ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2.06 ಕೋಟಿ ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ಬೇಲಿ ಎದ್ದು ಹೊಲ ಮೇಯ್ದ ಕಥೆ ಇದು!

ಶಹಾಪುರ ನಗರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದಲ್ಲಿ ಘಟನೆ
Published 27 ನವೆಂಬರ್ 2023, 5:48 IST
Last Updated 27 ನವೆಂಬರ್ 2023, 5:48 IST
ಅಕ್ಷರ ಗಾತ್ರ

ಶಹಾಪುರ: ಶಹಾಪುರ ನಗರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್)ದ ’ಉಗ್ರಾಣ ಕೇಂದ್ರ’ (ದಾಸ್ತಾನು)ದಲ್ಲಿ ಇಟ್ಟಿದ್ದ ₹2.06ಕೋಟಿ ಮೌಲ್ಯದ 6,077 ಕ್ವಿಂಟಾಲ್ ಪಡಿತರ(ಅನ್ನ ಭಾಗ್ಯ) ನಾಪತ್ತೆಯಾಗಿರುವ ಪ್ರಕರಣವು ಮೇಲ್ನೋಟಕ್ಕೆ ಬೇಲಿ ಎದ್ದು ಹೊಲ ಮೇಯ್ದಿದಂತೆ' ಆಗಿದೆ ಎಂಬ ಮಾತು ಕೇಳಿ ಬಂದಿದೆ.

ಉಗ್ರಾಣ ಕೇಂದ್ರದಲ್ಲಿ ಇರಬೇಕಾಗಿದ್ದ 6,077 ಅಕ್ಕಿ ನಾಪತ್ತೆ ಆಗಿರುವುದು ಹಿಂದೆ ಕಂಡು ಬಂದರೂ ಸಾಕಷ್ಟು ರಾಜಕೀಯ ಒತ್ತಡದ ನಡುವೆ ಜಿಲ್ಲಾ ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಭೀಮರಾಯ ಶಹಾಪುರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಶಿವಪ್ಪ ಮಲ್ಲಪ್ಪ ಹಳಿಸಗರ, ಶಿವರಾಜ ಗುಂಡಪ್ಪ ಹಾಲಗೇರಾ ಹಾಗೂ ಶಹಾಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿಯಮಿತ ಆಡಳಿತ ಮಂಡಳಿ ಹಾಗೂ ಇತರರು ಎಂದು ನಮೂದಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆಡಳಿತ ಮಂಡಳಿಯ ಅಧ್ಯಕ್ಷರು ಇದರ ಹೊಣೆ ಹೊರಬೇಕಾಗುತ್ತದೆ. ಅಧ್ಯಕ್ಷರನ್ನು ರಕ್ಷಣೆ ಮಾಡುವ ದುರುದ್ದೇಶದಿಂದ ದೂರಿನಲ್ಲಿ ಹೆಸರು ನಮೂದಿಸದೇ ಇರುವುದು ಸರಿಯಲ್ಲ ಎನ್ನುತ್ತಾರೆ ರೈತ ಮುಖಂಡ ಸಿದ್ದಯ್ಯ ಸ್ವಾಮಿ ಹಿರೇಮಠ.

ಐದು ತಿಂಗಳಿಂದ ಅಕ್ಕಿ ನಾಪತ್ತೆಯಾಗುತ್ತಲೆ ಬಂದಿದೆ.(2-6-2023ರಿಂದ23-11-2023)ವರೆಗೆ ಇದರಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಆಡಳಿತ ಮಂಡಳಿಯ ಕೆಲ ಸದಸ್ಯರು, ಆಹಾರ ಇಲಾಖೆಯ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಲಿದೆ. ಗೋದಾಮು ಕೇಂದ್ರದಿಂದ ಆಯಾ ಪಡಿತರ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಸಿಬ್ಬಂದಿಗೆ ಮತ್ತು ಅಧ್ಯಕ್ಷರಿಗೆ ತಿಳಿದ ವಿಷಯ ಎಂದು ಆರೋಪಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

ಶಹಾಪುರ-ಯಾದಗಿರಿ ಹೆದ್ದಾರಿಗೆ ಹೊಂದಿಕೊಂಡಿರುವ ದಾಸ್ತಾನು ಕೇಂದ್ರದ ಬಳಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸಿ.ಸಿ ಕ್ಯಾಮರ್ ಅಳವಡಿಸಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲ. ಸುತ್ತಲು ಜಾಲಿಗಿಡ ಬೆಳೆದು ನಿಂತಿವೆ. ಇದೇ ದಾಸ್ತಾನು ಕೇಂದ್ರದಿಂದ ಅಕ್ಕಿ ತುಂಬಿದ ಲಾರಿ ಸಮೇತನ ಕಳ್ಳತನವಾಗಿತ್ತು. ಐದು ದಿನದ ಬಳಿಕ ಲಾರಿ ವಶಪಡಿಸಿಕೊಂಡು ಅಕ್ಕಿ ವಶಕ್ಕೆ ಪಡೆದುಕೊಂಡರು. ಆದರೆ, ಕೃತ್ಯ ಎಸಗಿದ ವ್ಯಕ್ತಿಗಳ ವಿರುದ್ಧ ಮೃಧು ಧೋರಣೆ ಅನುಸರಿಸುತ್ತಿರುವುದರಿಂದ ಇಂತಹ ಪ್ರಕರಣ ಜಾಸ್ತಿಯಾಗುತ್ತಲಿವೆ ಎನ್ನುತ್ತಾರೆ ಅವರು.

ಅಕ್ಕಿ ತುಂಬಿದ 12 ಲಾರಿ

ಶಹಾಪುರ: ಐದು ದಿನದ ಹಿಂದೆ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಗೋದಾಮು ಸೀಜ್ ಮಾಡಿದ್ದರೂ ಸಹ ದೂರು ದಾಖಲಿಸಲು ವಿಳಂಬ ಮಾಡಿದ್ದಾರೆ. ನಿಗದಿಯಂತೆ ಪ್ರತಿ ತಿಂಗಳು ಅನ್ನ ಭಾಗ್ಯದ ಅಕ್ಕಿಯನ್ನು ಯಾದಗಿರಿ ಜಿಲ್ಲೆಯಿಂದ ಐದು ದಿನದ ಹಿಂದೆ ಉಗ್ರಾಣ ಕೇಂದ್ರಕ್ಕೆ 12 ಲಾರಿಯಲ್ಲಿ ಅಕ್ಕಿ ತಂದು ನಿಲ್ಲಿಸಿದ್ದೇವೆ. ಅಧಿಕ ಭಾರವನ್ನು ಹೊತ್ತುಕೊಂಡು ಲಾರಿ ನಿಂತಿದ್ದರಿಂದ ಟೈರ್ ಸಿಡಿಯುವ ಭೀತಿ ಆವರಿಸಿದೆ ಎನ್ನುತ್ತಾರೆ ಆಹಾರ ಸರಬರಾಜು ಮಾಡುವ ಲಾರಿ ಚಾಲಕರು ಒಬ್ಬರು.

ದಾಸ್ತಾನು ಕೇಂದ್ರದ ಬಳಿ ಯಾವುದೇ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಲಾರಿಯಲ್ಲಿರುವ ಅಕ್ಕಿ ಕಳ್ಳತನವಾಗುವ ಆತಂಕ ನಮ್ಮನ್ನು ಕಾಡುತ್ತಲಿದೆ ಎಂದು ಹೆಸರು ಹೇಳದ ಲಾರಿ ಚಾಲಕ ಒಬ್ಬರು.

ಉಗ್ರಾಣ ಕೇಂದ್ರದಲ್ಲಿ ದಾಸ್ತಾನು ಇರುವ ಅಕ್ಕಿ ಹಾಗೂ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡು ಜೆಡಿ ಹಾಗೂ ತಹಶೀಲ್ದಾರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿದೆ. ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ.
-ಎಸ್.ಎಂ.ಪಾಟೀಲ, ಪಿ.ಐ. ಶಹಾಪುರ ಠಾಣೆ.


ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಸ್ಥಳ ಮಹಜರದಲ್ಲಿ ಉಪಸ್ಥಿತನಿದ್ದೆ. ಮುಂದಿನ ಕ್ರಮವನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ನಿರ್ವಹಿಸಲಿದ್ದಾರೆ.
-ಉಮಾಕಾಂತ ಹಳ್ಳೆ, ತಹಶೀಲ್ದಾರ

26ಎಸ್ಎಚ್ಪಿ 1(2): ಗೋದಾಮು ಬಳಿ ಅನ್ನ ಭಾಗ್ಯ ಅಕ್ಕಿ ತುಂಬಿದ ಲಾರಿ ನಿಂತಿರುವುದು
26ಎಸ್ಎಚ್ಪಿ 1(2): ಗೋದಾಮು ಬಳಿ ಅನ್ನ ಭಾಗ್ಯ ಅಕ್ಕಿ ತುಂಬಿದ ಲಾರಿ ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT