ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರ ಪಂಚಮಿ: 210 ಕೆ.ಜಿ.ಯ ಬಂಡೆಗಲ್ಲು ಹೊತ್ತು ಸಾಗಿದ ಮಲ್ಲಪ್ಪ!

Last Updated 13 ಆಗಸ್ಟ್ 2021, 3:51 IST
ಅಕ್ಷರ ಗಾತ್ರ

ಯರಗೋಳ: ಯರಗೋಳ ಹಾಗೂ ಅರಕೇರಾ–ಬಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ನಾಗರ ಪಂಚಮಿಯ ಸಡಗರ ಮನೆ ಮಾಡಿದೆ. ಆಧುನಿಕ ಪ್ರಪಂಚ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವ ಈ ದಿನಗಳಲ್ಲೂ ಪಕ್ಕಾ ಹಳ್ಳಿ ಸೊಗಡಿನ ಆಟಗಳನ್ನು ಈ ಊರಿನ ಜನ ಆಡುವುದನ್ನು ಇನ್ನೂ ಪಾಲಿಸಿಕೊಂಡು ಬಂದಿದ್ದಾರೆ.

ಈ ಬಾರಿ ಆಯೋಜಿಸಿದ್ದ ವಿವಿಧ ಸೈಜುಗಳ ಕಲ್ಲು ಎತ್ತುವ ಹಾಗೂ ದೂರದಲ್ಲಿ ಎಸೆಯುವ ಸ್ಪರ್ಧೆ ಗ್ರಾಮಸ್ಥರ ಮನ ಸೂರೆಗೊಂಡಿತು. ಯರಗೋಳದ ಯುವಕರು, ಹಿರಿಯರು ಕೂಡ ಕಣ್ಣು ಕಟ್ಟಿ ತಿರುಗಿಸುವ ಆಟ ಆಡುವ ಮೂಲಕ ತಮ್ಮ ಬಾಲ್ಯಕ್ಕೆ ಜಾರಿದರು.

ಅರಕೇರಾ ಬಿ. ಗ್ರಾಮದ ಯುವಕ ಮಲ್ಲಪ್ಪ ಬಡಿಗೇರ ಅವರು 210 ಕೆ.ಜಿ. ತೂಕದ ಗುಂಡು ಕಲ್ಲನ್ನು 500 ಮೀಟರ್ ದೂರದವರೆಗೆ ಎತ್ತಿಕೊಂಡು ಹೋದರು. ಕಳೆದ 35 ವರ್ಷಗಳ ಹಿಂದೆ ಸಾಹಸಿಯೊಬ್ಬರು ಈ ಸಾಧನೆ ಮಾಡಿದ್ದರು. ಇಷ್ಟು ದೀರ್ಘ ಸಮಯದ ಬಳಿಕ ಮಲ್ಲಪ್ಪ ಮತ್ತೆ ಗುರಿ ಮುಟ್ಟಿ ಯಶಸ್ವಿಯಾದರು. ಕಲ್ಲು ಹೊತ್ತು ನಡೆದ ಯುವಕನ ಹಿಂದೆ ಹಿಂದೆ ಸಾಗಿದ ಗ್ರಾಮಸ್ಥರು ಸಿಳ್ಳೆ, ಚಪ್ಪಾಳೆ ಹಾಕಿ ಹುರಿದುಂಬಿಸಿದರು. ಗುಂಡುಕಲ್ಲನ್ನು ಭುಜದ ಮೇಲೆ ಹೊತ್ತು ಆಂಜಿನೇಯ ಮಂದಿರದಿಂದ ಮಸೀದಿಯವರೆಗೂ ಹೊತ್ತೊಯ್ದ ಯುವಕನ ಸಾಹಸಕ್ಕೆ ಬೆರಗಾಗದವರೇ ಇರಲಿಲ್ಲ.

ಇದೇ ಊರಿನ ಇನ್ನೊಬ್ಬ ಯುವಕ ಶರಣಪ್ಪ ಹಳಿಮನಿ 100 ಕೆ.ಜಿ ತೂಕದ ಗುಂಡು ಕಲ್ಲನ್ನು ಭುಜದ ಮೇಲೆ ಹೊತ್ತುಕೊಂಡು 2 ಕಿಲೋಮೀಟರ್‌ ದೂರದವರೆಗೆ ಸಾಗಿದರು. ಆಂಜನೇಯ ಮಂದಿರ ಬಳಿ ಕಲ್ಲು ಹೊತ್ತ ಈ ಕಲಿ, ಬೆಟ್ಟದ ಪರಮಾನಂದೇಶ್ವರ ದೇವಸ್ಥಾನದ ಬಳಿ ಹೋಗಿ ಎಸೆದ. ಗುರಿ ಮುಟ್ಟಿದ ತಕ್ಷಣ ಗೆಳೆಯರೆಲ್ಲಯ ಶರಣಪ್ಪ ಅವರನ್ನು ಹೊತ್ತು ಕುಣಿದು ಸಂಭ್ರಮಿಸಿದರು.

ಇಬ್ಬರೂ ಸಾಹಸಿಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನ, ಬೆಳ್ಳಿ ಕಡಗ ನೀಡಿ ಹಿರಿಯರು ಸನ್ಮಾನಿಸಿದರು.

ಕಬ್ಬಿಣದ ಸಲಾಕಿ ದೂರ ಎಸೆಯುವುದು. ನಿಂಬೆಹಣ್ಣು, ತೆಂಗಿನ ಕಾಯಿ ಗೊತ್ತುಪಡಿಸಿದ ಸ್ಥಳದವರೆಗೂ ಎಸೆಯುತ್ತ ಹೋಗುವುದು. ಕಣ್ಣು ಕಟ್ಟಿಕೊಂಡು ಯಾರ ಸಹಾಯವೂ ಇಲ್ಲದೇ ಆಯ್ದ ಸ್ಥಳವನ್ನು ತಲುಪುವುದು. ಭಾರವಾದ ಜೋಳ, ತೊಗರಿ ಚೀಲಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುವುದು. ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸುವುದು. ಎತ್ತಿನ ಗಾಡಿ ಎಳೆಯುವಂತಹ ಸಾಹಸದ ಆಟಗಳನ್ನು ಬಾಜಿಕಟ್ಟಿ ಸಂಭ್ರಮಿಸಿದರು.

ತವರಿನಲ್ಲಿ ಹೆಣ್ಣುಮಕ್ಕಳ ಸಂಭ್ರಮ: ನಾಗರ ಹಬ್ಬಕ್ಕೆ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡಿ ನಲಿದರು. ಮತ್ತೆ ಕೆಲವರು ತಮ್ಮ ಬಾಲ್ಯದ ಆಟಗಳಾದ ಗಿರಗಿಟ್ಲೆ, ಅಂಡೆಳ್ಳು, ಆಲಿಕಲ್ಲಾಟ, ಕುಂಟಬಿಲ್ಲೆ ಮುಂತಾದ ಆಟಗಳನ್ನು ಆಡಿ ಇಡೀ ದಿನ ನಲಿದರು.

ಪುಟಾಣಿ ಮಕ್ಕಳಿಗೆ ಕೊಬ್ಬರಿ ಬಟ್ಟಲಿನ ಬುಗರಿ ಮಾಡಿ ಕೊಡುವುದು ಇಲ್ಲಿನ ಹಬ್ಬದ ಇನ್ನೊಂದು ವಿಶೇಷ.

ಗೃಹಿಣಿಯರು ಮನೆಗಳಲ್ಲಿ ಬಗೆಬಗೆಯ ಉಂಡಿಗಳನ್ನು ಕಟ್ಟಿ, ನಾಗಪ್ಪನಿಗೆ ಹಾಲೆರೆದರು. ನಂತರ ಕುಟುಂಬದ ಸದಸ್ಯರೆಲ್ಲ ಕುಳಿತು ಭೂರಿ ಭೋಜನ ಸವಿದರು.

ಬಸಮ್ಮ ಗಣಚಾರಿ, ಈರಮ್ಮ ಗಣಾಚಾರಿ, ರೇಣುಕಾ ಕುಂಬಾರಳ್ಳಿ, ಗುರುದೇವಿ ಹೂಗಾರ ಮುಂತಾದವರು ಆಟಗಳ ನೇತೃತ್ವ ವಹಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT