ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬ್ರಹ್ಮರಥಕ್ಕೆ ಸುರಪುರ ಅರಸರ ಆದ್ಯ ಪೂಜೆ

ತಿರುಮಲದಲ್ಲಿ ಶತಮಾನಗಳಿಂದ ಆಚರಣೆಯಲ್ಲಿರುವ ಪದ್ಧತಿ
Last Updated 5 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಸುರಪುರ: ಸುರಪುರದ ಗೋಸಲ ಅರಸರು ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಸಾಕಷ್ಟು ದತ್ತಿ, ದೇಣಿಗೆ ನೀಡಿದ್ದಾರೆ. ಶತ್ರುಗಳಿಂದ ದೇವಸ್ಥಾನವನ್ನು ಹಲವು ಬಾರಿ ರಕ್ಷಿಸಿದ್ದಾರೆ. ಹೀಗಾಗಿ ನವರಾತ್ರಿಯ ಬ್ರಹ್ಮ ರಥೋತ್ಸವಕ್ಕೆ ಇಂದಿಗೂ ಸುರಪುರ ಅರಸರಿಗೆ ಪ್ರಥಮ ಪೂಜೆಯ ಅವಕಾಶ ನೀಡಲಾಗಿದೆ.

ವೆಂಕಟೇಶ್ವರನಿಗೆ ತೊಡಿಸುವ ವಜ್ರಖಚಿತ ಕಿರೀಟ, ಬಂಗಾರದ ಮಂಚ ಇತರ ವೈಢೂರ್ಯ, ಆಭರಣಗಳನ್ನು ಸುರಪುರದ ಅರಸರು ಸಲ್ಲಿಸಿದ್ದಾರೆ. ದಶಕಗಳ ಹಿಂದೆ ದೇವಸ್ಥಾನದ ಎದುರು ಸುರಪುರ ಮಂಟಪ ಇತ್ತು. ಇದೇ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಈ ಮಂಟಪ ವಿಸ್ತರಣೆಗೆ ತೆರವಾಗಿದೆ.|

ಸುರಪುರ ಅರಸರು ದೇಣಿಗೆ ನೀಡಿದ ಉದ್ಯಾನ ಇದೆ. ಅದಕ್ಕೆ ಈಗಲೂ ‘ಸುರಪುರ ವನಂ’ ಎಂದು ಕರೆಯುತ್ತಾರೆ. ಪ್ರತಿ ನಿತ್ಯ ಈ ವನದಲ್ಲೇ ಬೆಳೆದ ಹೂಗಳನ್ನು ಸ್ವಾಮಿಗೆ ಸಲ್ಲಿಸಲಾಗುತ್ತದೆ. ಹೀಗೆ ಅನೇಕ ರೀತಿಯಲ್ಲಿ ಅರಸರು ಸೇವೆ ಸಲ್ಲಿಸಿದ್ದಾರೆ.

ಮೊದಲು ಅರಸರು ಆಗಾಗ ತಿರುಮಲಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಅರಸರ ಭಕ್ತಿಗೆ ಮೆಚ್ಚಿದ ವೆಂಕಟೇಶ್ವರ ಕನಸಿನಲ್ಲಿ ದರ್ಶನ ನೀಡಿ, ಇನ್ನು ಮುಂದೆ ತಿರುಮಲೆಗೆ ಬರುವುದು ಬೇಡ. ಸುರಪುರದಲ್ಲೆ ನೆಲೆಸುತ್ತೇನೆ ಎಂದು ಅಭಯ ನೀಡಿದ ಎಂಬ ಐತಿಹ್ಯವಿದೆ. ಸ್ವಾಮಿಯ ಆಪೇಕ್ಷೆಯಂತೆ ವೇಣುಗೋಪಾಲಸ್ವಾಮಿ ದೇಗುಲ ನಿರ್ಮಾಣವಾಗಿದೆ.

ಈಗ ತಿರುಮಲಕ್ಕೆ ಅರಸರ ಪ್ರತಿನಿಧಿ ಹೋಗುತ್ತಾರೆ. ಸುರಪುರದ ಅರಮನೆಯಲ್ಲಿ ಪೂಜೆ ಸಲ್ಲಿಸಿ ಅರಸರು ಸ್ವಾಮಿಗೆ ಮುಡಿಪು ಕಟ್ಟಿ ಶ್ರದ್ಧಾ, ಭಕ್ತಿಯಿಂದ ಅದನ್ನು ತಮ್ಮ ಪ್ರತಿನಿಧಿಗೆ ನೀಡುವುದು ವಾಡಿಕೆ. ಪ್ರತಿನಿಧಿ ಮುಡಿಪು ತೆಗೆದುಕೊಂಡು ತಿರುಮಲಕ್ಕೆ ಹೋಗಿ ಅಲ್ಲಿ 9 ದಿನ ನಂದಾದೀಪ ಹಾಕಿ ಸ್ವಾಮಿಗೆ ಅರಸರ ಪರವಾಗಿ ಮುಡಿಪು ಸಲ್ಲಿಸುತ್ತಾರೆ. ಈ ಮನೆತನಕ್ಕೆ ‘ದೇವರು’ ಎಂಬ ಹೆಸರಿದೆ. ಅರ್ಚಕರು ಲಡ್ಡು, ಫಲ, ಶಾಲು ನೀಡುತ್ತಾರೆ. ಪ್ರತಿನಿಧಿ ಅದನ್ನು ಅರಸರಿಗೆ ನೀಡುತ್ತಾರೆ.

ಕೊನೆಯಲ್ಲೂ ಸುರಪುರದ ಪೂಜೆ ಸಲ್ಲಿಸಲಾಗುತ್ತದೆ. ನಂತರ ದೇವರು ದೇಗುಲದ ಒಳಗೆ ಹೋಗುತ್ತಾನೆ.
ಬುಧವಾರ ಅರಸರ ಅಳಿಯ ವೇಣುಮಾಧವನಾಯಕ ಬ್ರಹ್ಮರಥಕ್ಕೆ ಪ್ರಥಮ ಪೂಜೆ ಸಲ್ಲಿಸಿದರು. ವೆಂಕಟೇಶ ದೇವರು ಜೊತೆಗಿದ್ದರು. ಅರ್ಚಕರು ಹೂ, ಹಣ್ಣು, ಪ್ರಸಾದ ನೀಡಿದರು.

***

ಸುರಪುರದಲ್ಲೂ ವಿಶಿಷ್ಟ ದಸರಾ

ಅರಸರು ರಾಜಪೋಷಾಕಿ ನೊಂದಿಗೆ ತಮ್ಮ ಪಟ್ಟದ ಕತ್ತಿಯೊಂದಿಗೆ ಸಂಜೆ ಶಮಿ ವೃಕ್ಷದಲ್ಲಿ ಪೂಜೆ ಸಲ್ಲಿಸುತ್ತಾರೆ. ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗರುಡವಾಹನ ಮೆರವಣಿಗೆಯಲ್ಲಿ ಸಾಗುತ್ತದೆ. ಅರಸರು, ಅವರ ವತನದಾರರು ಭಾಗವಹಿಸುತ್ತಾರೆ. ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ವಾಪಸು ಬರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಸೇರುವ ಜನರು ದೇವರಿಗೆ ಬನ್ನಿ ಮುಡಿದು ನಂತರ ಇತರರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾರೆ.

***

ನಮಗೆ ವೆಂಕಟೇಶ್ವರಸ್ವಾಮಿಯ ಆಶೀರ್ವಾದವಿದೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ.

-ರಾಜಾ ಕೃಷ್ಣಪ್ಪನಾಯಕ,ರಾಜ ವಂಶಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT