ಬುಧವಾರ, ಏಪ್ರಿಲ್ 14, 2021
24 °C
ಬೇಸಿಗೆ ಆರಂಭವಾದರೂ ಎಚ್ಚೆತ್ತುಕೊಳ್ಳದ ನಗರಸಭೆ ಅಧಿಕಾರಿಗಳು

ಶಹಾಪುರ ನಗರಕ್ಕೆ ಅಶುದ್ಧ ನೀರೇ ಗತಿ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಬೇಸಿಗೆಯ ನಾಲ್ಕು ತಿಂಗಳು ನಗರ ಹೊರವಲಯದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹಿಸಿದ ನೀರೇ ನಗರದ ಜನರಿಗೆ ಆಸರೆ. ಆದರೆ, ನೀರು ಸರಬರಾಜು ಮಾಡುವ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿವೆ. ನೀರು ಶುದ್ಧೀಕರಿಸುವ ಘಟಕ ಸ್ಥಗಿತವಾಗಿದೆ. ಕೆರೆ ಪ್ರದೇಶದ ಸುತ್ತಲೂ ಸುರಕ್ಷತೆ ಹಾಗೂ ಸ್ವಚ್ಛತೆ ಇಲ್ಲವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.

‘ಶಹಾಪುರ ಎಸ್‌ಬಿಸಿ ಕಾಲುವೆ ಮೂಲಕ ನೇರವಾಗಿ ಕೆರೆಗೆ ನೀರು ಸಂಗ್ರಹಿಸಿಕೊಂಡು ನಂತರ ನಗರದ 31 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತದೆ. ಕಾಲುವೆಯಲ್ಲಿ ಇನ್ನೂ 20 ದಿನ ನೀರು ಹರಿಸಲಾಗುತ್ತದೆ. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಿಕೊಳ್ಳುವುದು ಮುಖ್ಯವಾಗಿದೆ. ಆದರೆ ಕೆರೆ ಸುತ್ತಲಿನ ಪ್ರದೇಶದಲ್ಲಿ ಜಾಲಿಗಿಡ ಬೆಳೆದು ನಿಂತಿವೆ. ಬ್ಲಿಚಿಂಗ್ ಪೌಡರ್‌ ಹಾಕದಿದ್ದರೆ ನೀರು ದುರ್ವಾಸನೆ ಬೀರುತ್ತದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ನಮ್ಮನ್ನು ಕಾಡುತ್ತಿದೆ’ ಎನ್ನುತ್ತಾರೆ ನಗರದ ನಿವಾಸಿ ಮಾನಪ್ಪ ಹಡಪದ.

‘ನಗರದಲ್ಲಿ ಒಟ್ಟು 250 ಬೊರ್‌ವೆಲ್ ಇವೆ. 106 ಕಿರು ನೀರು ಸರಬರಾಜು ಯಂತ್ರ, 3,500 ಮನೆಗಳಿಗೆ ನಲ್ಲಿ ಜೋಡಣೆ ಇದೆ. ಈಗ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಬೇಸಿಗೆ ದಿನಗಳಲ್ಲಿ ನೀರಿನ ಲಭ್ಯತೆಯನ್ನು ನೋಡಿ 2 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು. ನಗರದಲ್ಲಿ ಸರಬರಾಜು ಮಾಡುವ ನೀರಿನ ಪೈಪು ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ’ ಎಂಬುದು ನಗರಭೆಯ ಎಂಜಿನಿಯರ್ ಮಾಹಿತಿ.

‘ಭೀಮರಾಯನಗುಡಿಯಿಂದ ಫಿಲ್ಟರ್ ಬೆಡ್ ಪ್ರದೇಶಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 50 ಎಚ್.ಪಿ.ಯ ಎರಡು ಯಂತ್ರಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. 25 ಎಚ್.ಪಿ.ಯ ನಾಲ್ಕು ಯಂತ್ರಗಳು ಇವೆ. ಹೊಸದಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಇಂದಿಗೂ ಹನಿ ನೀರು ಸಂಗ್ರಹವಾಗಿಲ್ಲ’ ಎಂದು ಆರೋಪಿಸುತ್ತಾರೆ ನಗರದ ನಿವಾಸಿ ಉಮೇಶ.

ಬೇಸಿಗೆ ಕಾಲದಲ್ಲಿ ನಗರದಲ್ಲಿ ಇಂದಿರಾ ನಗರ, ಕುಂಬಾರ ಬಡಾವಣೆ, ಟಂಕಶಾಲೆ, ಆನೇಗುಂದಿ ಬಡಾವಣೆ, ಜಾಲಗಾರ ಬಡಾವಣೆ, ಗುತ್ತಿಪೇಟ ಹರಿಜನ ವಾರ್ಡ್, ಮಮತಾ ಕಾಲೊನಿ, ಜಮಖಂಡಿ ಬಡಾವಣೆ, ಆಶ್ರಯ ಕಾಲೊನಿ, ಚಿಂಚೋಳಿ ಓಣಿ, ಜನತಾ ಕಾಲೊನಿ, ಕೋರ್ಟ್ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಗರದ ಸಾರ್ವಜನಿಕರ ಮನವಿ.

***

ಪ್ರಗತಿ ಪರಿಶೀಲನಾ ಸಭೆ ಇಂದು

ಶಹಾಪುರ ನಗರಸಭೆಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಅಧ್ಯಕ್ಷತೆಯಲ್ಲಿ ಮಾ.2ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಕಾಮಗಾರಿ ಪರಿಶೀಲನೆ ನಡೆಯಲಿದೆ.

ವಿವಿಧ ವಸತಿ ಯೋಜನೆಗಳು, ಪಿ.ಎಂ.ಸ್ವನಿಧಿ, ನಗರೋತ್ಥಾನ -3ನೇ ಹಂತ, 14 ಹಾಗೂ 15ನೇ ಹಣಕಾಸು, ಮುಕ್ತನಿಧಿ, ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಇನ್ನಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ಕಚೇರಿಯ ಮೂಲಗಳು ತಿಳಿಸಿವೆ.

***

ಅಭಾವ ಪರಿಹಾರ ಯೋಜನೆ ಅಡಿ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸ ಲಾಗಿದೆ. ವಾರ್ಡ್ ಸದಸ್ಯರಿಂದ ಮಾಹಿತಿ ಪಡೆಯಲಾಗುತ್ತಿದೆ. ನೀರು ಶುದ್ಧೀಕರಣ ಘಟಕದ ಚಾಲ್ತಿಯಲ್ಲಿದೆ

ರಮೇಶ ಪಟ್ಟೇದಾರ, ಪೌರಾಯುಕ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು