ಶುಕ್ರವಾರ, ಸೆಪ್ಟೆಂಬರ್ 24, 2021
24 °C
‘ಸತ್ಯವೇದದಲ್ಲಿ ಒಬ್ಬ ಸತ್ಯವಂತ’ ಕೃತಿ ಬಿಡುಗಡೆ, ಭಾವೈಕ್ಯ ಭಾರತ ಕವಿಗೋಷ್ಠಿ

ಯಾದಗಿರಿ: ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಆಧುನಿಕ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕಗಳನ್ನು ಓದಿದರೆ ಜ್ಞಾನಾರ್ಜನೆ ಹೆಚ್ಚಾಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಭಿಪ್ರಾಯಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದ ನೂತನ ಕಟ್ಟಡದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಎಚ್.ವಿಜಯ ಭಾಸ್ಕರ 84ನೇ ಜನ್ಮದಿನದ ಅಂಗವಾಗಿ ಅವರ ‘ಸತ್ಯವೇದದಲ್ಲಿ ಒಬ್ಬ ಸತ್ಯವಂತ’ ಕೃತಿ ಲೋಕಾರ್ಪಣೆ ಸಮಾರಂಭ ಹಾಗೂ ಭಾವೈಕ್ಯ ಭಾರತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಸಮಾಜದಲ್ಲಿ ತಲೆ ಎತ್ತಿ ತಿರುಗಾಡುವಂತೆ ಜ್ಞಾನವನ್ನು ತಿಳಿಸಿ ಕೊಡಲಿದೆ. ಹೀಗಾಗಿ ಪುಸ್ತಕ ಹುಳುಗಳಾದಾಗ ಮಾತ್ರ ಇದು ಸಾಧ್ಯವಾಗಲಿದೆ’ ಎಂದರು.

ಹಿರಿಯ ವಕೀಲ ಭಾಸ್ಕರ ರಾವ ಮೂಡಬೂಳ ಮಾತನಾಡಿ, ‘ಸತ್ಯವೇದದಲ್ಲಿ ಒಬ್ಬ ಸತ್ಯವಂತ ಕೃತಿಯ ಲೇಖಕ ಎಚ್. ವಿಜಯಭಾಸ್ಕರ್ ‍ಅವರು ಬರೆದ ಪುಸ್ತಕದಲ್ಲಿ ಸತ್ಯ ಇದೆ. ಸತ್ಯ ಮೌನದಿಂದ ಅನುಭವಿಸಿದವರಿಗೆ ಗೊತ್ತಾಗುತ್ತದೆ. ಪುಸ್ತಕದಲ್ಲಿ ಸತ್ಯ ಹರಿಶ್ಚಂದ್ರ ಮತ್ತು ಬೈಬಲ್‌ನ ಯೋಬ ಎನ್ನುವ ವ್ಯಕ್ತಿ ಸತ್ಯವನ್ನು ಬಿಟ್ಟು ನಡೆಯಲಿಲ್ಲ. ಈಗೀನ ಕಾಲದಲ್ಲಿ ಸತ್ಯ ಹೇಳುವ ಧೈರ್ಯ ಇಲ್ಲದಂತೆ ಆಗಿದೆ. ಹಿಂದೆಯೂ ನಾಸ್ತಿಕ, ಆಸ್ತಿಕರು ಇದ್ದರು. ಈಗಲೂ ಇದ್ದಾರೆ’ ಎಂದರು.

‘ಧರ್ಮವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ದಯವೇ ಧರ್ಮದ ಮೂಲವಯ್ಯ ಎಂದು ಹೇಳುವ ನಾವೇ ಅಸತ್ಯ ನುಡಿದರೆ ಹೇಗೆ? ಎಂದು ಪ್ರಶ್ನಿಸಿದರ ಅವರು, ದೇವರು ಇದ್ದಾನೆ. ಅರಣ್ಯ, ಸಂಪತ್ತು, ರಾತ್ರಿ, ಬೆಳಗು ಆಗುತ್ತದೆ. ಹೀಗಾಗಿ ಇವುಗಳನ್ನು ನಿಯಂತ್ರಿಸುವ ಶಕ್ತಿಯೇ ದೇವರು’ ಎಂದು ಅಭಿಪ್ರಾಯಿಸಿದರು.

ಯುವ ಸಾಹಿತಿ ಕೆ.ಎಂ.ವಿಶ್ವನಾಥ ಮರತೂರ ಕೃತಿಯ ಲೇಖನ ಪರಿಚಯ ಮಾಡಿ, ‘ಮೇಲ್ನೋಟಕ್ಕೆ ಈ ಕೃತಿ ಒಂದು ಸಮುದಾಯಕ್ಕೆ ಸೇರಿದ ಪುಸ್ತಕ ಎಂದು ತೋರುತ್ತದೆ. ಆದರೆ, ಇದು ಸಾಹಿತ್ಯದಲ್ಲಿ ಉತ್ತಮವಾಗಿದೆ. ಸಾಹಿತ್ಯವನ್ನು ಟೀಕೆ, ವ್ಯಂಗ ಮಾಡುತ್ತೇವೆ. ಆದರೆ, ಸಾಹಿತ್ಯವನ್ನು ಚರ್ಚೆ ಮಾಡಬೇಕು. ಆಗ ಮಾತ್ರ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದೆ. ಇದು ಆಗಲು ಸಾಹಿತ್ಯದಲ್ಲಿ ಸತ್ವ ಇರಬೇಕು. ಆಗ ಮಾತ್ರ ಚರ್ಚೆಯಾಗುತ್ತದೆ’ ಎಂದರು.

‘ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಎಸ್.ಎಲ್.‌ಭೈರಪ್ಪ ಅವರು ಸಾಹಿತ್ಯ ಬರೆದರೆ ಚರ್ಚೆಗೆ ಒಳಪಡಿಸುತ್ತಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ. ಸಾಹಿತ್ಯ ಚರ್ಚೆಗೆ ಒಳಪಟ್ಟಾಗ ಮಾತ್ರ ಹೆಚ್ಚು ಜನರಿಗೆ ತಲುಪುತ್ತದೆ’ ಎಂದು ಹೇಳಿದರು.

‘ರಾಘವಂಕನನ್ನು ಉಲ್ಲೇಖಿಸಿ ಸತ್ಯ ಹರಿಶ್ಚಂದ್ರ ಹೇಗೆ ಸತ್ಯವಂತ ಇದ್ದ‍ ಎನ್ನುವುದನ್ನು ಲೇಖಕರು ಅನುಭವಿಸಿ ಬರೆದಿದ್ದಾರೆ. ಇಂಥ ಕೃತಿಗಳು ಗಟ್ಟಿಯಾಗಿ ನಿಲ್ಲುತ್ತವೆ. ಪುಸ್ತಕದುದ್ದಕ್ಕೂ ಅರ್ಥಪೂರ್ಣ ಶಬ್ಧಗಳನ್ನು ಬರೆದಿದ್ದಾರೆ. ರಾಘವಂಕನ ಸಾಹಿತ್ಯ ಒಪ್ಪಿದವರು ಸತ್ಯವೇದದಲ್ಲಿ ಒಬ್ಬ ಸತ್ಯವಂತ ಕೃತಿಯನ್ನು ಒಪ್ಪುತ್ತಾರೆ’ ಎಂದು ತಿಳಿಸಿದರು.

ಇದೇ ವೇಳೆ ಸಾಹಿತಿಗಳಾದ ವಿಶ್ವನಾಥ ಗೊಂದಡಗಿ, ದೇವೀಂದ್ರ ಧೋತ್ರೆ, ದುರ್ಗಪ್ಪ ಎಚ್ ಪೂಜಾರಿ, ಭಾಸ್ಕರ್ ಮಾಥ್ಯೂ, ರಿಯಾಜ್ ಪಟೇಲ್ ವರ್ಕ‌ನಳ್ಳಿ, ಗುರು ಪ್ರಸಾದ್ ವೈದ್ಯ ಕವನ ವಾಚಿಸಿದರು.

ಈ ಸಂದರ್ಭದಲ್ಲಿ ಕೃತಿಯ ಲೇಖಕ ಎಚ್. ವಿಜಯಭಾಸ್ಕರ್, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಅಂತರರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಶಹಾಪುರ ತಾಲ್ಲೂಕು ಚುಟುಕು ಸಾಹಿತ್ಯ ಅಧ್ಯಕ್ಷ ಬಸವರಾಜ ಸಿನ್ನೂರ, ಮೇಘನಾಥ ಬೆಳ್ಳಿ ಸೇರಿದಂತೆ ಕಲಾವಿದರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.