ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ಮುಖ ಕಂಡ ಈರುಳ್ಳಿ ಬೆಲೆ

ತಿಂಗಳಿಂದ ಏರಿಕೆಯಾದ ಈರುಳ್ಳಿ ಬೆಲೆ ಇಳಿಕೆ, ಟೊಮೆಟೊ ಅಗ್ಗ
Last Updated 13 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಯಾದಗಿರಿ: ತಿಂಗಳಿನಿಂದ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಇಳಿಕೆ ಮುಖ ಕಂಡಿದೆ. ಇಲ್ಲಿಯ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಕೆಜಿಗೆ ₹100 ಬೆಲೆ ಇತ್ತು. ಈರುಳ್ಳಿಯಲ್ಲಿ ಮೂರು ವಿಧಗಳಿವೆ. ಬೆಳ್ಳುಳ್ಳಿ ಗಾತ್ರದ ಈರುಳ್ಳಿಗೆ ₹ 60, ಮಧ್ಯಮ ಗಾತ್ರಕ್ಕೆ ₹ 80, ದಪ್ಪ ಈರುಳ್ಳಿಗೆ ₹100 ಕೆಜಿಗೆ ಮಾರಲಾಗುತ್ತಿದೆ.

ಕಲಬುರ್ಗಿ, ರಾಯಚೂರು, ಮಹಾರಾಷ್ಟ್ರದಿಂದ ಈರುಳ್ಳಿ ಆಮದಾಗುತ್ತಿದೆ. ಕಳೆದ ವಾರ ಮಾರುಕಟ್ಟೆಗೆ ಅಷ್ಟಾಗಿ ಈರುಳ್ಳಿ ಆವಕ ಬರುತ್ತಿರಲಿಲ್ಲ. ಈ ವಾರ ಹೆಚ್ಚಿನ ಆವಕ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ.

‘ಬೇರೆ ಜಿಲ್ಲೆ ಅಲ್ಲದೆ ಸ್ಥಳೀಯವಾಗಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಕಳೆದ ಮೂರು ದಿನದಿಂದ ಇಳಿಕೆಯಾಗಿದೆ. ಆದರೂ ಗ್ರಾಹಕರು ಹೆಚ್ಚು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿ ಕಾಸೀಂಸಾಬ್‌ ಹೇಳುತ್ತಾರೆ.

ಚಿಲ್ಲರೆ ಅಂಗಡಿಗಳಲ್ಲೂ ಇಳಿಕೆ: ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಚಿಲ್ಲರೆ ತರಕಾರಿ ಅಂಗಡಿಗಳಲ್ಲಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟಸಿರು ಬಿಟ್ಟಿದ್ದಾರೆ. ಕಳೆದ ತಿಂಗಳು ಪೂರ್ತಿ ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಇದರಿಂದ ಗ್ರಾಹಕರು ಕೆಜಿ ತೆಗೆದುಕೊಳ್ಳುವವರು ಅರ್ಧ ಕೆಜಿ ಖರೀದಿ ಮಾಡುತ್ತಿದ್ದರು.

ಮಾರುಕಟ್ಟೆಗೆ ಬಾರದ ಜನ:

ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆಯಾದರೂ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಕಳೆದ ತಿಂಗಳು ಕೆಜಿಗೆ ₹40 ಇದ್ದಿದ್ದು, ಒಮ್ಮೆಗೆ ₹80ಕ್ಕೆ ಹೆಚ್ಚಳವಾಯಿತು. ನಂತರ ₹120ಕ್ಕೆ ಏರಿಕೆಯಾಯಿತು. ಈಗ ₹20 ಕಡಿಮೆಯಾಗಿ ಕೆಜಿಗೆ ₹ 100 ಕೇಜಿಗೆ ಮಾರಾಟವಾಗುತ್ತಿದೆ ಎಂದು ಕಾಯುತ್ತಿದ್ದಾರೆ ಎಂದು ವ್ಯಾಪಾರಿ ಮಾರುತಿ ಹೇಳಿದರು.

ಹೋಟೆಲ್‌ ಮತ್ತು ತಳ್ಳುಗಾಡಿ ಎಗ್‌ ಸೆಂಟರ್‌ಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳದಿಂದ ಹೂಕೋಸು ನೀಡುತ್ತಿದ್ದಾರೆ. ನಗರದ ಮಾರುಕಟ್ಟೆಗೆ ಸದ್ಯ ಕಲಬುರ್ಗಿಯಿಂದ ಈರುಳ್ಳಿ ಆವಕ ಬರುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ.

ಈರುಳ್ಳಿ ಬಿಟ್ಟರೆ ಬೇರೆ ತರಕಾರಿಯಲ್ಲಿ ದರ ಸ್ಥಿರವಾಗಿದೆ. ಟೊಮೆಟೊ ದರ ಅಗ್ಗವಾಗಿದೆ. ಕೆಜಿಗೆ ₹20ಕ್ಕೆ ಮಾರಾಟವಾಗುತ್ತಿದೆ. ಅಲ್ಲದೆ ಬೀನ್ಸ್‌ ಬೆಲೆಯಲ್ಲಿ ತಗ್ಗಿದೆ. ಈಗ ಕೆಜಿಗೆ ₹80 ಇದೆ. ಕರಿಬೇವು ಕೆಜಿಗೆ ₹50 ಇದೆ. ಪುದೀನ, ಕೋತಂಬರಿ ಸೊಪ್ಪು ಒಂದು ಕಟ್ಟಿಗೆ ₹15 ಇದೆ. ಶುಂಠಿ ₹130 ಕೆಜಿ ಇದೆ. ಬೆಳ್ಳುಳ್ಳಿ ₹200 ಕೆಜಿ ಇದೆ.

***

ಕಳೆದ ವಾರದಿಂದಲೂ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಈಗ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಹೀಗಾಗಿ ಖರೀದಿಗೆ ಬಂದಿದ್ದೇನೆ.
ಸುಧಾಕರ ಬಿ., ಗ್ರಾಹಕ

***

ಸದ್ಯ ವ್ಯಾಪಾರ ಡಲ್‌ ಆಗಿದೆ. ಗ್ರಾಹಕರು ಈರುಳ್ಳಿ ಬೆಲೆ ಜಾಸ್ತಿಯಾಗಿದ್ದರಿಂದ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಮದುವೆ, ಮುಂಜಿ ಕಾರ್ಯಕ್ರಮಗಳು ಇದ್ದವರು ತರಕಾರಿ ಖರೀದಿಸುತ್ತಿದ್ದಾರೆ.
ಮಲ್ಲಿಕಾರ್ಜುನ ಜೀನಕೇರಾ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT