ಭಾನುವಾರ, ಏಪ್ರಿಲ್ 18, 2021
25 °C
ಸರ್ವಧರ್ಮ ಸಮ್ಮೇಳನದಲ್ಲಿ ಇರ್ಫಾನ್ ಅಲಿ ಶಹಾ ಅಭಿಮತ

ಸುರ‍ಪುರದ ಸರ್ವಧರ್ಮ ಸಮ್ಮೇಳನ: ಜಾತ್ಯತೀತ ತತ್ವವೇ ಎಲ್ಲ ಧರ್ಮಗಳ ಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಭಾರತ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಹೊಂದಿದೆ. ಇಲ್ಲಿರುವ ಎಲ್ಲ ಜಾತಿ, ಧರ್ಮಗಳ ಸಂದೇಶ ಸಾರವೂ ಜಾತ್ಯತೀತ ತತ್ವವೇ ಆಗಿದೆ’ ಎಂದು ಹಜರತ್ ಬುರ್ಹಾನುದ್ದೀನ್ ದರ್ಗಾ ಶರೀಫ್‍ದ ಜಾನ್ ನಶೀನ್ ಏಜಾಜಿ ಇರ್ಫಾನ್ ಅಲಿ ಶಹಾ ಖಾದ್ರಿ ಅಭಿಪ್ರಾಯಪಟ್ಟರು.

ಬುರ್ಹಾನುದ್ದೀನ್ ಶಹಾ ಉರುಸ್ ಅಂಗವಾಗಿ ವೆಂಕಟಾಪುರದ ದರ್ಘಾ ಶರೀಫ್‍ದಲ್ಲಿ ಏರ್ಪಡಿಸಿದ್ದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘8ನೇ ಶತಮಾನದಲ್ಲಿ ಜೀವಿಸಿದ್ದ ಬುರ್ಹಾನುದ್ದೀನ್ ಶಹಾ, ಜಾತ್ಯತೀತ ತತ್ವಗಳನ್ನು ಬೋಧಿಸಿದ್ದರು. ಎಲ್ಲ ಮಾನವರನ್ನು ಏಕತಾ ಭಾವದಿಂದ ಪ್ರೀತಿಸಬೇಕು. ನಿರ್ಗತಿಕರಿಗೆ, ಬಡವರಿಗೆ ನೆರವು ನೀಡಬೇಕು. ಯಾರಿಗೆ ತೊಂದರೆ ಕೊಡದ ಹಾಗೆ ಸನ್ಮಾರ್ಗದಲ್ಲಿ ಜೀವಿಸಬೇಕು’ ಎಂಬ ಸಂದೇಶ ನೀಡಿದ್ದಾರೆ’ ಎಂದು ವಿವರಿಸಿದರು.

ಜಪಮಾಲೆ ಚರ್ಚ್‍ನ ಫಾದರ್ ದೀಪಕ್ ಮಾತನಾಡಿ, ‘ನಮ್ಮ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಭಾತೃತ್ವತೆ, ಮಾನವೀಯತೆ, ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ಇದುವೇ ನಮ್ಮ ದೇಶದ ಬೃಹತ್ ಶಕ್ತಿ’ ಎಂದರು.

ನಿಷ್ಠಿ ಕಡ್ಲೆಪ್ಪಮಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ‘ದರ್ಗಾಗಳಿಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಾರೆ. ಹಿಂದೂ ಜಾತ್ರೆಗಳಲ್ಲಿ ಮುಸ್ಮಿಂ, ಕ್ರೈಸ್ತರು ಪಾಲ್ಗೊಳ್ಳುತ್ತಾರೆ. ಇದುವೇ ನಮ್ಮ ಜೀವಾಳ. ಸರ್ವ ಧರ್ಮ ಸಮ್ಮೇಳನಗಳು ಇದನ್ನು ಪುಷ್ಟೀಕರಿಸುತ್ತವೆ’ ಎಂದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ‘ಎಲ್ಲ ಜಾತಿಯ ಧರ್ಮಗಳು ಬಹುಶಃ ನಮ್ಮ ದೇಶದಲ್ಲಿ ಮಾತ್ರ ಒಂದೇ ವೇದಿಕೆ ಹಂಚಿಕೊಳ್ಳುತ್ತಾರೆ. ಇಂತಹ ಸಮ್ಮೇಳನಗಳು ಹೆಚ್ಚಿದಷ್ಟು ಭಾತೃತ್ವ ಗಟ್ಟಿಗೊಳ್ಳುತ್ತದೆ’ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ, ಶೋಷಿತರ ಸಂಘಟನೆ ಪರ ಹೋರಾಟದ ಸಂಘಟನೆಗಳ ಒಕ್ಕೂಟ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.

ಮುಫ್ತಿ ಖದೀರ್ ಕಡಕಲ್, ಮಹಿಬೂಬ ಖಾನ್, ಮುನೀರ್ ಮಿಯಾ, ಮಹ್ಮದ್ ಬಾಬು, ಸೈಯದ್ ಚುನ್ನು ಮಿಯಾ, ಸೈಯದ್ ಜಾಕೀರ್ ಅಹ್ಮದ್, ಮಹ್ಮದ್ ಇಮ್ತಿಯಾಜ, ಮಹ್ಮದ್ ಹುಸೇನ್, ಸೂಗೂರೇಶ ಮಡ್ಡಿ, ಬಸವರಾಜ ಹುಣಸಗಿ, ಖಾದರ್ ಹುಣಸಗಿ, ಅಕ್ಬರ್ ತಡಕಲ್, ರಜಾಕ್ ಮನಹಳ್ಳಿ, ಖಲೀಮ ಸೌದಾಗರ್ ಇತರರು ಇದ್ದರು.
ಡಾ. ಸೈಯದ್ ಅಲಿ ಸ್ವಾಗತಿಸಿದರು. ಪ್ರಕಾಶ ಅಲಬನೂರ ನಿರೂಪಿಸಿದರು. ಅನ್ವರ್ ಜಮಾದಾರ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.