ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲ್ಲಭಭಾಯ್‌ ಪಟೇಲ್‌ ವೃತ್ತ ಉದ್ಘಾಟನೆ ಗುರುವಾರ

Last Updated 16 ಸೆಪ್ಟೆಂಬರ್ 2020, 15:54 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್ ವೃತ್ತಕ್ಕೆ ಕೇಂದ್ರ ಮಾಜಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ಹೆಸರಿಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಸೆ.17ರಂದು ಬೆಳಿಗ್ಗೆ 8.30ಕ್ಕೆ ನಾಮಫಲಕ ಉದ್ಘಾಟನೆ ನಡೆಯಲಿದೆ ಎಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಸಿದ್ರಾಮರೆಡ್ಡಿ ಬಲಕಲ್ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರು ಆಳ್ವಿಕೆ ಮಾಡುತ್ತಿದ್ದ ಹೈದರಾಬಾದ್‌ ಕರ್ನಾಟಕ್ಕೆ ವಿಮೋಚನೆ ಆಗಲಿಲ್ಲ. ಆಗ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ನೇತೃತ್ವದಲ್ಲಿ ಸೈನ್ಯ ತಂದ ನಂತರ ಆಗಿನ ನಿಜಾಮರು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದರು. ನಂತರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ ಎಂದು ಆಚರಣೆ ಮಾಡಲಾಗುತ್ತಿತ್ತು. ಕಳೆದ ವರ್ಷದಿಂದ ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಮಾಡಲಾಗುತ್ತಿದೆ. ಈ ನೆನಪಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ನಾಮಕರಣ ನಡೆಯಲಿದೆ. ಮುಂದಿನ ದಿನಗಳಲ್ಲಿ ಪಟೇಲರ ಪುತ್ಥಳಿ ಸ್ಥಾಪನೆಯಾಗಿದೆ ಎಂದರು.

1995ರಿಂದ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ ಆಚರಣೆ ಮಾಡುತ್ತಾ ಬರಲಾಗುತ್ತಿದೆ. 2002ರಿಂದ ಈ ಆಚರಣೆಗೆ ಸರ್ಕಾರ ಅನುದಾನ ನೀಡುತ್ತಿದೆ. 2011ರಲ್ಲಿ ಸರ್ದಾರ್ ವಲ್ಲಭಭಾಯ್‌ ಪಟೇಲರ ವೃತ್ತ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಜಾಗದ ಸಮಸ್ಯೆಯೂ ನೀಗಿದೆ ಎಂದರು.

ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಭೇಟಿ ಜಿಲ್ಲೆಯ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 2019–20ನೇ ಸಾಲಿನ ₹25 ಕೋಟಿ ಅನುದಾನಕ್ಕೆ ಈಗಾಗಲೇ ಟೆಂಡರ್‌ ಆಗಿದೆ. ಕೋವಿಡ್‌ ಕಾರಣದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ 2020–21ನೇ ಸಾಲಿನ ₹19 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

‘ಸಚಿವ ರಮೇಶ ಜಾರಕಿಹೊಳಿ ನವದೆಹಲಿಗೆ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಹೈಕಮಾಂಡ್‌ ಕರೆದಿದ್ದಕ್ಕೆ ಅವರು ತೆರಳಿದ್ದಾರೆ. ಇದಕ್ಕೆ ಬೇರೆ ಯಾವುದಕ್ಕೂ ತಳುಕು ಹಾಕುವುದು ಸರಿಯಲ್ಲ’ ಎಂದರು.

‘ಇನ್ನೂ ಆರು ತಿಂಗಳಿಗೆ ಸಿಎಂ ಬದಲಾಗುತ್ತಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ. ಅಷ್ಟಾದರೂ ಸಮಯ ಕೊಟ್ಟಿದ್ದಾರಲ್ಲ’ ಎಂದು ವ್ಯಂಗ್ಯವಾಡಿದರು.

***

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ವಿರೋಧ ಪಕ್ಷದಲ್ಲಿದ್ದಾರೆ. ಹೀಗಾಗಿ ಅವರಿಗೆ ವಿರೋಧ ಮಾಡುವುದೇ ಕೆಲಸವಾಗಿದೆ. ಸಿಎಂ ಅವರೇ ಅವಧಿ ಪೂರ್ಣಗೊಳಿಸುತ್ತಾರೆ

ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT