ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಹೋರಾಡುತ್ತಿರುವವರು ರೈತರಲ್ಲ, ಕೈ ಕಾರ್ಯಕರ್ತರು: ಸಚಿವ ಚವ್ಹಾಣ್‌

‘ಹಸಿರು ಶಾಲು ಹಾಕಿಕೊಂಡವರೆಲ್ಲ ರೈತರಲ್ಲ, ಪ್ರತಿಪಕ್ಷಗಳಿಂದ ರೈತರನ್ನು ಎತ್ತಿಕಟ್ಟುವ ಕೆಲಸ’
Last Updated 17 ಡಿಸೆಂಬರ್ 2020, 2:42 IST
ಅಕ್ಷರ ಗಾತ್ರ

ಯಾದಗಿರಿ: ‘ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡವರು ರೈತರಲ್ಲ, ಬದಲಾಗಿ ಅವರು ಕಾಂಗ್ರೆಸ್‌ ಕಾರ್ಯಕರ್ತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಅಲ್ಲಿ ಹೋರಾಟ ಮಾಡುವವರು ರೈತರಾಗಿದ್ದರೆ ಹೊಲಗಳಲ್ಲಿ ಈಗ ಕೆಲಸ ಮಾಡುತ್ತಿದ್ದರು. ಆದರೆ, ಅಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇರುವುದರಿಂದ ಅಲ್ಲಿರುವವರು ರೈತರಲ್ಲ. ಹಸಿರು ಶಾಲು ಹಾಕಿಕೊಂಡವರೆಲ್ಲ ರೈತರಲ್ಲ’ ಎಂದು ಹೇಳಿದರು.
‌ ‘ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ಉತ್ತಮ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳ ಬಗ್ಗೆ ಸಚಿವರೊಂದಿಗೆ ಮಾತುಕತೆಯಾಡುವುದು ಬಿಟ್ಟು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ನವರು, ಇನ್ನಿತರ ಪ್ರತಿಪಕ್ಷದವರು ರೈತರನ್ನು ಎತ್ತಿಕಟ್ಟಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಆಗುವಂತೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಗೋಮಾತೆಯ ಋಣ ತೀರಿಸುತ್ತೇವೆ:

‘ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ಉದ್ದೇಶಿಸಿದ್ದರು. ಆಗ ಕಾಲ ಕೂಡಿ ಬಂದಿರಲಿಲ್ಲ. ಈಗ ವಿಧೇಯಕ ಮಂಡನೆಯಾಗಿದ್ದು, ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದೆ’ ಎಂದರು.

‘ದೇಶದ ಸಂಸ್ಕೃತಿ, ಪರಂಪರೆ ಧರ್ಮ ನಂಬಿಕೆಗಳ ವಿರುದ್ಧ ಅಮಾನವೀಯವಾಗಿ ವರ್ತಿಸಿದ ಕಾಂಗ್ರೆಸ್‌ ಪಕ್ಷವನ್ನು ಎತ್ತಿ ಮೂಲೆಗೆ ಬಿಸಾಕಿದ್ದರೂ ಇನ್ನು ಬುದ್ಧಿ ಕಲಿತುಕೊಂಡಿಲ್ಲ’ ಎಂದು ಟೀಕಿಸಿದರು. ‘ಈ ವಿಧೇಯಕವನ್ನು ಯಾರೇ ಅಡ್ಡಿ ಮಾಡಿದರೂ ನಾವು ಪಾಸ್ ಮಾಡಿ ಗೋಮಾತೆಯ ಋಣ ತೀರಿಸುತ್ತೇವೆ’ ಎಂದರು.

ರಾಯಚೂರು ಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರವಾಗಿ ಕೆಲಸ ಮಾಡುತ್ತಿದ್ದರೂ ಎರಡು ರಾಜ್ಯಗಳಲ್ಲಿನ ದುಷ್ಟ ಶಕ್ತಿಗಳು ರೈತರ ಹೆಸರು ಹೇಳಿಕೊಂಡು ಪ್ರತಿಭಟನೆಯ ಹೆಸರಿನಲ್ಲಿ ರೈತರ ಪರ ಕೆಲಸ ಮಾಡುತ್ತಿರುವುದನ್ನು ನಿಲ್ಲಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ‘ನಮ್ಮೆಲ್ಲರಿಗಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗೆಲ್ಲಿಸಲು ಇರುವ ವೇದಿಕೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚು ಹೆಚ್ಚು ಗೆಲ್ಲುವಂತೆ ನೋಡಿಕೊಂಡು ಅವರ ಕೈಗೆ ಅಧಿಕಾರ ಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು’ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ವಿಭಾಗೀಯ ಸಂಘಟನಾ ಸಂಚಾಲಕ ಈಶ್ವರಸಿಂಗ್ ಠಾಕೂರ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ಪ್ರಧಾನ ಕಾರ್ಯದರ್ಶಿಗಳಾದ ದೇವಿಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ, ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ, ಜಿಲ್ಲಾ ಮಾಧ್ಯಮ ಪ್ರಮುಖ ವೀರೂಪಾಕ್ಷಯ್ಯ ಸ್ವಾಮಿ ಹೆಡಗಿಮುದ್ರ ಇದ್ದರು.

‘ಕಾಂಗ್ರೆಸ್‌ ಸಂಸ್ಕೃತಿ ತೋರಿಸಿದ್ದಾರೆ’

ವಿಧಾನ ಪರಿಷತ್‌ನಲ್ಲಿ ಗದ್ದಲ, ಎಳೆದಾಟ ಮಾಡಿ ಕಾಂಗ್ರೆಸ್‌ ಸದಸ್ಯರು ತಮ್ಮ ಸಂಸ್ಕೃತಿ ತೋರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಹರಿಹಾಯ್ದರು.

ಕಾಂಗ್ರೆಸ್‌ನವರು ಪವಿತ್ರವಾಗಿರುವ ವಿಧಾನ ಪರಿಷತ್‌ ಸಭೆಯ ಬಾಗಿಲನ್ನು ಕಾಲಿನಿಂದ ಒದ್ದು ಅಪವಿತ್ರ ಮಾಡಿದ್ದಾರೆ. ಕುರ್ಚಿ ಮೇಲೆ ಕುಳಿತವರನ್ನು ಎಳೆದಾಡಿದ್ದಾರೆ ಎಂದು ದೂರಿದರು.

‘ಜೆಡಿಎಸ್‌ ಮಿಠಾಯಿ ಇದ್ದ ಕಡೆ ಹೋಗುತ್ತಾರೆ’ ಎಂದಿರುವ ಮಾಜಿ ಸಚಿವ ಎಚ್‌. ವಿಶ್ವನಾಥ ಅವರ ಮಾತಿಗೆ ಪ್ರತಿಕ್ರಿಯಿಸಿ, ವಿಶ್ವನಾಥ ಅವರು ಹಿರಿಯ ಸದಸ್ಯರಿದ್ದಾರೆ. ಅವರು ಆ ಪಕ್ಷದಲ್ಲಿ ಇದ್ದು ಬಂದವರಾಗಿದ್ದಾರೆ. ಹೀಗಾಗಿ ಜೆಡಿಎಸ್‌ ಎಂಥದು ಎಂದು ಅವರಿಗೆ ಗೊತ್ತು. ಹೀಗಾಗಿ ಅವರು ಹೇಳಿರುವುದು ಸರಿಯಾಗಿದೆ ಎಂದು ಹೇಳಿದರು.

***

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕು

-ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT