ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ | ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅನಾಹುತ 

Published 29 ಜೂನ್ 2024, 15:56 IST
Last Updated 29 ಜೂನ್ 2024, 15:56 IST
ಅಕ್ಷರ ಗಾತ್ರ

ಕೆಂಭಾವಿ: ಶಹಾಪುರ ಘಟಕದ ಬಸ್‍ನ ಮುಂದಿನ ಚಕ್ರದ ಬ್ರೇಕ್‍ಗಳು ಸ್ಥಗಿತಗೊಂಡು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ಪಟ್ಟಣದಲ್ಲಿ ಶನಿವಾರ ನಡೆಯಿತು.

ಕೆಂಭಾವಿಯಿಂದ–ಹುಣಸಗಿ ಪಟ್ಟಣಕ್ಕೆ ತೆರಳುತ್ತಿದ್ದ ಶಹಾಪುರ ಘಟಕಕ್ಕೆ ಸೇರಿದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಕೆಂಭಾವಿ–ಹುಣಸಗಿ ಮುಖ್ಯರಸ್ತೆಯ ಅಂಬಿಗರ ಚೌಡಯ್ಯ ವೃತ್ತದ ಬಳಿಯ ಕರ್ಣಾಟಕ ಬ್ಯಾಂಕ್ ಬಳಿ ಬ್ರೇಕ್ ನಿಷ್ಕ್ರಿಯಗೊಂಡು ಬಸ್ ರಸ್ತೆ ಬದಿಗೆ ವಾಲುವಷ್ಟರಲ್ಲಿ ಚಾಲಕ ತೋರಿದ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಬಸ್ ಸಂಚರಿಸುತ್ತಿದ್ದ ಸಂದರ್ಭದಲ್ಲಿಯೇ ಅವಘಢ ಸಂಭವಿಸಿದ್ದು, ಬಸ್ ನಿಯಂತ್ರಣಕ್ಕೆ ತಂದ ಚಾಲಕ ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಿದರು.

ಘಟಕ ಸಂಪೂರ್ಣ ನಿಷ್ಕ್ರಿಯ: ಶಹಾಪುರ ಘಟಕಕ್ಕೆ ಸೇರಿದ ಎಲ್ಲ ಬಸ್‌ಗಳ ಸ್ಥಿತಿ ಇದೇ ರೀತಿ ಇದೆ. ಬಸ್ ದುರಸ್ತಿ ಮಾಡುವ ತಂತ್ರಜ್ಞರು ಘಟಕದಲ್ಲಿ ಇಲ್ಲವೆ ಎಂಬ ಪ್ರಶ್ನೆ ಪ್ರಯಾಣಿಕರನ್ನು ಕಾಡುತ್ತಿದೆ. ಈ ಭಾಗದಲ್ಲಿ ಸಂಚರಿಸುವ ಶಹಾಪುರ ಘಟಕದ ಎಲ್ಲ ಬಸ್‌ಗಳು ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಬಸ್‌ನ ಸ್ಥಿತಿಗತಿಯ ಬಗ್ಗೆ ಚಾಲಕರು ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಬಸ್ ಓಡಿಸು ಇಲ್ಲವಾದರೆ ಶಿಸ್ತುಕ್ರಮ ಎದುರಿಸು ಎಂಬ ಸ್ಪಷ್ಟ ಸೂಚನೆ ನೀಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ಅಳಲು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರ ಸ್ವ–ಕ್ಷೇತ್ರ ಶಹಾಪುರ ಘಟಕದಲ್ಲಿಯೇ ಇಂಥ ದುಸ್ಥಿತಿ ಇದೆ. ಸಚಿವರು ಗಮನ ಹರಿಸುತ್ತಿಲ್ಲವೇ?. ಅಥವಾ ಸಚಿವರ ಮಾತಿಗೆ ಇಲಾಖೆ ಅಧಿಕಾರಿಗಳು ಮನ್ನಣೆ ನೀಡುತ್ತಿಲ್ಲವೆ ಎನ್ನುವ ಪ್ರಶ್ನೆಗಳು ಇಲ್ಲಿಯ ಜನರನ್ನು ಕಾಡುತ್ತಿದೆ. ಜನರ ಸೇವೆಯಲ್ಲಿ ಅಸಡ್ಡೆ ತೋರುತ್ತಿರುವ ಘಟಕದ ಅಧಿಕಾರಿಗಳಿಗೆ ಸಚಿವರು ಸ್ಪಷ್ಟ ಸೂಚನೆ ನೀಡಿ ಗುಜರಿ ಬಸ್‍ಗಳಿಗೆ ವಿದಾಯ ಹೇಳಿ ನೂತನ ಬಸ್‍ಗಳನ್ನು ಘಟಕಕ್ಕೆ ಒದಗಿಸಿ ಪ್ರಯಾಣಿಕರ ಹಿತ ಕಾಪಾಡಬೇಕು ಎಂದು ಜನ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT