ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮನಿರ್ಭರ ಭಾರತದತ್ತ ಹೆಜ್ಜೆ: ಮುರುಗೇಶ ನಿರಾಣಿ

72ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದ ಗಣಿ, ಭೂ ವಿಜ್ಞಾನ ಸಚಿವ
Last Updated 27 ಜನವರಿ 2021, 1:31 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಟ್ಟಿದೆ. ಸ್ವಾವಲಂಬನೆ ಬದುಕನ್ನು ಸಾಕಾರಗೊಳಿಸುವ ನಿಟ್ಟನಲ್ಲಿ ಆತ್ಮನಿರ್ಭರ ಭಾರತ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬ ದೇಶವಾಸಿಯದ್ದು ಪಾಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ಆರ್.ನಿರಾಣಿ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಆತ್ಮನಿರ್ಭರ ಭಾರತ ಕಟ್ಟುವ ಕಾಯಕ ನಮ್ಮ ಮನೆಯಿಂದ ಪ್ರಾರಂಭವಾಗಿ ನಮ್ಮ ಊರು, ನಮ್ಮ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ಕೊನೆಗೆ ರಾಷ್ಟ್ರ ಮಟ್ಟದಲ್ಲಿ ಕೊನೆಗೊಳ್ಳಬೇಕು. ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಮಗೆ ಜನಸಂಖ್ಯೆ ಶಾಪವಲ್ಲ. ಒಟ್ಟು ಜನಸಂಖ್ಯೆಯನ್ನು ಶ್ರೇಷ್ಠ ಮಾನವ ಸಂಪನ್ಮೂಲವಾಗಿ ಪರಿವರ್ತಿಸಿಕೊಳ್ಳುವ ವಿಫುಲ ಅವಕಾಶಗಳಿವೆ. ಅತಿಹೆಚ್ಚು ಎಂಜಿನಿಯರ್‌, ತಂತ್ರಜ್ಞರು, ವೈದ್ಯರು, ಪದವೀಧರರನ್ನು ಹೊಂದಿರುವ ರಾಷ್ಟ್ರ ನಮ್ಮದು’ ಎಂದರು.

‘ಕರ್ನಾಟಕದ ಗಣಿ ಸಂಪತ್ತನ್ನು ವ್ಯವಸ್ಥಿತವಾಗಿ, ಕಾನೂನುಬದ್ದವಾಗಿ ಬಳಕೆ ಮಾಡಿಕೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೆ ಸಂಪತ್ತನ್ನು ಸುರಕ್ಷಿತವಾಗಿ ಕಾಪಾಡಿಕೊಡುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ. ಗಣಿಗಾರಿಕೆಯಲ್ಲಿ ತೊಡಗಿಕೊಂಡ ಕಾರ್ಮಿಕರ ಹಿತ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಯಾವುದೇ ಅಹಿತಕರ ಘಟನೆಗೆ ನಡೆಯಲು ಅವಕಾಶ ನೀಡದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯ ಮೂಲಕ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ಮಹತ್ವಾಕಾಂಕ್ಷಿ ಜಿಲ್ಲೆ: ಜಿಲ್ಲೆಯು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಆಯ್ಕೆಯಾಗಿದ್ದು, ನವೆಂಬರ್ 2020ರಲ್ಲಿ ನೀತಿ ಆಯೋಗ ನಿಗದಿಪಡಿಸಿರುವ ಎಲ್ಲಾ ಸೂಚ್ಯಂಕಗಳ ಪ್ರಗತಿಯಲ್ಲಿ ಜಿಲ್ಲೆಯು ದೇಶದಲ್ಲಿಯೇ 2 ನೇ ಸ್ಥಾನ ಪಡೆದುಕೊಂಡಿರುವುದರಿಂದ, ನೀತಿ ಆಯೋಗವು ಜಿಲ್ಲೆಗೆ ₹2 ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆಮತ್ತು ಪ್ರವಾಹದಿಂದ ಹಾನಿಯಾದ ಮೂಲ ಸೌಕರ್ಯ ದುರಸ್ತಿಗಾಗಿ ₹10.07 ಕೋಟಿ ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ.ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 1,43,843 ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತಿದೆ. ಹೀಗೆಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ,ಲೋಕೋಪಯೋಗಿ ಇಲಾಖೆ,ನಗರಾಭಿವೃದ್ಧಿ ಇಲಾಖೆ,ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ಸಚಿವರು ವಿವರಿಸಿದರು.

ಇದೇ ವೇಳೆ ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಶಾಸಕರಾದ ನರಸಿಂಹ ನಾಯಕ (ರಾಜುಗೌಡ), ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಅಧ್ಯಕ್ಷ ಬಾಬುರಾವ ಚಿಂಚನಸೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಉಪಾಧ್ಯಕ್ಷೆ ಗಿರಿಜಮ್ಮ ಸದಾ ಶಿವಪ್ಪಗೌಡ ರೋಟ್ನಡಗಿ, ನಗರಸಭೆ ಅಧ್ಯಕ್ಷ ವಿಲಾಸ ಬಿ.ಪಾಟೀಲ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಐಎಎಸ್ ಪ್ರೊಬೆಷನರಿ ಅಶ್ವಿಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸೇರಿದಂತೆ ಅಧಿಕಾರಿಗಳು ಇದ್ದರು.

‘ಏಕತೆ ಕಾಪಾಡಲು ಒಂದಾಗಿ’

ಶಹಾಪುರ: ‘ನೆಲ, ಜಲ ಸಂರಕ್ಷಣೆ ಜತೆಗೆ ದೇಶದ ಏಕತೆ ಕಾಪಿಟ್ಟುಕೊಳ್ಳುವ ವಿಷಯದಲ್ಲೂ ನಾವೆಲ್ಲ ಒಂದಾಗಬೇಕು. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.

ತಹಶೀಲ್ದಾರ್‌ ಮಹಿಬೂಬಿ ಧ್ವಜಾರೋಹಣ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನಾಥಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಣಮಂತರಾಯ ದೊರೆ ವನದುರ್ಗ, ಪೌರಾಯುಕ್ತ ರಮೇಶ ಪಟ್ಟೆದಾರ, ಪೊಲೀಸ್ ಇನ್‌ಸ್ಪೆಕ್ಟರ್‌ ಚೆನ್ನಯ್ಯ ಹಿರೇಮಠ, ನಗರಸಭೆ ಅಧ್ಯಕ್ಷೆ ಶಹನಾಜಬೇಗಂ ದರ್ಬಾನ್, ರಾಜಕುಮಾರ ಪತ್ತಾರ ಹಾಗೂ ಸಿದ್ದಲಿಂಗಪ್ಪಗೌಡ ಕನ್ಯಾಕೊಳ್ಳುರ ಇದ್ದರು.

ವಿವಿಧ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಸಿಬ್ಬಂದಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.

ಬಿಜೆಪಿ ಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಬಿಜೆಪಿ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ಡಾ.ಚಂದ್ರಶೇಖರ ಸುಬೇದಾರ, ದೇವಿಂದ್ರ ಕೊನೇರ ಹಾಗೂ ಗುರು ಕಾಮಾ ಇದ್ದರು.

ಸ್ಥಳೀಯ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ ಅವರು ದ್ವಜಾರೋಹಣ ನೆರವೇರಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ, ಶಿರಸ್ತೆದಾರರಾದ ಸುನಿತಾ, ಮಲ್ಲಣ್ಣ ಮಡಿವಾಳಕರ್ ಹಾಗೂ ರಿಜ್ವಾನ್ ಅರಿಕೇರಿ ಇದ್ದರು.

‘ಶ್ರೇಷ್ಠ ಸಂವಿಧಾನ’

ಸೈದಾಪುರ: ‘ಸಮಾನತೆ, ಮಾನವೀಯತೆ, ಸಹೋದರತೆ, ಜಾತ್ಯಾತೀತ, ಸಮಾಜವಾದಿ ಆಶಯಗಳನ್ನು ಮೂಡಿಸುವ ಶ್ರೇಷ್ಠ ಸಂವಿಧಾನ ನಮ್ಮದು. ಇದರ ಮಹತ್ವ ಎಲ್ಲರೂ ತಿಳಿಯುವಂತಾಗಬೇಕು’ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ ಅಭಿಪ್ರಾಯಪಟ್ಟರು.

72ನೇ ಗಣರಾಜ್ಯೋತ್ಸವ ಪ್ರಯುಕ್ತ ಪಟ್ಟಣದ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಸಂವಿಧಾನದ ಆಶಯದ ಪ್ರಕಾರ ದೇಶದ ಪ್ರಗತಿ ಆಗಬೇಕು’ ಎಂದು ಹೇಳಿದರು.

ಸಮಾಜ ವಿಜ್ಞಾನ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಮಾತನಾಡಿ,‘ಡಾ.ಬಿ.ಆರ್.ಅಂಬೇಡ್ಕರ್‌ ನೇತೃತ್ವದಲ್ಲಿ ರಚನೆಯಾದ ಶ್ರೇಷ್ಠ ಸಂವಿಧಾನ ನಮ್ಮದು. ವಿವಿಧ ಜಾತಿ, ಧರ್ಮಗಳಲ್ಲಿಯೂ ಏಕತೆ ಕಾಣುವ ಶಕ್ತಿ ನಮ್ಮ ದೇಶಕ್ಕಿದೆ. ಇದನ್ನು ಕಾಪಾಡುವ ಮೂಲಕ ದೇಶದ ಅಭಿವೃದ್ಧಿಗೆ ಪ್ರಯತ್ನಿಸಬೇಕು’ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಸಹ ಕಾರ್ಯದರ್ಶಿ ಮಲ್ಲುಗೌಡ ಸೈದಾಪುರ, ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ರಾಜಶೇಖರ ಪಾಟೀಲ ಶೆಟ್ಟಹಳ್ಳಿ, ಮುಖ್ಯಶಿಕ್ಷಕ ಲಿಂಗಾರಡ್ಡಿ ನಾಯಕ, ವೆಂಕಟೇಶ ಸಗರ, ಪ್ರಾಂಶುಪಾಲರಾದ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ಹಂಪಣ್ಣ ಸಜ್ಜನ ಶೆಟ್ಟಿ. ಜಿ.ಎಸ್.ಗುರುನಂಜಿ, ಸಾಬಯ್ಯ ರಾಯಪ್ಪನೋರ ಹಾಗೂ ದೇವಿಂದ್ರ ಪೀರಾ ಇದ್ದರು.

***

ಜಿಲ್ಲೆಯ ಜನ ಭಾವೈಕ್ಯದ ಪ್ರತೀಕವಾಗಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಅಂಗವಾದ ಯಾದಗಿರಿ ಕರ್ನಾಟಕದ ಅಸ್ಮಿತೆಯ ಸಂಕೇತ ಮುರುಗೇಶ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT