ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗು ಕಳೆದುಕೊಂಡ ಹೋಳಿ ವೈಭವ

ಸುರಪುರ: ಹಾಡು, ಕಳ್ಳತನ, ಅಣಕು ಶವಯಾತ್ರೆ, ಕತ್ತೆ ಸವಾರಿ...
ಅಶೋಕ ಸಾಲವಾಡಗಿ
Published 24 ಮಾರ್ಚ್ 2024, 6:39 IST
Last Updated 24 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಸುರಪುರ: ಅದು 1990ರ ಕಾಲ. ಇಲ್ಲಿನ ಹೋಳಿ ಆಚರಣೆಯ ವೈಭವ ಪರಾಕಾಷ್ಠೆಯಲ್ಲಿದ್ದ ಸಮಯ. ರಂಗಿನಾಟ ನೋಡಲೆಂದೇ ದೂರದಿಂದ ನೆಂಟರು ಬರುತ್ತಿದ್ದರು. ಅವರೂ ಭಾಗಿಯಾಗಿ ಸಂಭ್ರಮಿಸುತ್ತಿದ್ದರು.

ಶಿವರಾತ್ರಿ ಅಮಾವಾಸ್ಯೆ ಮರುದಿನ ಚಂದಿರನ ದರ್ಶನವಾಗುತ್ತಿದ್ದಂತೆ ಯುವಕರು ಹೋಳಿ ಆಚರಣೆಗೆ ಸಜ್ಜಾಗುತ್ತಿದ್ದರು. ಹೋಳಿ ಹುಣ್ಣಿಮೆಯ ಮರುದಿನದವರೆಗೂ ಬಣ್ಣ ಎರಚುವುದು ನಡೆಯುತ್ತಿತ್ತು.

ನಿತ್ಯ ಸಂಜೆ ಆಯಾ ಬಡಾವಣೆಯ ಯುವಕರು ತಂಡ ಕಟ್ಟಿಕೊಂಡು ಹಲಗೆ ಭಾರಿಸುತ್ತಾ ಹೋಳಿ ಹಾಡುಗಳನ್ನು (ದುಂದುಮೆ) ಹಾಡುತ್ತಿದ್ದರು. ಮಧ್ಯರಾತ್ರಿಯ ನಂತರವೇ ಮನೆಗೆ ತೆರಳುತ್ತಿದ್ದರು.
ಕತ್ತೆಗಳ ಸವಾರಿ ಮಾಡುತ್ತಿದ್ದರು.

ಹುಣ್ಣಿಮೆಯ ದಿನ ಕಾಮ ದಹನ ವಿಶೇಷವಾಗಿರುತ್ತಿತ್ತು. ಕಾಮನ ದಹಿಸಲು 15 ದಿನ ಯುವಕರು ಕಟ್ಟಿಗೆ, ಕುರುಳಿನ ಕಳ್ಳತನ ಮಾಡುತ್ತಿದ್ದರು. ಕಾಮದೇವನ ಚಿತ್ರಪಟವನ್ನು ಕೋಲಿಗೆ ಕಟ್ಟಿ ಮೆರವಣಿಗೆ ಮಾಡಿ ನಿರ್ಧಿಷ್ಟ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸಿ ದಹನ ಮಾಡುತ್ತಿದ್ದರು. ಎರಡು ಮೂರು ದಿನ ಬೆಂಕಿ ಇರುತ್ತಿತ್ತು. ಬಡಾವಣೆಯ ಜನರು ಕೆಂಡವನ್ನು ಮನೆಗೆ ಒಯ್ದು ಅದರಿಂದ ದೀಪ ಬೆಳಗಿಸುತ್ತಿದ್ದರು.

ಕಾಮ ದಹನದ ಸಲುವಾಗಿ ಮನೆ ಮನೆಗೆ ತೆರಳಿ ಚಂದಾ ಸಂಗ್ರಹಿಸಲಾಗುತ್ತಿತ್ತು. ಮರು ದಿನ ಬಣ್ಣದಾಟದ ನಂತರ ಯುವಕರೆಲ್ಲ ಸೇರಿ ತಿಂಡಿ ಮಾಡಿಸಿ ತಿನ್ನುತ್ತಿದ್ದರು. ಪ್ರಸಾದವನ್ನು ದೇಣಿಗೆ ಕೊಟ್ಟವರಿಗೆ ವಿತರಿಸುತ್ತಿದ್ದರು.

ಹುಣ್ಣಿಮೆಯ ಮರುದಿನ ಬೆಳಿಗ್ಗೆಯಿಂದಲೇ ರಂಗಿನಾಟ ಜೋರು ಪಡೆಯುತ್ತಿತ್ತು. ಅರಮನೆ, ಮಾರುಕಟ್ಟೆ ಇತರ ಪ್ರದೇಶಗಳಲ್ಲಿ ಬ್ಯಾರೆಲ್‌ಗಟ್ಟಲೆ ಬಣ್ಣ ಕಲಿಸಿ ಇಟ್ಟು ವ್ಯಕ್ತಿಗಳನ್ನು ಅದರಲ್ಲಿ ಮುಳುಗಿಸುತ್ತಿದ್ದರು.

ತಮ್ಮ ಸ್ನೇಹಿತರ ಮನೆ ಮನೆಗೆ ತೆರಳಿ ಅವರಿಗೆ ಬಣ್ಣ ಹಚ್ಚುತ್ತಿದ್ದರು. ಅವರ ಮನೆಯ ಮುಂದೆ ದುಂದುಮೆ ಪದ ಹಾಡಿ ಲಬೋ ಲಬೋ ಎನ್ನುತ್ತಿದ್ದರು. ಅವರನ್ನೂ ಜತೆ ಕರೆದುಕೊಂಡು ಹೋಗುತ್ತಿದ್ದರು. ಕೆಲವರು ಶವಯಾತ್ರೆ ಇತರ ಅಣುಕು ಪ್ರದರ್ಶನ ಮಾಡಿ ರಂಜಿಸುತ್ತಿದ್ದರು. ಸಂಜೆವರೆಗೂ ನಡೆಯುತ್ತಿದ್ದ ಬಣ್ಣದಾಟವನ್ನು ನಿಲ್ಲಿಸಲು ಪೊಲೀಸರಿಗೆ ಸಾಕು ಬೇಕಾಗುತ್ತಿತ್ತು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಇಲ್ಲಿನ ಗೋಸಲ ದೊರೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಕುರಿತಾದ ದುಂದುಮೆ ಹಾಡನ್ನು ಗುತ್ತೇದಾರ ತಂಡ ಹೋಳಿ ಹುಣ್ಣಿಮೆಯ ಎರಡು ದಿನ ಆಮಂತ್ರಿಸಿದ ಮನೆಗೆ ತೆರಳಿ ಹಾಡುತ್ತಿದ್ದರು. ಹಾಡು ಹಾಡಲು ಹೆಚ್ಚು ಬೇಡಿಕೆ ಇತ್ತು.

ಮೊಬೈಲ್, ಟಿವಿ ದಾಂಗುಡಿ ಇಡುತ್ತಿದ್ದಂತೆ ಕ್ರಮೇಣ ಇಲ್ಲಿನ ಹೋಳಿ ವೈಭವ ಕಡಿಮೆಯಾಗತೊಡಗಿತು. ಯುವಕರು ಆಚರಣೆಯಲ್ಲಿ ಆಸಕ್ತಿ ಕಳೆದುಕೊಳ್ಳ ತೊಡಗಿದರು. ಈಗ ಕಾಟಾಚಾರಕ್ಕ ಎಂಬಂತೆ ಕಾಮ ದಹನ ಮತ್ತು ಬಣ್ಣದಾಟಕ್ಕೆ ಹಬ್ಬ ಸಿಮೀತಗೊಂಡಿದೆ. ವೈಭವ ಮರೆ ಮಾಚಿದೆ.

ಲಕ್ಷ್ಮಣ ಗುತ್ತೇದಾರ
ಲಕ್ಷ್ಮಣ ಗುತ್ತೇದಾರ
ಮಾನು ಗುರಿಕಾರ
ಮಾನು ಗುರಿಕಾರ

ಆಗಿನ ಹೋಳಿ ಹಬ್ಬದ ಸಂಭ್ರಮ ಈಗಿಲ್ಲ. 15 ದಿನ ಎಲ್ಲವನ್ನು ಮರೆತು ಆಚರಣೆಗೆ ಮೀಸಲಿರುತ್ತಿತ್ತು. ಈಗಿನ ಧಾವಂತ ದುರಾಸೆ ವೈಭವವನ್ನು ಕಸಿದುಕೊಂಡಿದೆ

-ಲಕ್ಷ್ಮಣ ಗುತ್ತೇದಾರ ದುಂದುಮೆ ಹಾಡುಗಾರ

ಹೋಳಿ ಆಚರಣೆ ನಮ್ಮ ಸನಾತನ ಪರಂಪರೆ. ಶ್ರೀಕೃಷ್ಣ ಗೋಪಿಕೆಯರೊಂದಿಗೆ ರಂಗಿನಾಟ ಆಡಿದ ಪೌರಾಣಿಕ ಉಲ್ಲೇಖವಿದೆ. ಬಣ್ಣದಾಟದಲ್ಲಿ ಎಲ್ಲರೂ ಭಾಗವಹಿಸಬೇಕು

-ಮಾನು ಗುರಿಕಾರ ನಿವೃತ್ತ ಉಪನ್ಯಾಸಕ

ಅಶ್ಲೀಲ ಹಾಡುಗಳ ಭರಾಟೆ ‘ಬೇರಿ ಬಾವ್ಯಾಗ ಬಿದ್ದಾದ ಬಂಡಿ ಅವನಮ್ಮ... ಎತ್ತ್ಯಾನ… ...ದುಂದುಮೆ ಬಸವಂತಾನೆ ಹಬ್ಬ’ ಎಂಬ ಅಸಂಖ್ಯ ಅಶ್ಲೀಲ ಹಾಡುಗಳು ಯುವಕರ ಬಾಯಿಯಿಂದ ಅಸ್ಖಲಿತವಾಗಿ ಹರಿದಾಡುತ್ತಿದ್ದವು. ಅದಕ್ಕೆ ದಮಡಿ ಹಲಗೆ ಹಿಮ್ಮೇಳದ ಸಾಥ್ ಇರುತ್ತಿತ್ತು. 15 ದಿನದ ಈ ಹಾಡಿಗೆ ಯಾರ ಪ್ರತಿರೋಧವೂ ಇರುತ್ತಿರಲಿಲ್ಲ. ಎಲ್ಲರೂ ನಗುತ್ತಾ ಸ್ವೀಕರಿಸುತ್ತಿದ್ದರು. ತಾವೂ ಪ್ರತಿಯಾಗಿ ಸವಾಲು ಜಬಾಬು ರೀತಿ ಹಾಡಿ ಸಂಭ್ರಮಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT