ಮಂಗಳವಾರ, ಜನವರಿ 18, 2022
27 °C
ವಾರಾಂತ್ಯ ಕರ್ಫ್ಯೂಗೆ ಸಿದ್ಧತೆ, ರ‍್ಯಾಲಿ, ಧರಣಿ, ಪ್ರತಿಭಟನೆ ನಿಷೇಧ

ಯಾದಗಿರಿ: ಜಿಲ್ಲೆಯಲ್ಲಿ ಜನವರಿ 19ರ ವರೆಗೆ ರಾತ್ರಿ ಕರ್ಫ್ಯೂ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜಿಲ್ಲೆಯಲ್ಲೂ ಮಾರ್ಗಸೂಚಿ ಪಾಲನೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಜನವರಿ 5 ರಾತ್ರಿ 10 ಗಂಟೆಯಿಂದ ಜ. 19ರ ಬೆಳಿಗ್ಗೆ 5 ಗಂಟೆ ವರೆಗೆ ಕೋವಿಡ್‌ ವಿವಿಧ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಲಾಗಿದೆ.

ಜಿಲ್ಲೆಯಾದ್ಯಂತ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನಗಳು ಕಾರ್ಯನಿರ್ವಹಿಸುತ್ತವೆ.

ಜಿಲ್ಲೆಯಲ್ಲಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಕೋವಿಡ್ ಸೂಕ್ತ ನಡುವಳಿಕೆ ಪಾಲಿಸಬೇಕು. ಆಸನ ಸಾಮರ್ಥ್ಯದ ಶೇ 50 ಮಾತ್ರ ಕಾರ್ಯನಿರ್ವಹಿಸಬೇಕು. ಇಲ್ಲಿಗೆ ಪ್ರವೇಶಿಸುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಕೋವಿಡ್-19 ಲಸಿಕೆ ಪಡೆದಿರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಆದೇಶದಲ್ಲಿ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಕೋವಿಡ್– 19 ಹರಡುವುದನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಗಸ್ತು ಮತ್ತು ಕಣ್ಗಾವಲು ಇರಬೇಕು.

ತೆರೆದ ಸ್ಥಳಗಳಲ್ಲಿ ಜರುಗುವ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 200 ಜನರಿಗೆ ಸೀಮಿತಗೊಳಿಸಲಾಗಿದೆ. ಮುಚ್ಚಿದ ಸ್ಥಳಗಳಲ್ಲಿ ಜರುಗುವ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 100 ಜನರಿಗೆ ಸೀಮಿತಗೊಳಿಸಲಾಗಿದೆ. ಇಂಥ ಸಂದರ್ಭಗಳಲ್ಲಿ ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ಚಾಲ್ತಿಯಲ್ಲಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಧಾರ್ಮಿಕ ಸ್ಥಳಗಳು ಕೇವಲ ದರ್ಶನಕ್ಕಾಗಿ ಮಾತ್ರ ತೆರೆಯಲು ಅನುಮತಿಸಲಾಗಿದೆ. ಸೇವೆ ಹಾಗೂ ಇತರೆ ಕಾರ್ಯಗಳನ್ನು ನಿರ್ಬಂಧಿಸಲಾಗಿದೆ. ಇಂಥ ಸ್ಥಳಗಳಿಗೆ ಒಂದು ಸಮಯಕ್ಕೆ ಸಂಪೂರ್ಣ ಲಸಿಕೆ ಪಡೆದ 50 ಜನರನ್ನು ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ.

ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಎಲ್ಲಾ ಸ್ಟ್ಯಾಂಡ್ ಅಲೋನ್ ಶಾಪ್‌ಗಳು ಮತ್ತು ಸಮುಚ್ಛಯಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಈಜುಕೋಳಗಳು ಮತ್ತು ಜಿಮ್‌ಗಳು ಶೇ 50 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, 2 ಡೋಸ್ ಕೋವಿಡ್-19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು. ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗಳು ಮತ್ತು ಸ್ಟೇಡಿಯಂಗಳು ಶೇ 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಎಲ್ಲಾ ರ‍್ಯಾಲಿಗಳು, ಧರಣಿಗಳು, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಭಾರತ ದಂಡ ಸಂಹಿತೆಯ 188ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ, 2005ರ ಸೆಕ್ಷನ್ 51 ರಿಂದ 60 ರನ್ವಯ ಕಾನೂನು ಕ್ರಮಕ್ಕೆ ಒಳಪಡುತ್ತಾರೆ ಎಂದು ಎಚ್ಚರಿಸಲಾಗಿದೆ.

ವಿಪತ್ತು ನಿರ್ವಹಣಾ ಅಧಿನಿಯಮ, 2005 ರ ಪ್ರಕರಣ 34ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಮಾರ್ಗಸೂಚಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. 

****

ಬಸ್‌, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣದ ಟಿಕೆಟ್‌ಗಳನ್ನು ತೋರಿಸಿ ನಿಲ್ದಾಣಗಳಿಗೆ ಸಾರ್ವಜನಿಕರು ಸಂಚರಿಸಲು ಅನುಮತಿಸಲಾಗಿದೆ. ಸಾರ್ವಜನಿಕರು ಕೋವಿಡ್‌ ನಿಯಮ ಪಾಲಿಸಿ

- ಶಂಕರಗೌಡ ಸೋಮನಾಳ, ಹೆಚ್ಚುವರಿ ಜಿಲ್ಲಾಧಿಕಾರಿ

***

ಜಿಲ್ಲೆಯಲ್ಲಿ 9 ಚೆಕ್‌ಪೋಸ್ಟ್‌ಗಳನ್ನು ತೆರಲಾಗಿದ್ದು, ಹೊರ ರಾಜ್ಯ, ಅಂತರಜಿಲ್ಲೆಯಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ವರದಿ ಪರಿಶೀಲನೆ ಮಾಡಲಾಗುತ್ತಿದೆ

- ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು