ಶನಿವಾರ, ಸೆಪ್ಟೆಂಬರ್ 18, 2021
24 °C
ಯಾದಗಿರಿ ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿ ಗೊಂದಲದ ಮಾಹಿತಿ

ಯಾದಗಿರಿ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ 3 ತಿಂಗಳಾದರೂ ಬದಲಾಗದ ‘ಎಸ್‌ಪಿ’ ಹೆಸರು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಋಷಿಕೇಶ್ ಭಗವಾನ್ ಸೋನವಣೆ ಅವರನ್ನು 2021ರ ಏಪ್ರಿಲ್‌ 1ರಂದು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಅದರೂ, ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಇಲ್ಲಿಯವರೆಗೂ ಅವರ ಹೆಸರೇ ರಾರಾಜಿಸುತ್ತಿದೆ.

ಸಿ.ಬಿ. ವೇದಮೂರ್ತಿಯವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಮೂರು ತಿಂಗಳು ಕಳೆದರೂ, ಹೆಸರು ಮಾತ್ರ ಇನ್ನೂ ಬದಲಾವಣೆ ಆಗಿಲ್ಲ. ಇದು ಅಲ್ಲಿನ ತಾಂತ್ರಿಕ ಸಿಬ್ಬಂದಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಜಿಲ್ಲೆಯ ಸಾರ್ವಜನಿಕರಲ್ಲದೇ ಬೇರೆ ಜಿಲ್ಲೆಯವರೂ ಮಾಹಿತಿ ಪಡೆಯಲು ಜಿಲ್ಲಾಡಳಿತ ವೆಬ್‌ಸೈಟ್‌ ರೂಪಿಸಿದೆ. ಆದರೆ, ಇದರ ನಿರ್ವಹಣೆ ಮಾಡುವವರು ನಿರ್ಲಕ್ಷ್ಯ ಮಾಡುವುದರಿಂದ ಮಾಹಿತಿ ಪಡೆಯುವವರಿಗೆ ಗೊಂದಲ ಮೂಡಿಸುತ್ತಿದೆ.

ಖುಷಿಕೇಶ ಭಗವಾನ್‌ ಅವರನ್ನು ವರ್ಗಾವಣೆ ಮಾಡಿದ ನಂತರ ಜಿಲ್ಲೆಗೆ ಯಾರನ್ನೂ ನೇಮಿಸಿರಲಿಲ್ಲ. ಕೆಲವು ದಿನಗಳಾದ ನಂತರ ಒಒಡಿ ಮೇಲೆ ಡಿ.ಕಿಶೋರಬಾಬು ಅವರನ್ನು ನೇಮಕ ಮಾಡಲಾಗಿತ್ತು.

ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸಿ.ಬಿ.ವೇದಮೂರ್ತಿ ಅವರು ಮೇ 12ರಂದು ಅಧಿಕಾರ ಸ್ವೀಕರಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಜಿಲ್ಲೆಯ ಪ್ರಮುಖ ಹುದ್ದೆಯ ಅಧಿಕಾರಿ ಹೆಸರು ಜಾಲತಾಣದಲ್ಲಿ ನವೀಕರಣ ಆಗದ ಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.

ಗುರುಮಠಕಲ್‌ ತಾಲ್ಲೂಕು ತಹಶೀಲ್ದಾರ್ ಹೆಸರು ಇನ್ನೂ ಬದಲಾವಣೆ ಆಗಿಲ್ಲ. ಗುರುಮಠಕಲ್‌ ತಹಶೀಲ್ದಾರ್‌ ಜಾಗದಲ್ಲಿ ಇನ್ನೂ ಚನ್ನಮಲ್ಲಪ್ಪ ಘಂಟಿ ಎಂದು ತೋರಿಸುತ್ತಿದೆ. ಜುಲೈ 24ರಂದು ಗುರುಮಠಕಲ್‌ ತಹಶೀಲ್ದಾರ್ ಶರಣಬಸವ ರಾಣಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು.

ಇನ್ನು ಜಿಲ್ಲಾ ಸರ್ಜನ್‌ ಹೆಸರಿನ ಮುಂದೆ ಡಾ.ರಾಯಚೂರಕರ ಎಂದು ಮಾತ್ರ ಇದೆ. ಅವರ ಪೂರ್ಣ ಹೆಸರು ಡಾ.ಸಂಜೀವಕುಮಾರ ರಾಯಚೂರಕರ. ಜಿಲ್ಲಾಡಳಿತದ ಅಂತರ್ಜಾಲದಲ್ಲಿ ಡಾ//.ರಾಯಚೂರಕರ ಎಂದು ನಮೂದಿಸಲಾಗಿದೆ.

ಈ ಹಿಂದೆಯೂ ಅಧಿಕಾರಿಗಳ ಸಂಪರ್ಕ ಕೋಶದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್, ಎನ್‌ಈಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಎಂಜಿನಿಯರ್, ಡಾ. ಅಂಬೇಡ್ಕರ್ ಕೋ-ಆಪರೇಟಿವ್ ಲಿಮಿಟೆಡ್ ಜಿಲ್ಲಾ ವ್ಯವಸ್ಥಾಪಕ, ಯಾದಗಿರಿ ನಗರಸಭೆ ಪೌರಾಯುಕ್ತ, ಯಾದಗಿರಿ ಎಪಿಎಂಸಿ ಕಾರ್ಯದರ್ಶಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹೆಸರು ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳ ಹೆಸರು ಅವರು ಜಿಲ್ಲೆಯಿಂದ ವರ್ಗಾವಣೆಯಾಗಿದ್ದರೂ ಬದಲಾಗಿರಲಿಲ್ಲ. ವರದಿ ನಂತರ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಮರುದಿನವೇ ಬದಲಾವಣೆ ಮಾಡಿ ಸರಿ ಮಾಡಿದ್ದರು. ಮತ್ತೆ ಈಗ ಅದೇ ಪರಿಸ್ಥಿತಿ ಮುಂದುವರಿದಿದ್ದು, ಜಾಲತಾಣಕ್ಕೆ ನೇಮಿಸಿದ ಅಧಿಕಾರಿ ಯಾಕೆ ಇಷ್ಟೊಂದು ನಿರ್ಲಕ್ಷ್ಯ ತೋರುತ್ತಾರೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

2021ರ ಸೆಪ್ಟೆಂಬರ್ 3ರಂದು ಕೊನೆಯದಾಗಿ ನವೀಕರಿಸಲಾಗಿದೆ ಎಂದು ವೈಬ್‌ಸೈಟ್‌ ಪುಟದ ಕೆಳಭಾಗದಲ್ಲಿದೆ. ಆದರೆ, ಜಾಲತಾಣದಲ್ಲಿ ಹೆಸರು ಮಾತ್ರ ಬದಲಾಗಿಲ್ಲ.

***

ಜಿಲ್ಲಾಡಳಿತದ ಜಾಲತಾಣದಲ್ಲಿ ಹೆಸರು ಬದಲಾವಣೆ ಆಗದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು
ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಹೆಸರು ಬದಲಾವಣೆ ಆಗದಿರುವುದು ಗಮನಕ್ಕೆ ಬಂದಿದ್ದು, ಶೀಘ್ರವೇ ಹೆಸರು ಬದಲಾಯಿಸಲಾಗುವುದು
ಶಂಕರಗೌಡ ಸೋಮನಾಳ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.