಪ್ಪ, ರೂಪೇಶಕುಮಾರ ಇದ್ದರು.

ಶೈಕ್ಷಣಿಕ ಕಾರ್ಯಾಗಾರದಲ್ಲಿ ಸೈದಾಪುರ, ಲಿಂಗೇರಿ, ಬದ್ದೇಪಲ್ಲಿ, ಮಲ್ಹಾರ, ಇಡ್ಲೂರ, ಮಾದ್ವಾರ, ಅಜಲಾಪುರ, ಬಳಿಚಕ್ರ, ವಂಕಸಂಬರ ಪ್ರೌಢ ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿರುವ 400ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT