ಶುಕ್ರವಾರ, ಅಕ್ಟೋಬರ್ 23, 2020
21 °C
ಮಿನಾಸಪುರ: ಹಳ್ಳ ದಾಟಲು ನಿರ್ಮಾಣವಾಗದ ಸೇತುವೆ

ಹಳ್ಳದಲ್ಲಿ ಶವ ಹೊತ್ತು ಸಾಗುವ ದುಸ್ಥಿತಿ: ಗುರುಮಠಕಲ್‌ನ ಮಿನಾಸಪುರದಲ್ಲಿ ಜನರ ಗೋಳು

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ತುಂಬಿ ಹರಿಯುವ ಹಳ್ಳದಲ್ಲಿ ಮೃತದೇಹವನ್ನು ಹೊತ್ತು ಅಂತಿಮ ಯಾತ್ರೆ ಸಾಗುವ ದೃಶ್ಯ ಕಂಡುಬರುವುದು ತಾಲ್ಲೂಕಿನ ಮಿನಾಸಪುರ ಗ್ರಾಮದಲ್ಲಿ. 

ಮಳೆಗಾಲದಲ್ಲಿ ಈ ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಮೃತನ ಜಮೀನು ಹಳ್ಳದ ಆಚೆಯಿದೆಯೋ ಅಥವಾ ಈಚೆಯೋ? ಎನ್ನುವುದು ಮೊದಲು ಚರ್ಚೆಗೆ ಬರುವ ವಿಷಯ. ಸಾವಿನ ಬಗ್ಗೆಯಾಗಲಿ, ಮೃತನ ಬಗ್ಗೆಯಾಗಲಿ ಚರ್ಚೆ ನಂತರದ್ದು. ಹಳ್ಳದ ಆಚೆ ಜಮೀನಿದ್ದರೆ ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲು ಹಳ್ಳದಲ್ಲಿಯೇ ಸಾಗಬೇಕಾದ ದುಸ್ಥಿತಿ ಈ ಗ್ರಾಮಸ್ಥರದ್ದು.

ಈಚೆಗೆ (ಸೆ.28 ರಂದು) ಗ್ರಾಮದ ತಮ್ಮಪ್ಪ ಎಂಬುವವರು ಮೃತಪಟ್ಟಾಗ ಶವವನ್ನು ಹಳ್ಳದಲ್ಲಿಯೇ ಹೊತ್ತೊಯ್ದು, ಆಚೆಗಿನ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ತಮ್ಮ ಜೀವನವನ್ನು ಪಣಕ್ಕಿಟ್ಟು, ಅಂತಿಮ ಯಾತ್ರೆಯಲ್ಲಿ ಸಾಗಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಿವೆ.

ಈಗಲಾದರೂ ಸಮಸ್ಯೆಗೆ ಪರಿಹಾರ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ.

‘ಗ್ರಾಮದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ರುದ್ರಭೂಮಿಯನ್ನು ಮಂಜೂರು ಮಾಡುವಂತೆ ಹಾಗೂ ಹಳ್ಳವನ್ನು ದಾಟಿ ಆಚೆಗಿನ ಜಮೀನುಗಳಿಗೆ ಹೋಗಲು ಸೇತುವೆಯನ್ನು ನಿರ್ಮಿಸುವಂತೆ ಮನವಿ ಮಾಡಿಕೊಂಡರೂ ಲಾಭ ಆಗಿಲ್ಲ. ಎಷ್ಟು ಮನವಿ ಮಾಡಿದರೂ ಉಪಯೋಗವೂ ಇಲ್ಲ. ಅದಕ್ಕೆ ಬೇಸಿಗೆಯಲ್ಲಿ ಸಾಯುವಂತಾಗಲಿ ಎಂದು ದೇವರಲ್ಲಿ ಮೊರೆಯಿಡುತ್ತೇವೆ’ ಎಂದು ಅಲವತ್ತುಕೊಳ್ಳುತ್ತಾರೆ ಗ್ರಾಮದ ಹಿರಿಯರು.

***

ಭಾರಿ ಮಳೆ ಬಂದಾಗ ಯಾರಾದರೂ ಮೃತಪಟ್ಟರೆ ಸಮಸ್ಯೆ ಆಗುತ್ತೆ. ಸೇತುವೆ ನಿರ್ಮಿಸುವಂತೆ ಮನವಿ ಮಾಡಿ ಸಾಕಾಗಿದೆ
ಶಿವಕುಮಾರ, ಮಿನಾಸಪುರ, ಗ್ರಾಮಸ್ಥರು

***

ಸರ್ಕಾರಿ ಭೂಮಿ ಅಥವಾ ಪಟ್ಟಾ ಭೂಮಿಯನ್ನು ಗುರುತಿಸಿ ರುದ್ರಭೂಮಿ ಮಂಜೂರಿಗೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು
ಸಂಗಮೇಶ ಜಿಡಗೆ, ತಹಶೀಲ್ದಾರ್, ಗುರುಮಠಕಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.