ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ನದಿ ತಗ್ಗಿದ ಹೊರ ಹರಿವು: 94 ಸಾವಿರ ಕ್ಯುಸೆಕ್‌ಗೆ ಇಳಿಕೆ

Last Updated 23 ಅಕ್ಟೋಬರ್ 2020, 16:33 IST
ಅಕ್ಷರ ಗಾತ್ರ

ಯಾದಗಿರಿ: ಭೀಮಾ ನದಿ ಪ್ರವಾಹ ಶುಕ್ರವಾರ ಮತ್ತಷ್ಟು ಇಳಿಕೆಯಾಗಿದ್ದು, ಸನ್ನತಿ ಬ್ಯಾರೇಜ್‌ನಿಂದ 94 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಕಳೆದ 8–10 ದಿನಗಳಿಂದ ಯಾದಗಿರಿ, ಶಹಾಪುರ, ವಡಗೇರಾ ತಾಲ್ಲೂಕಿನ ನದಿ ತೀರದ 45 ಗ್ರಾಮಗಳಿಗೆ ಪ್ರವಾಹದ ಆತಂಕ ಉಂಟು ಮಾಡಿತ್ತು. ಪ್ರವಾಹ ಇಳಿಕೆಯಾಗಿದ್ದರಿಂದ 13 ಕಾಳಜಿ ಕೇಂದ್ರಗಳಿಂದ ಜನರು ಸ್ವಗ್ರಾಮಗಳತ್ತ ತೆರಳಿದ್ದಾರೆ. ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮಸ್ಥರು ಮಾತ್ರ ಇನ್ನೂ ಕಾಳಜಿ ಕೇಂದ್ರದಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಹವೇನೂ ಇಳಿಕೆಯಾಗಿದೆ. ಆದರೆ, ಮನೆಗಳು ಅಲ್ಲಲ್ಲಿ ಕುಸಿದು ಬೀಳುತ್ತಿವೆ. ವಡಗೇರಾ ತಾಲ್ಲೂಕಿನ ಶಿವನೂರ ಗ್ರಾಮದಲ್ಲಿ ಶುಕ್ರವಾರ ಮನೆಯೊಂದು ಕುಸಿದು ಬಿದ್ದಿದೆ. ಆದರೆ, ಯಾವುದೇ ಅಪಾಯವಾಗಿಲ್ಲ. ಮನೆಯಲ್ಲಿದ್ದ ದವಸ, ಧಾನ್ಯ ಹಾಳಾಗಿವೆ.

ಬೆಂಡೆಬೆಂಬಳಿ ಕಾಳಜಿ ಕೇಂದ್ರಗಳಲ್ಲಿ ತಂಗಿದ್ದ ಶಿವನೂರ ಗ್ರಾಮಸ್ಥರು ಗುರುವಾರ ಗ್ರಾಮಕ್ಕೆ ತೆರಳಿದ್ದಾರೆ. ಎಂಟ್ಹತ್ತು ದಿನಗಳಿಂದ ಭೀಮಾ ನದಿ ನೀರು ನಿಂತು ಕಟ್ಟಡಗಳ ಅಡಿಪಾಯಕ್ಕೆ ನೀರು ನುಗ್ಗಿದೆ. ಇದರಿಂದ ಕಟ್ಟಡಗಳು ತೇವಾಂಶ ಹೆಚ್ಚಾಗಿ ಯಾವಾಗ ಕುಸಿದು ಬೀಳುತ್ತದೊ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲೆಗೆ ಬಂದಾಗ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ ಗ್ರಾಮಸ್ಥ ಚನ್ನಾರೆಡ್ಡಿ ಆರೋಪಿಸಿದ್ದಾರೆ.

ವಿಷ ಜಂತುಗಳ ಕಾಟ: ಜಿಲ್ಲೆಯ ನದಿ ತೀರಗಳ ಗ್ರಾಮಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ ಸಂತ್ರಸ್ತರು ತೆರಳಿದ್ದರು. ಆದರೆ, ಮರಳಿ ಗ್ರಾಮಕ್ಕೆ ಬಂದಾಗ ಒಬ್ಬೋರದು ಒಂದೊಂದುಕಥೆಯಾಗಿದೆ.

ಮನೆಯೊಳಗೆ ನೀರು ನುಗ್ಗಿದ್ದರಿಂದ ಪ್ರವಾಹದ ನೀರು ಗಬ್ಬು ನಾರುತ್ತಿವೆ. ಗ್ರಾಮದ ರಸ್ತೆಗಳು ಕೆಸರು ಮಯವಾಗಿವೆ. ವಿಷ ಜಂತುಗಳು ಪ್ರತ್ಯಕ್ಷವಾಗುತ್ತಿವೆ. ಇದರಿಂದ ಎನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ಅಣಬಿ ಗ್ರಾಮಸ್ಥ ಭೀಮರಾಯ ಶಾಸ್ತ್ರಿ ಹೇಳಿದರು.

***

ಅಧಿಕಾರಿಗಳು ಪ್ರವಾಹ ಪೀಡಿತ ಗ್ರಾಮಗಳ ಜಮೀನಿಗಳಿಗೆ ತೆರಳಿ ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ತಿಂಗಳೊಳಗೆ ವರದಿ ನೀಡಲು ಸೂಚಿಸಿದ್ದೇನೆ
ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT