ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ನೆಲವೀಗ ಹಸಿರು ತೋಟ

ವಿಶೇಷ ಗಿಡ ಬೆಳೆಸುವ ಆಸಕ್ತಿ; ಮಲ್ಲೇಶಪ್ಪ ಕೈಹಿಡಿದ ಪ್ರಯೋಗಶೀಲತೆ
Last Updated 9 ಏಪ್ರಿಲ್ 2022, 3:44 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದ 75 ವರ್ಷದ ಮಲ್ಲೇಶಪ್ಪ ಬೇಲಿ ಅವರು ಪ್ರಯೋಗಶೀಲ ತೋಟಗಾರಿಕೆಯಿಂದ ಬರಡಾಗಿದ್ದ ನೆಲವನ್ನು ಹಚ್ಚ ಹಸುರಿನ ತೋಟವಾಗಿಸಿ ಸಾಧನೆ ಮಾಡಿದ್ದಾರೆ. ಅದರಲ್ಲೂ ಇಲ್ಲಿನ ವಾತಾವರಣಕ್ಕೆ ಒಗ್ಗುವುದಿಲ್ಲ ಎನ್ನುವಂಥ ಗಿಡಗಳನ್ನೂ ಬೆಳೆಸುವ ಜಿದ್ದಿನ ಪ್ರಯೋಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಖಾನಾವಳಿಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರಿಗೆ ತೋಟಗಾರಿಕೆಯಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಜಮೀನು ಇಲ್ಲದ ಕಾರಣ ಅದು ಸಾಧ್ಯವಾಗಿರಲಿಲ್ಲ.

‘ಕುಟುಂಬ ನಿರ್ವಹಣೆ ನಂತರ ಉಳಿದ ಹಣದಲ್ಲಿ 30 ವರ್ಷಗಳ ಹಿಂದೆ 4 ಎಕರೆ 20 ಗುಂಟೆ ಬರಡು ಭೂಮಿ ಖರೀದಿಸಿದ್ದೆ, ಅದನ್ನು ನೋಡಿ ಎಲ್ಲರೂ ನಕ್ಕಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಕಳೆದ ಐದು ವರ್ಷಗಳಿಂದ ಬಿಡುವು ಮಾಡಿಕೊಂಡ ಅವರು ಕೊಳವೆಬಾವಿ ಕೊರೆಸಿದರು. 200 ಅಡಿ ಆಳದಲ್ಲಿ ಕೇವಲ 1 ಇಂಚು ನೀರು ಸಿಕ್ಕಿತು. ಹನಿ ನೀರಾವರಿ ಮೂಲಕ 2 ಎಕರೆಯಲ್ಲಿ ತೋಟಗಾರಿಕೆ ಕೃಷಿ ಆರಂಭಿಸಿದರು.

ಬೆಂಗಳೂರಿಂದ ತೋತಪುರಿ, ಬರನಿಷಾ, ತೆಲಂಗಾಣದಿಂದ ಚಿನ್ನರಸಂ, ಪೆದ್ದರಸಂ ತಳಿಯ ತಲಾ 10 ಮಾವಿನ ಸಸಿ, ಹಿಮಾಚಲ ಪ್ರದೇಶದಿಂದ ಸೇಬು ಹಣ್ಣಿನ 5 ಹೆಣ್ಣು ಮತ್ತು 1 ಗಂಡು ಸಸಿ, ಹುಬ್ಬಳ್ಳಿಯಿಂದ ಸರ್ವಸುಗಂಧಿ, ದಾಲ್ಚಿನ್ನ, ಚಕೋತ, ರಿಚ್ಚಿ ಲೀಫ್ ಸಸಿ, ಮನೆಯ ಮುಂದಿನ ತೆಂಗಿನ ಗಿಡದಿಂದ 6 ಸಸಿ ತಯಾರಿ, 10 ಪುಷ್ಕಳ ತಳಿಯ ತೆಂಗಿನ ಸಸಿಗಳು ಸೇರಿ ಒಟ್ಟು 32 ಸಸಿ, ತೋಟದ ಬೇಲಿಯ ಜತೆಗೆ ನುಗ್ಗೆ ಸಸಿಗಳನ್ನು, ಕಲ್ಲು ಬಾಳೆ ಸಸಿಗಳನ್ನು ಬೆಳೆಸಿದ್ದಾರೆ.

ಈಗ 22 ತೆಂಗಿನ ಗಿಡಗಳು, ಮಾವಿನ ಗಿಡಗಳು ಫಲ ನೀಡಲು ಆರಂಭಿಸಿವೆ. ತೋಟದಲ್ಲಿ ಬೆಳೆದ ಸೇಬು ಹಣ್ಣನ್ನು ಮನೆಯವರೆಲ್ಲ ತಿಂದು ರುಚಿ ನೋಡಿದ್ದಾರೆ.

ಉಳಿದ 2 ಎಕರೆಯಲ್ಲಿ ಸಹಾಯಕ್ಕಾಗಿ ಒಬ್ಬರನ್ನು ಜತೆಯಾಗಿಸಿಕೊಂಡು ಟೊಮೆಟೊ, ಹಸಿಮೆಣಸು, ಬದನೆ, ಚವಳೆ, ಅವರೆ, ಹೀರೆಕಾಯಿ, ಬೆಂಡೆಕಾಯಿ, ಕುಂಬಳ, ಸೌತೆ, ಎಲೆಕೋಸು, ಮೆಂಥೆ ಬೆಳೆಸುತ್ತಿದ್ದಾರೆ.

‘ಇನ್ನೂ ಹೆಚ್ಚಿನ ನೀರಿದ್ದರೆ ಉತ್ತಮ ತೋಟ ಬೆಳೆಸಬಹುದಿತ್ತು’ ಎನ್ನುವ ಅವರಲ್ಲಿ ಯೌವನದ ಕ್ರಿಯಾಶೀಲತೆ ಕಾಣಿಸಿಕೊಳ್ಳುತ್ತದೆ.

ತಮ್ಮ ತೋಟಕ್ಕೆ ಬರುವವರಿಗೆ ತಮ್ಮ ಕೈಯಿಂದಲೇ ಎಳನೀರು ತೆಗೆದು ಕುಡಿಸುವ ಅವರು, ಪ್ರತಿ ಗಿಡವೂ ಮಾತಾಡುತ್ತವೆ ಎಂದು ಕಾಳಜಿಯಿಂದ ತಿಳಿಸುತ್ತಾರೆ. ನಾವು ಬೆಳೆಯಲು ಇಚ್ಛಿಸುವ ತೋಟದ ಕುರಿತು ಚೆನ್ನಾಗಿ ಅರಿತು, ಪಾಲಿಸುವುದು, ಸ್ವಚ್ಛತೆ, ಆರೈಕೆ ಹಾಗೂ ಸಮಯಕ್ಕೆ ಸರಿಯಾಗಿ ನೀರುಣಿಸಿದರೆ ಎಂಥ ಬರಡನ್ನೂ ಹಸಿರಾಗಿಸಬಹುದು ಎನ್ನುವುದು ಅವರ ವಿಶ್ವಾಸದ ಮಾತುಗಳು.

ಆಸಕ್ತರು ತೋಟಗಾರಿಕೆಯ ಮಾಹಿತಿ ಪಡೆಯಲು ಅವರನ್ನು (ಮೊ. 9986703512) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT