ಸೋಮವಾರ, ಜುಲೈ 26, 2021
22 °C
ಮಣ್ಣೆತ್ತು, ಪಿಒಪಿ ಎತ್ತುಗಳಿಗೆ ಪೂಜೆ, ಮಳೆಗಾಗಿ ಪ್ರಾರ್ಥನೆ; ಮನೆಗಳಲ್ಲಿ ಸಿಹಿಯೂಟ ಸವಿದ ರೈತರು

ಯಾದಗಿರಿ: ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯ ಮಣ್ಣೆತ್ತಿನ ಅಮಾವಾಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಣ್ಣೆತ್ತಿನ ಅಮಾವಾಸ್ಯೆಯನ್ನು ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.

ಕುಂಬಾರರ ಕಡೆಯಿಂದ ದವಸ–ಧಾನ್ಯ, ಹಣಕ್ಕೆ ಖರೀದಿಸಿದ್ದ ಮಣ್ಣೆತ್ತು, ಪಿಒಪಿ ಎತ್ತುಗಳನ್ನೂ ದೇವರ ಫೋಟೊಗಳ ಮುಂದೆ ಇಟ್ಟು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಮಾಡಲಾಯಿತು. ಎತ್ತುಗಳಿಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ನೈವೇದ್ಯವಾಗಿ ಹೋಳಿಗೆ, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ ನಂತರ ಮನೆಯವರು ಸೇರಿ ಅಮಾವಾಸ್ಯೆ ಅಂಗವಾಗಿ ತಯಾರಿಸಿದ ಭಕ್ಷ್ಯ ಭೋಜನ ಸವಿದರು.

ಗ್ರಾಮೀಣ ಭಾಗದಲ್ಲಿ ಮಕ್ಕಳೇ ತಯಾರಿಸಿದ ಮಣ್ಣೆತ್ತುಗಳಿಗೆ ಪೂಜೆ ಮಾಡಿ ಸಂಭ್ರಮಿಸಿದರು. ಅಲ್ಲದೇ ವಿವಿಧ ಅಲಂಕಾರ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಎತ್ತುಗಳನ್ನು ಕೈಯಲ್ಲಿ ಹಿಡಿದು ಮಕ್ಕಳು ಕುಣಿದಾಡಿ ಸಂಭ್ರಮಿಸಿದರು.

ಕುಂಬಾರರ ಮನೆ, ಮಾರುಕಟ್ಟೆಯಿಂದ ಶುಕ್ರವಾರವೂ ಮಣ್ಣೆತ್ತು, ಪಿಒಪಿ ಎತ್ತುಗಳನ್ನು ಖರೀದಿಸಿ ಪೂಜೆ ಮಾಡುವುದು ಕಂಡು ಬಂತು.

ದೇವಸ್ಥಾನಕ್ಕೆ ತೆರಳಿದ ಭಕ್ತರು: ಪ್ರತಿ ಅಮಾವಾಸ್ಯೆಯಂತೆ ಭಕ್ತರು ತಮ್ಮ ಮೆಚ್ಚಿನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೆ ಬಸವಣ್ಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಮಣ್ಣೆತ್ತು ಪೂಜಿಸಿದ ನಂತರ ಮನೆಯ ಮಾಳಿಗೆಯ ಮೇಲೆ ಮಣ್ಣಿನ ಎತ್ತುಗಳನ್ನು ಇಡುವುದು ವಾಡಿಕೆಯಾಗಿದೆ. ಈ ಮೂಲಕ ಮಳೆ ಬಂದು ಮಣ್ಣು ಕರಗಿ ರೈತರ ಸಮಸ್ಯೆಗಳು ಈ ರೀತಿಯಾಗಿ ಕರಗಿ ಹೋಗಲಿ ಎಂದು ರೈತಾಪಿ ಜನರು ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ಈ ವರ್ಷ ಉತ್ತಮ ಬೆಳೆಯಾಗಲಿ ಎಂದು ಬಸವಣ್ಣನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸೈದಾಪುರ: ಸಂತಸ ಹೆಚ್ಚಿಸಿದ ಹಬ್ಬ

ಸೈದಾಪುರ: ಅನ್ನದಾತನ ಭಕ್ತಿ ಭಾವದ ಪ್ರತೀಕ ಮಣ್ಣೆತ್ತಿನ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಭಕ್ತಿ ಭಾವದೊಂದಿಗೆ ಆಚರಿಸಿದರು.

ಸಮೀಪದ ಬಳಿಚಕ್ರ, ಕೂಡಲೂರು, ಸಂವಾರ, ಬೆಳುಂದಿ, ಸಾವೂರು, ಕೊಂಡಾಪುರ, ಕ್ಯಾತ್ನಾಳ, ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಶೇಷವಾಗಿ ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಆಚರಿಸಿದರು.

ಪ್ರತಿವರ್ಷ ಕಾರಹುಣ್ಣಿಮೆ ಮುಗಿದ ನಂತರ ಗ್ರೀಷ್ಮ ಋತುವಿನ ಜೇಷ್ಠ ಮಾಸದಲ್ಲಿ ಬರುವ ಈ ಹಬ್ಬಕ್ಕೆ ಗ್ರಾಮದ ಮಕ್ಕಳು, ಯುವಕರು, ಹಿರಿಯರು, ಕುಂಬಾರರು ಸಮೀಪದ ಹೊಲಗದ್ದೆ, ಕೆರೆಯ ದಡದಲ್ಲಿರುವ ಮಣ್ಣನ್ನು ತಂದು ಜೋಡು ಎತ್ತುಗಳು, ಗ್ವಾದಲಿ ಸಿದ್ಧಪಡಿಸಿ ನಂತರ ಪಟ್ಟಣಕ್ಕೆ ಬಂದು ಮಾರಾಟ ಮಾಡುತ್ತಾರೆ.

ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗಳಲ್ಲಿಯೂ ಕೂಡ ಮಣ್ಣಿನ ಎತ್ತುಗಳನ್ನು ತಂದು ಅವುಗಳಿಗೆ ವಿಶೇಷವಾಗಿ ಕೊರಳಿಗೆ ಘಂಟೆ, ಕೋಡಿಗೆ ನಾನಾ ರೀತಿಯ ಬಣ್ಣಗಳನ್ನು ಹಚ್ಚಿ ವಿವಿಧ ಪರಿಕರಗಳಿಂದ ಅಲಂಕಾರ ಮಾಡಿದರು. ಬಣ್ಣದಲ್ಲಿ ತೋಯಿಸಿದ ಜೋಳ, ಜೂಲು, ಘಂಟೆ, ಸರಗಳನ್ನು ತೊಡಿಸಿ ಸಿಂಗರಿಸಿದರು.

ನಂತರ ದೇವರ ಜಗಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣುಮಕ್ಕಳು ಹೋಳಿಗೆ, ಕಡಬು ಮುಂತಾದ ಸಿಹಿ ಅಡುಗೆಯನ್ನು ಸಿದ್ಧಪಡಿಸಿದರು. ನಂತರ ಕಾಯಿ, ಕರ್ಪೂರ, ಊದುಬತ್ತಿ, ಲೋಭಾನ ಹಾಕಿ ಎಡೆ ಹಿಡಿದು ಪೂಜೆ ಮಾಡಿದರು. ನಂತರ ಕೆರೆ ದಡಕ್ಕೆ ಹೋಗಿ ಮಣ್ಣೆತ್ತಿನ ಮುಖಗಳನ್ನು ತೊಳೆದು ಪೂಜೆ ಮಾಡಿ ತೆಂಗಿನ ಕಾಯಿಯನ್ನು ಹೊಡೆದು ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಕೃತಜ್ಞತೆ ಅರ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.