ಶುಕ್ರವಾರ, ಅಕ್ಟೋಬರ್ 22, 2021
29 °C

ಕಕ್ಕೇರಾ: ಹೊಟ್ಟೆಪಾಡಿಗಾಗಿ ಬೀದಿ ಬದಿ ಸರ್ಕಸ್

ಮಹಾಂತೇಶ ಸಿ. ಹೊಗರಿ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಛತ್ತೀಸಗಡ್‌ನಿಂದ ಬಂದ ಅಲೆಮಾರಿ ಕುಟುಂಬವೊಂದು ಜೀವನೋಪಾಯಕ್ಕಾಗಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಸರ್ಕಸ್‌ ಮೂಲಕ ಸಾಹಸಮಯ ಕಲೆಗಳನ್ನು ಪ್ರದರ್ಶಿಸಿತು.

ಅಲೆಮಾರಿ ಜೀವನ ನಡೆಸುವ ಬೀದಿ ಸರ್ಕಸ್ ಕುಟುಂಬವು ಇಲ್ಲಿನ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಕನದಾಸ, ವಾಲ್ಮೀಕಿ ವೃತ್ತ ಸೇರಿದಂತೆ ಹಲವೆಡೆ ತಮ್ಮ ಕಲೆಗಳ ಪ್ರದರ್ಶನ ನಡೆಸಿ ಜನರನ್ನು ಸೆಳೆಯಿತು.

6 ಜನ ಕುಟುಂಬ ಸದಸ್ಯರ ತಂಡದಲ್ಲಿನ ಬಾಲಕಿಯೊಬ್ಬಳು ವಾಲ್ಮೀಕಿ ವೃತ್ತದ ಬಳಿ ಸುಮಾರು 25 ಅಡಿ ಎತ್ತರದ ಹಗ್ಗದ ಮೇಲಿನ ನಡಿಗೆಯ ಸಾಹಸವು ನೋಡುಗರ ಮೈ ಜುಮ್ ಎನ್ನುವಂತಿತ್ತು.

ಎರಡು ಕಂಬಗಳ ಮಧ್ಯೆ ಕಟ್ಟಲಾದ ಹಗ್ಗದ ಮೇಲೆ ಬಾಲಕಿಯೊಬ್ಬಳು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ನಡೆದಳು. ಆಯತಪ್ಪಿ ಬೀಳದಿರಲೆಂದು ತನ್ನ ಸಮತೋಲನ ಕಾಯ್ದುಕೊಳ್ಳಲು ಉದ್ದನೆಯ ಕೋಲು ಹಿಡಿದುಕೊಂಡು ಸಾಗಿದ ಕಸರತ್ತು ಜನರನ್ನು ಬಹುವಾಗಿ ಸೆಳೆಯಿತು.

ಅಸಾಧ್ಯವಾದ ವ್ಯಾಯಾಮ ರೀತಿಯ ಸವಾಲೆನಿಸುವ ಕಲೆಯ ಪ್ರದರ್ಶನದಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಹೊಟ್ಟೆ ಪಾಡಿಗಾಗಿ ವೈವಿಧ್ಯಮಯ ಪ್ರದರ್ಶನಗಳನ್ನು ನೀಡುತ್ತಾರೆ. ಅಪಾಯಕಾರಿಯಾದ ಕಲೆಗಳನ್ನು ಪ್ರದರ್ಶಿಸುವಲ್ಲಿಯೂ ಅವರು ಹಿಂಜರಿಯುವುದಿಲ್ಲ. ಸಾಹಸಮಯ ಪ್ರದರ್ಶನಗಳಿಂದ ನೋಡುಗರನ್ನು ರಂಜಿಸುತ್ತಾರೆ. ತಮ್ಮ ಅಲೆಮಾರಿ ಬದುಕು ಕಟ್ಟಿಕೊಳ್ಳಲು ಊರಿಂದ ಊರಿಗೆ ಸಾಗುತ್ತಾ ಪ್ರಮುಖ ಬೀದಿಗಳಲ್ಲಿ, ಸಂತೆಯಲ್ಲಿ, ಜಾತ್ರೆಗಳಲ್ಲಿ ಪ್ರದರ್ಶನ ನೀಡುತ್ತಾರೆ. ಅವರ ಕಲೆಯನ್ನು ಮೆಚ್ಚಿ ಜನರು ನೀಡುವ 5, 10 ರೂಪಾಯಿಯಲ್ಲಿ ಜೀವನ ಸಾಗಿಸುತ್ತಾರೆ ಎನ್ನುತ್ತಾರೆ ರಾಘವೇಂದ್ರ ಪತ್ತಾರ.

ಪಟ್ಟಣದಲ್ಲಿ 3–4 ದಿನ ಇದ್ದು ಹಗಲುವೇಷಧಾರಿಗಳು ವಿವಿಧ ಆಟಗಳ ಪ್ರದರ್ಶನ ನೀಡುತ್ತಾರೆ. ಸ್ಥಳೀಯರು ಕೊಡುವ ಅಕ್ಕಿ, ಜೋಳ, ರೋಟಿ, ಹಳೆಯ ಬಟ್ಟೆ, ಧಾನ್ಯ, ಹಣ ಪಡೆಯುತ್ತಾರೆ. ಅವರ ಕಲೆಯನ್ನು ಮೆಚ್ಚಿದ ಕೆಲವರು ಪ್ರದರ್ಶನದ ಮಧ್ಯೆಯೇ ಹಣ ಕೊಡುತ್ತಾರೆ. ಇಷ್ಟೇ ಕೊಡಬೇಕು ಎಂದು ಅವರು ಯಾರಿಗೂ ಒತ್ತಾಯ ಮಾಡುವುದಿಲ್ಲ. ಎಷ್ಟೇ ಕೊಟ್ಟರೂ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎನ್ನುತ್ತಾರೆ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಪರಮಣ್ಣ ಹಡಪದ. 

ಮೂರು ತಲೆಮಾರಿನಿಂದ ಹಗಲು ವೇಷಧಾರಿಗಳ ಪಾತ್ರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರತಿಲ್ಲ ಎನ್ನುತ್ತಾರೆ ಕಲಾವಿದ ರಮೇಶ.

ಸಣ್ಣ ವಯಸ್ಸಿನಿಂದ ವೇಷಗಾರರ ಆಟವನ್ನು ನೋಡಿಕೊಂಡು ಬೆಳೆದಿದ್ದೇವೆ. ಈಗಲೂ ಸಿಂಧೂರ ಲಕ್ಷ್ಮಣನ ಆಟ ನೋಡುವುದೆಂದರೆ ನಮಗೆ ಬಹಳ ಇಷ್ಟ ಎಂದರು.

***

ಕಕ್ಕೇರಾ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೀದಿ ಬದಿ ಕಲಾವಿದರು ನೃತ್ಯ ಹಾಗೂ ಸಾಹಸ ಕಲೆಗಳ ಪ್ರದರ್ಶನ ನೀಡುತ್ತಾರೆ. ಸರ್ಕಾರ ಬಡ ಕಲಾವಿದರನ್ನು ಗುರುತಿಸಿ ಸಹಾಯಧನ ನೀಡಬೇಕು

-ಮುದ್ದಣ್ಣ ಅಮ್ಮಾಪುರ, ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು