ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಸೇವೆ ಅಪಾರ: ವಜ್ಜಲ್

ಕಾರ್ಮಿಕ ಸಮ್ಮಾನ ದಿನಾಚರಣೆ, ಶ್ರಮ ಸಮ್ಮಾನ ಪ್ರಶಸ್ತಿ ಪ್ರದಾನ
Last Updated 13 ಮಾರ್ಚ್ 2020, 10:46 IST
ಅಕ್ಷರ ಗಾತ್ರ

ಯಾದಗಿರಿ: ಪ್ರಸ್ತುತ ದಿನಗಳಲ್ಲಿ ನಾನು ಮಾಲೀಕ, ನಾನು ಗುತ್ತೇದಾರ ಅನ್ನುವ ಮನೋಭಾವನೆ ಹೆಚ್ಚಾಗುತ್ತಿದೆ. ಗುತ್ತಿಗೆದಾರ, ಕೈಗಾರಿಕೆಗಳ ಮಾಲೀಕ ಎನಿಸಿಕೊಳ್ಳಲು ಕಾರ್ಮಿಕರೇ ಕಾರಣ. ಭವ್ಯ ಕಟ್ಟಡಗಳಲ್ಲಿ ಕುಳಿತುಕೊಳ್ಳುತ್ತಿದ್ದೇವೆ ಎಂದರೇ ಅದು ಕಾರ್ಮಿಕರ ಪರಿಶ್ರಮದಿಂದ ಮಾತ್ರ ಸಾಧ್ಯ. ಕಾರ್ಮಿಕರಿಲ್ಲದೆ ಮಾಲೀಕರಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಸಮ್ಮಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಕಾರ್ಮಿಕರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಆದರೆ, ಕಾರ್ಮಿಕರಿಗೆ ಅತೀ ಕಡಿಮೆ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಕಾರ್ಮಿಕರ ಹೆಚ್ಚಿನ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಯಕ ನಂಬಿ ಜೀವನ ನಡೆಸುವ ಜೀವಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಅಸಂಘಟಿತ ಕಾರ್ಮಿಕರ ಪ್ರತಿಭೆ ಗುರುತಿಸಿ ಅವರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ತಮ್ಮ ತಲಾತಲಾಂತರಿಂದ ಕಲಿತುಕೊಂಡು ಬಂದ ಕೌಶಲ್ಯಕ್ಕೆ ಇಲಾಖೆ ವತಿಯಿಂದ ಪ್ರೋತ್ಸಾಹ ಮತ್ತು ತರಬೇತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಎಂಎಸ್‍ವೈಎಂ) ಯೋಜನೆಡಿಯಲ್ಲಿ ಅಸಂಘಟಿತ ಕಾರ್ಮಿಕರು ಸಂಧ್ಯಾ ಕಾಲದಲ್ಲಿ ದುಡಿದು ಜೀವನ ನಡೆಸುವುದು ಕಷ್ಟಸಾಧ್ಯ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಈ ಪಿಂಚಣಿ ಯೋಜನೆ ನೆರವಾಗಲಿದೆ. ಪ್ರತಿಯೊಬ್ಬ ಕಾರ್ಮಿಕರು ಈ ಯೋಜನೆ ಅಡಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಸಂಘಟಿತ ಕಾರ್ಮಿಕರ ಕೆಲಸಕ್ಕೆ ಬ್ಯಾಂಕ್‍ಗಳು, ಸಂಘ- ಸಂಸ್ಥೆಗಳಿಂದ ಹಾಗೂ ಕಾರ್ಮಿಕ ಇಲಾಖೆಯಿಂದ ಸಹಕಾರ ಪಡೆದುಕೊಂಡು ಪ್ರಗತಿ ಹೊಂದಬೇಕು.ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರೆದಿದ್ದು, ಕಾರ್ಮಿಕರು ಕೆಲಸದಲ್ಲಿನ ವಿವಿಧ ಕೌಶಲಗಳ ಬಗ್ಗೆ ತರಬೇತಿ ಪಡೆದು ಕಾರ್ಯನಿರ್ವಹಿಸಿದರೆ ಒಳಿತು ಎಂದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಮಾತನಾಡಿ, ರಾಜ್ಯ ಸರ್ಕಾರ 43 ವಲಯಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು, 2017-18ನೇ ಸಾಲಿನಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅನುಷ್ಠಾನಗೊಳಿಸಿದೆ. ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ಸ್ ಹಾಗೂ ಮೆಕ್ಯಾನಿಕ್ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.

ಸನ್ಮಾನ

ಗೃಹ ಕಾರ್ಮಿಕರು, ಟೈಲರಿಂಗ್, ಕ್ಷೌರಿಕರು, ಕುಂಬಾರರು, ಅಗಸರು (ದೋಬಿ), ಮಂಡಕ್ಕಿ ಭಟ್ಟಿ ಹಾಗೂ ಹಮಾಲಿಗಳು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರಿಗೆ ಪ್ರಥಮ ಪ್ರಶಸ್ತಿ ₹ 15 ಸಾವಿರ ಮೌಲ್ಯದ ಚಿನ್ನದ ಪದಕ ಜೊತೆಗೆ ಪ್ರಶಂಸಾ ಪತ್ರ, ದ್ವಿತೀಯ ಪ್ರಶಸ್ತಿ ₹ 10 ಸಾವಿರ ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ಹಾಗೂ ತೃತೀಯ ಪ್ರಶಸ್ತಿ ₹ 8 ಸಾವಿರ ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ, ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ ಸೇರಿದಂತೆ ಕಾರ್ಮಿಕ ಇಲಾಖೆ ಸಿಬ್ಬಂದಿ ಇದ್ದರು.
***

ಕೊರೊನಾ ವೈರಸ್ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಯಾವುದೇ ವರದಿ ಕಂಡುಬಂದಿಲ್ಲ. ಜನರು ಎಚ್ಚರವಹಿಸಿ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು

-ಎಂ.ಕೂರ್ಮಾರಾವ್,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT