ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನಮ್ಮ ನಗರ ನಮ್ಮ ಧ್ವನಿ–ಪ್ರಯಾಣಿಕರಿಗೆ ಬಸ್, ಸೌಲಭ್ಯಗಳ ಕೊರತೆ

ಬಸ್‌ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ದರ್ಬಾರ್‌; ಆದಾಯಕ್ಕಷ್ಟೆ ಸೀಮಿತವಾದ ಅಧಿಕಾರಿಗಳು
Last Updated 28 ನವೆಂಬರ್ 2021, 16:04 IST
ಅಕ್ಷರ ಗಾತ್ರ

ಯಾದಗಿರಿ: ಬಸ್‌ಗಳ ಸಮರ್ಪಕ ವ್ಯವಸ್ಥೆ, ಸೌಲಭ್ಯಕ್ಕೆ ಒತ್ತಾಯಿಸಿ ಒಂದು ವಾರದಿಂದ ವಿವಿಧೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರಯಾಣಿಕರಿಗೆ ಬಸ್ ಜೊತೆಗೆ ಬಸ್ ನಿಲ್ದಾಣಗಳಲ್ಲಿ ಸೌಲಭ್ಯಗಳ ಕೊರತೆಯು ಕಾಡುತ್ತಿದೆ. ಕೋವಿಡ್ ಮುಂಚೆ ಇದ್ದ ಬಸ್ ಮಾರ್ಗಗಳು ಬಂದ್ ಆಗಿದ್ದು, ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.

ಇಂದಿಗೂ ಗ್ರಾಮೀಣ ಪ್ರದೇಶಕ್ಕೆ ಸರಿಯಾದ ಬಸ್‌ ವ್ಯವಸ್ಥೆಯಿರದ ಕಾರಣ ಖಾಸಗಿ ವಾಹನಗಳ ಅವಲಂಬನೆ ತಪ್ಪಿಲ್ಲ. ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ ಹಳೆ ಮತ್ತು ಹೊಸ ಬಸ್‌ ನಿಲ್ದಾಣಗಳಿದ್ದು, ಮೂಲಸೌಲಭ್ಯಗಳಿಂದ ವಂಚಿತವಾಗಿವೆ.

ಗಬ್ಬೆದ್ದು ನಾರುತ್ತಿರುವ ಶೌಚಾಲಯ: ಯಾದಗಿರಿಯ ಎರಡೂ ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳು ನಿರ್ಮಿಸಲಾಗಿದ್ದು, ದುರ್ನಾತ ಬೀರುತ್ತಿವೆ. ಇದರ ಜೊತೆಗೆ ಮೂತ್ರಾಲಯಗಳು ದೂರದಿಂದಲೇ ದುರ್ನಾತ ಬೀರುತ್ತಿದೆ. ಪ್ರಯಾಣಿಕರು, ಬಸ್‌ ಚಾಲಕರು, ನಿರ್ವಾಹಕರು ಮೂಗು ಮುಚ್ಚಿಕೊಂಡೆ ಜಲಬಾಧೆ ತೀರಿಸಿಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ.

ಖಾಸಗಿ ವಾಹನಗಳ ದರ್ಬಾರ್‌: ಹೊಸ ನಿಲ್ದಾಣದ ಮುಂಭಾಗದಲ್ಲಿಯೇ ಖಾಸಗಿ ವಾಹನಗಳು ರಾಜರೋಷವಾಗಿ ನಿಂತಿರುತ್ತವೆ. ಬಸ್‌ ಒಳ, ಹೊರ ಹೋಗಲು ಜಾಗವಿಲ್ಲದಂತೆ ದಾರಿಗೆ ಅಡ್ಡ ನಿಂತಿರುತ್ತವೆ. ಇದರಿಂದ ಎಷ್ಟೊ ಬಾರಿ ಬಸ್‌ ನಿಲ್ದಾಣ ಮುಂಭಾಗದಲ್ಲಿ ಟ್ರಾಫಿಕ್‌ ಜಾಂ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಸೊಳ್ಳೆಗಳ ತಾಣ ನೀರಿನ ತೊಟ್ಟಿ: ಹೊಸ ಮತ್ತು ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ನೀರು ಪಾಚಿಗಟ್ಟಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಅದೇ ನೀರು ಸೇವಿಸುತ್ತಿದ್ದಾರೆ. ₹2 ಹಾಕಿದರೆ ಶುದ್ಧ ನೀರಿನ ವ್ಯವಸ್ಥೆ ಇದೆ. ಅದು ವಿದ್ಯುತ್ ಇದ್ದಾಗ ಚಾಲೂ ಇರುತ್ತದೆ. ಹಲವು ದಿನ ಕೆಟ್ಟು ಹೋದರೂ ಶೀಘ್ರ ದುರಸ್ತಿಯಾಗುವುದಿಲ್ಲ. ಇನ್ನೂ ಸೊರಿಕೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.ಹಳೆ ಬಸ್‌ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಇದ್ದರೂ ಪೈಪ್‌ ಇಲ್ಲದ ಕಾರಣ ನೀರು ಸೊರಿಕೆಯಾಗಿ ಬಸ್‌ ನಿಲ್ದಾಣ ಎಲ್ಲ ಹೊಲಸು ಆಗುತ್ತಿದೆ.

ಸ್ವಚ್ಛತೆ ಮಾಯ: ಬಸ್‌ ನಿಲ್ದಾಣಗಳಲ್ಲಿ ಸ್ವಚ್ಛತಾಗಾರರು ಇದ್ದರೂ ಸ್ವಚ್ಛತೆ ಮಾಯವಾಗಿರುತ್ತದೆ. ಕಸ ಬಿದ್ದಿದ್ದರೂ ಅದರಲ್ಲಿಯೇ ಪ್ರಯಾಣಿಕರು ತಿರುಗಾಡುತ್ತಾರೆ.

ರಾತ್ರಿ 7 ಗಂಟೆ ನಂತರ ಸಂಚಾರ ನಿಯಂತ್ರಕರು ಯಾರೂ ಕಾಣುವುದಿಲ್ಲ. ಬೆಳಗಿನ ಜಾವದಲ್ಲಿ ಅಲ್ಲಲ್ಲಿ ಕೂತಿರುತ್ತಾರೆ. ಆದರೆ, ಸಂಜೆಯಾದರೆ ಒಂದೇ ಕಡೆ ಇದ್ದೂ ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ಸಿಗುವುದಿಲ್ಲ. ಕೆಲ ಸಂಚಾರ ನಿಯಂತ್ರಕರು ಸಿಟ್ಟಿನಿಂದಲೇ ಮಾತನಾಡುತ್ತಾರೆ. ಇದರಿಂದ ಎಷ್ಟೋ ಪ್ರಯಾಣಿಕರಿಗೆ ಸಮರ್ಪಕವಾದ ಮಾಹಿತಿಯೇ ಸಿಗುವುದಿಲ್ಲ. ಕೆಲವರು ಹಾರಿಕೆ ಉತ್ತರ ನೀಡುತ್ತಾರೆ ಎಂದು ಪ್ರಯಾಣಿಕರು ದೂರುತ್ತಾರೆ.

****

ರೋಗ ಉತ್ಪಾದನೆಯ ತಾಣ
ಶಹಾಪುರ: ಪ್ರಯಾಣಿಕರ ಅನುಕೂಲಕ್ಕಾಗಿ ನಗರದಲ್ಲಿ ಒಂದಲ್ಲ ಎರಡು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ನಿಲ್ದಾಣಗಳು ಪ್ರಯಾಣಿಕರ ಹಿತವನ್ನು ಮರೆತುಬಿಟ್ಟಿವೆ. ಮಳಿಗೆ ನಿರ್ಮಿಸಿ ಲಾಭಾಂಶದ ನಿರೀಕ್ಷೆಯಲ್ಲಿರುವುದರಿಂದ ಸ್ವಚ್ಛತೆಯ ಬರದಿಂದ ಹೈರಾಣಗೊಂಡಿವೆ.

ಪ್ರಯಾಣಿಕರು ನಿಲ್ದಾಣದಲ್ಲಿ ನಿಂತುಕೊಳ್ಳಬೇಕು ಎಂದರೆ ಮೂಗು ಮುಚ್ಚಿಕೊಂಡು ನಿಲ್ಲುವ ದುಸ್ಥಿತಿ ಬಂದಿದೆ. ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದಾರೆ. ಹೊಸ ಬಸ್ ನಿಲ್ದಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಅಕ್ರಮ ಚಟುವಣೆಕೆಯ ತಾಣವಾಗಿ ಮಾರ್ಪಟ್ಟಿದೆ. ನಿಲ್ದಾಣದ ಸುತ್ತಲು ಜಾಲಿಗಿಡ ಬೆಳೆದು ನಿಂತಿದೆ. ನಿಲ್ದಾಣದ ಮುಂದುಗಡೆ ವಿಶಾಲವಾದ ಉದ್ಯಾನ ಜಾಗದಲ್ಲಿ ಬೇಕಾಬಿಟ್ಟಿ ತ್ಯಾಜ್ಯ ವಸ್ತುಗಳನ್ನು ಬಿಸಾಕಿದ್ದಾರೆ ಎಂದು ಪ್ರಯಾಣಿಕ ರಾಜೇಂದ್ರ.

ಇನ್ನೂ ಹಳೆ ಬಸ್ ನಿಲ್ದಾಣವು ಅರ್ಧ ಭಾಗದಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದ್ದಾರೆ. ಇನ್ನುಳಿದ ಅರ್ಧ ಜಾಗವನ್ನು ಖಾಲಿ ಬಿಟ್ಟಿದ್ದರಿಂದ ಅಲ್ಲಿ ಸುತ್ತಮುತ್ತಲಿನ ಅಂಗಡಿಯವರು ತ್ಯಾಜ್ಯ ವಸ್ತುಗಳನ್ನು ಹಾಕುತ್ತಾರೆ. ಜಾಲಿಗಿಡ ಬೆಳೆದು ನಿಂತಿವೆ . ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ಸಾಸನೆ ಬೀರುತ್ತಿದೆ. ಇದು ಸಾಂಕ್ರಾಮಿಕ ರೋಗ ಉತ್ಪಾದನೆಯ ತಾಣವಾಗಿದೆ ಎಂದು ತಿಳಿಸಿದರು.
*****
ಹುಣಸಗಿ ಬಸ್ ನಿಲ್ದಾಣ: ಸೌಲಭ್ಯಗಳ ಕೊರತೆ

ಹುಣಸಗಿ: ನೂತನ ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ಒಂದು ದಶಕದ ಹಿಂದೆ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಇಂದಿಗೂ ಕುಡಿಯುವ ನೀರು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾರಿಗೆ ಇಲಾಖೆ ವಿಫಲವಾಗಿದೆ.

ಹುಣಸಗಿ ಪಟ್ಟಣದ ಮುಖಾಂತರ ನಿತ್ಯ 120 ಕ್ಕೂ ಹೆಚ್ಚು ಬಸ್‌ಗಳು ವಿವಿಧ ನಗರ ಹಾಗೂ ಅಂತರ್ ರಾಜ್ಯಗಳಿಗೆ ತೆರಳುತ್ತವೆ. ಆದರೆ, ಇಲ್ಲಿನ ಬಸ್ ನಿಲ್ದಾಣದಲ್ಲಿ ಇಂದಿಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ನಿತ್ಯ ಹುಣಸಗಿ ಪಟ್ಟಣಕ್ಕೆ ನೂರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ, ಕುಡಿಯುವ ನೀರಿನ ಸೌಲಭ್ಯ ಇಲ್ಲದ್ದರಿಂದಾಗಿ ಬಸ್ ನಿಲ್ದಾಣ ಕ್ಯಾಂಟೀನ್ ಇಲ್ಲದೇ ಹೋಟೆಲ್‌ಗಳಿಗೆ ತೆರಳಿ ನೀರು ಕುಡಿಯಬೇಕಿದೆ. ಇನ್ನು ಶೌಚಾಲಯಗಳು ಸ್ವಚ್ಛತೆ ಇಲ್ಲ. ಅಲ್ಲದೇ ಮಹಿಳೆಯರು ಮೂತ್ರಾಲಯಕ್ಕೆ ತೆರಳಿದರೆ ₹10 ಪಡೆಯುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು.

ಬಸ್ ನಿಲ್ದಾಣದಲ್ಲಿ ಅಳವಡಿಲಾಗಿದ್ದ ಸಿಸಿಟಿವಿ ಕ್ಯಾಮರಾ ಕೆಟ್ಟು ವರ್ಷವೇ ಸಮೀಪಿಸುತ್ತಿದ್ದರೂ ಇಂದಿಗೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಅಲ್ಲದೇ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಪಟ್ಟಣದ ಹೃದಯ ಭಾಗದಲ್ಲಿಯೇ ಬಸ್ ನಿಲ್ದಾಣ ಇರುವುದರಿಂದಾಗಿ ಖಾಸಗಿ ವಾಹನಗಳು ಹೆಚ್ಚು ಬಸ್ ನಿಲ್ದಾಣದಲ್ಲಿಯೇ ನಿಲ್ಲಿಸಲಾಗುತ್ತಿದೆ. ಸಂಚಾರ ನಿಯಂತ್ರಕರು ಹಲವಾರು ಬಾರಿ ಧ್ವನಿವರ್ಧಕದಲ್ಲಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ.
*****
ಸುರಪುರ ಬಸ್‌ನಿಲ್ದಾಣ: ಸಮಸ್ಯೆಗಳ ಆಗರ

ಸುರಪುರ: ಸುರಪುರ ಬಸ್‌ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. 11 ಪ್ಲಾಟ್‌ಫಾರ್ಮ ಹೊಂದಿರುವ ಬಸ್‌ನಿಲ್ದಾಣದ ಮೂಲಕ ಪ್ರತಿನಿತ್ಯ 200ಕ್ಕೂ ಹೆಚ್ಚು ಬಸ್ ಸಂಚರಿಸುತ್ತವೆ. ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಇಲ್ಲದಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ.

ಬಿಡಾಡಿ ದನಗಳು, ಬೀದಿ ನಾಯಿಗಳು, ಹಂದಿಗಳು ಸದಾ ಬಸ್ ನಿಲ್ದಾಣದಲ್ಲೇ ಇರುತ್ತವೆ. ಪ್ರಯಾಣಿಕರ ಲಗೇಜಿಗೂ ಬಾಯಿ ಹಾಕುತ್ತವೆ. ರಾತ್ರಿ ಅಲ್ಲೆ ಮಲಗುತ್ತವೆ. ಮಲ, ಮೂತ್ರಗಳನ್ನು ಅಲ್ಲೆ ಮಾಡುವುದರಿಂದ ಕಸಗುಡಿಸುವವರಿಗೆ ಸಾಕು ಬೇಕಾಗಿದೆ.

ಕಾವಲುಗಾರರು ಇರದಿರುವುದರಿಂದ ಖಾಸಗಿ ವಾಹನಗಳು ನಿಲ್ದಾಣದ ಒಳಗೆ ಪ್ರವೇಶಿಸುತ್ತವೆ. ಬಹಳಷ್ಟು ವಾಹನಗಳು ನಿಲ್ದಾಣದ ಒಳಗೆ ನಿಲ್ಲುತ್ತವೆ. ಬೀದಿ ಬದಿ ವ್ಯಾಪಾರಿಗಳು ಬಸ್‌ನಿಲ್ದಾಣದ ಬಾಗಿಲಲ್ಲೇ ವ್ಯಾಪಾರ ಮಾಡುತ್ತಾರೆ. ಬಸ್ ನಿಲ್ದಾಣದ ರಸ್ತೆ ದಟ್ಟ ವಾಹನ ಸಂಚಾರದಿಂದ ಕೂಡಿರುತ್ತದೆ. ಹೀಗಾಗಿ ಬಸ್‌ಗಳು ನಿಲ್ದಾಣದ ಒಳಗೆ ಹೋಗಲು ತೊಂದರೆಯಾಗಿದೆ.

ರಾತ್ರಿ 9ರ ವರೆಗೆ ಮಾತ್ರ ಸಿಬ್ಬಂದಿ ಇರುತ್ತಾರೆ. ರಾತ್ರಿ ಪ್ರಯಾಣಿಕರಿಗೆ ಕುಡುಕರ, ಕಳ್ಳರ ಕಾಟ ಅಧಿಕವಾಗಿದೆ. ಈ ಅವ್ಯವಸ್ಥೆಯಿಂದ ಬಹುತೇಕ ಸಾರಿಗೆ ಬಸ್‌ಗಳು ರಾತ್ರಿ ಸಮಯದಲ್ಲಿ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತವೆ. ಬಸ್‌ನಿಲ್ದಾಣಕ್ಕೆ ಬರುವುದೇ ಇಲ್ಲ.

ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಮೋಟಾರ್ ಬೈಕ್, ಇತರ ವಾಹನಗಳು ಎಲ್ಲೆಂದರಲ್ಲಿ, ಬಸ್‌ಗೆ ಅಡ್ಡಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಬಸ್ ಸಂಚರಿಸಲು ಇದರಿಂದ ಸಮಸ್ಯೆಯಾಗಿದೆ. ಬಸ್‌ನಿಲ್ದಾಣದ ಅಕ್ಕಪಕ್ಕ ಸ್ವಚ್ಛತೆ ಇಲ್ಲ. ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಇಲ್ಲ. ಸರಿಯಾದ ಸಮಯಕ್ಕೆ ಬಸ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

***

ಯಾದಗಿರಿ ಡಿಪೋದಿಂದ 110 ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಹೊಸ ಬಸ್ ನಿಲ್ದಾಣದಲ್ಲಿ 18 ಪ್ಲಾಟ್‌ ಫಾರಂ, ಹಳೆ ಬಸ್‌ ನಿಲ್ದಾಣದಲ್ಲಿ 5 ಪ್ಲಾಟ್‌ ಫಾರಂ ಇವೆ. ಹೊಸ ಬಸ್‌ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಇದೆ

ರಮೇಶಕುಮಾರ ಪಾಟೀಲ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾಲನಾಧಿಕಾರಿ

***

ಬಸ್‌ ನಿಲ್ದಾಣಗಳಲ್ಲಿ ಸುಸಜ್ಜಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ದೀಪ, ಆಸನಗಳನ್ನು ಹೆಚ್ಚು ಮಾಡಬೇಕು. ಬೇಜು ಕಳ್ಳರ ನಿಯಂತ್ರಣಕ್ಕಾಗಿ ಭದ್ರತಾ ಸಿಬ್ಬಂದಿ ನೇಮಿಸಬೇಕು. ಶುದ್ಧ ಕುಡಿಯುವ ನೀರು ಉಚಿತವಾಗಿ ನೀಡಬೇಕು
ಉಮೇಶ ಕೆ. ಮುದ್ನಾಳ, ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ

***

ಬಸ್‌ಗಳು ಸಕಾಲಕ್ಕೆ ಇರುವುದಿಲ್ಲ. ಇದರಿಂದ ಶಾಲಾ–ಕಾಲೇಜಿಗೆ ಬರಲು ತಡವಾಗುತ್ತದೆ. ಅಲ್ಲದೇ ಗ್ರಾಮಕ್ಕೆ ತೆರಳಲು ಪರದಾಡಬೇಕಾಗಿದೆ. ಸೂಕ್ತ ಕ್ರಮ ಕೈಗೊಳ್ಳಿ
ಮಹೇಶ, ವಿದ್ಯಾರ್ಥಿ

***

ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಸೂಕ್ತ ಸೌಲಭ್ಯಗಳೇ ಇಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ
ಸಿದ್ದಲಿಂಗಪ್ಪ ಗುರುಸಣಿಗಿ, ವಿದ್ಯಾರ್ಥಿ

****

ಬಸ್‌ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಬಸ್‌ಗೆ ಕಾಯಲು ಹೆದರಿಕೆ ಬರುತ್ತದೆ. ಬಿಡಾಡಿ ದನಗಳ, ನಾಯಿಗಳ ಕಾಟ ಅಧಿಕವಾಗಿದೆ. ಕುಡುಕರ ಹಾವಳಿ ಅತಿಯಾಗಿದೆ
ಮುಕುಂದರಾವ ಶಾರದಳ್ಳಿ, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT