ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆಡಳಿತಕ್ಕೆ ನಿಖರ ಅಂಕಿ-ಅಂಶ ಅಗತ್ಯ

ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್‌ ಅವರ ಜನ್ಮದಿನಾಚರಣೆಯಲ್ಲಿ ಡಿಸಿ ಜೆ.ಮಂಜುನಾಥ್ ಅಭಿಮತ
Last Updated 29 ಜೂನ್ 2018, 13:42 IST
ಅಕ್ಷರ ಗಾತ್ರ

ಯಾದಗಿರಿ: ನಿಖರವಾದ ಅಂಕಿ-ಅಂಶಗಳು ಇದ್ದಾಗ ಮಾತ್ರ ಸರ್ಕಾರದ ಆಡಳಿತ ವರ್ಗದವರು ಸಮರ್ಪಕ ನಿರ್ಣಯ ತೆಗೆದುಕೊಂಡು ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯ ಪಟ್ಟರು.

ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ವತಿಯಿಂದ ಸಾಂಖ್ಯಿಕತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್‌ರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 12ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಮೊಬೈಲ್ ಅನ್ನು ಧ್ವನಿ ಮುಖಾಂತರ ಮಾತನಾಡಲು ಮಾತ್ರ ಬಳಕೆ ಮಾಡಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಮೊಬೈಲ್‌ನಲ್ಲಿ ಪ್ರಸ್ತುತ ಡೇಟಾ ಪ್ಯಾಕ್ ಇದ್ದರೆ ಮಾತ್ರ ಬೆಲೆ ಎಂಬಂತಾಗಿದೆ. ಈ ಮೂಲಕ ಯಾವುದೇ ಅಂಕಿ-ಅಂಶವನ್ನು ನಾವು ಪಡೆಯಬಹುದಾಗಿದೆ. 1931ರಲ್ಲಿ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನವರು ಅಂಕಿ-ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಮೊಬೈಲ್ ಡೇಟಾಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಅದಕ್ಕೆ ಪ್ರೊ.ಪಿ.ಸಿ.ಮಹಾಲನೋಬಿಸ್ ಮುಖ್ಯ ಕಾರಣರಾಗುತ್ತಾರೆ’ ಎಂದರು.

‘ಸ್ವಾತಂತ್ರ್ಯದ ನಂತರ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರಲಾಯಿತು. ಅದರಲ್ಲಿ ಮುಖ್ಯವಾಗಿ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ದೊಡ್ಡ ಕೈಗಾರಿಕೆಗಳಿಗೆ ಆದ್ಯತೆ ನೀಡಿದ್ದರಿಂದ ಇಂದು ಖಾಸಗಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜನ್ಮ ತಾಳಿವೆ. ಅದರಲ್ಲಿ ಪ್ರೊ.ಮಹಾಲನೋಬಿಸ್, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ. ಇತ್ತೀಚೆಗೆ ಪಂಚವಾರ್ಷಿಕ ಯೋಜನೆಯನ್ನು ನೀತಿ ಆಯೋಗ ಎಂದು ಮಾರ್ಪಡಿಸಲಾಗಿದೆ’ ಎಂದು ಹೇಳಿದರು.

‘ಅಂಕಿ-ಅಂಶ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ, ವಿವಿಧ ಇಲಾಖೆಗಳ ಅಧಿಕಾರಿಗಳು ಅಂಕಿ-ಅಂಶಗಳಿಗೆ ಆದ್ಯತೆ ಕೊಟ್ಟು ಕರ್ತವ್ಯ ನಿರ್ವಹಿಸಬೇಕು. ಈ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಪದವಿ ಕಾಲೇಜಿನ ಉಪನ್ಯಾಸಕ ಪ್ರಹ್ಲಾದ್ ಜೋಷಿ ಉಪನ್ಯಾಸ ನೀಡಿ,‘ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅಂಕಿ-ಅಂಶಗಳು ಅಗತ್ಯವಾಗಿ ಬೇಕು. ಆದ್ದರಿಂದ, ಸಂಖ್ಯಾ ಸಂಗ್ರಹಣಾಕಾರರು ಬದ್ಧತೆಯಿಂದ ಕೆಲಸ ಮಾಡಿದರೆ ದೇಶದ ಅಭಿವೃದ್ಧಿಗೆ ನೆರವಾಗುತ್ತದೆ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತದೆ’ ಎಂದು ಉದಾಹರಣೆಗಳ ಸಹಿತ ವಿವರಿಸಿದರು.

ಸನ್ಮಾನ: ಸಂಖ್ಯಾ ಸಂಗ್ರಹಣಾ ಇಲಾಖೆಯ ನಿವೃತ್ತ ಅಧಿಕಾರಿಚಂದ್ರಶೇಖರ ಚೂರಿ, ಚಂದ್ರಶೇಖರ ಭಂಡಾರಿ, ಸಂಗಮೇಶ ಹಾಗೂ ವೆಂಕಟಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಗೂರ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಜಂಟಿ ಕೃಷಿ ನಿರ್ದೇಶಕ ಆರ್‌.ದೇವಿಕಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಬಿ.ಸಿದ್ದೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT