ಶನಿವಾರ, ಸೆಪ್ಟೆಂಬರ್ 18, 2021
28 °C
ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರೆಡ್ಡಿ ಅಭಿಮತ

ಯಾದಗಿರಿ: ಆತ್ಮಹತ್ಯೆ ಒಂದೇ ಪರಿಹಾರವಲ್ಲ -ಶಾಸಕ ಮುದ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರೈತರು ತಾವು ಮಾಡಿದ ಸಾಲವನ್ನು ತೀರಿಸಲಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಒಂದೇ ಪರಿಹಾರವೆಂದು ನಿರ್ಧರಿಸುವುದು ಸರಿಯಲ್ಲ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಒಂದು ವರ್ಷದಲ್ಲಿ 1,75,000 ಜನರು ಆತ್ಮಹತ್ಯೆಗೆ ಒಳಗಾಗುತ್ತಾರೆ. ಸುಮಾರು 7 ವರ್ಷಗಳಿಂದಾಗಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಜಗತ್ತಿನಲ್ಲಿ ಅಸಾಧ್ಯವೆಂಬುದು ಯಾವುದು ಇಲ್ಲ. ಜೀವನದಲ್ಲಿ ಸೋತಾಗ ಸಾವು ಒಂದೇ ಎಂಬುದು ಸಹಜ. ಆದರೆ, ಸೋಲಿನಲ್ಲಿಯೂ ಗೆಲುವುವನ್ನು ಕೊಂಡುಕೊಳ್ಳವುದೇ ಜೀವನದ ಬಹುಮುಖ್ಯ ಧ್ಯೇಯವಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅಂಕಗಳೇ ಮುಖ್ಯವಲ್ಲ. ನಿರೀಕ್ಷಿತ ಫಲಿತಾಂಶ ಬರಲಿಲ್ಲವೆಂದು ಆತ್ಮಹತ್ಯೆ ಮೋರೆಹೋಗುವುದು ಸರಿಯಲ್ಲ. ಝೀರೋ ಇದ್ದವರೂ ಮುಂದೆ ಹೀರೊ ಆಗಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಭಾಗವಾಗಿರುತ್ತಾನೆ. ಅಲ್ಲದೆ ಅಂಥ ನೊಂದ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುವುದನ್ನು ತಡೆಗಟ್ಟಿ, ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಕುಟುಂಬದ ಸಹಕಾರದ ಜೊತೆಗೆ ಸಮಾಜದ ಸಹಾಯ ಮತ್ತು ಸಾಂತ್ವನ ಅಗತ್ಯ. ದೇಶದಲ್ಲಿ ಸುಮಾರು 15ರಿಂದ 35 ವಯಸ್ಸಿನವರೇ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಕೈಗೊಳ್ಳುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದಕಾರಣ ಆತ್ಮಹತ್ಯೆಗೆ ಅನೇಕ ಕಾರಣಗಳಿದ್ದರೂ ಒಂದು ಕ್ಷಣ ನಮ್ಮವರಿಗಾಗಿ ಯೋಚನೆ ಮಾಡಬೇಕು ಎಂದು ಹೇಳಿದರು.

ಮಾನಸಿಕ ಖಿನ್ನತೆಯ ಬಗ್ಗೆ ಸಮಾಜದಲ್ಲಿ ಅಪನಂಬಿಕೆ ಮತ್ತು ಮೌಢ್ಯತೆ ಹೆಚ್ಚಾಗಿದೆ. ಅದನ್ನು ಯುವಜನತೆ ಹೋಗಲಾಡಿಸಬೇಕು. ಮಾನಸಿಕ ಖಿನ್ನತೆಯ ಬಗ್ಗೆ ಕುಟುಂಬ ಮತ್ತು ಸಮಾಜದಲ್ಲಿ ಅರಿವು ಮೂಡಿಸಬೇಕು. ಮಾನಸಿಕ ಆರೋಗ್ಯದ ಕುರಿತು ಸರ್ವೆ ಮಾಡಿ ಅವಶ್ಯವಿರುವವರಿಗೆ ಆಪ್ತಸಮಾಲೋಚನೆ ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಶರ್ಮಾ ಮಾತನಾಡಿ, ಮಕ್ಕಳು ಹೆಚ್ಚಾಗಿ ಹಿರಿಯರ ಮತ್ತು ಪೂರ್ವಜರ ಮಾತುಗಳನ್ನು ಆಲಿಸುತ್ತಿದ್ದರೇ ಅವರಿಗೆ ಜೀವನದ ಶೈಲಿ ಬದಲಾಗುತ್ತದೆ. ಆತ್ಮಶಕ್ತಿ, ಆತ್ಮವಿಶ್ವಾಸದಿಂದ ಮುನ್ನುಗಿ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಸಲಹೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಮಾತನಾಡಿ, ಒಬ್ಬ ವ್ಯಕ್ತಿ ತಮ್ಮ ವ್ಯಕ್ತಿತ್ವ ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ ಅವನ ಮಾನಸಿಕ ಸ್ಥಿತಿಯೂ ಮುಖ್ಯ. ಅಚಲ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಜೀವನದಲ್ಲಿನ ತೊಡಕುಗಳನ್ನು ಸಮರ್ಪಕವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಭಗವಂತ ಅನವಾರ, ಆರ್‌ಎಚ್‌ಒ ಅಧಿಕಾರಿ ಡಾ.ಲಕ್ಷ್ಮೀಕಾಂತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಎಸ್.ಚಂಡ್ರಿಕಿ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.