ಯಾದಗಿರಿ–ಸಂಪೂರ್ಣ ಅನ್‌ಲಾಕ್: ಸಹಜ ಸ್ಥಿತಿಯತ್ತ ಜಿಲ್ಲೆ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲಾಗಿದ್ದು, ಜಿಲ್ಲೆ ಸಹಜ ಸ್ಥಿತಿಗೆ ಬಂದಿದೆ.
ಕಳೆದ ಎರಡು ತಿಂಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರಿಂದ ಅದನ್ನು ನಿಯಂತ್ರಣ ಮಾಡಲು ಸರ್ಕಾರ ಲಾಕ್‌ಡೌನ್ ಮಾಡಿತ್ತು. ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲಾಗುತ್ತಿದ್ದು, ಚಟುವಟಿಕೆಗಳು ಬಿರುಸುನಿಂದ ಸಾಗಿವೆ.
ರಸ್ತೆ, ಮಾರುಕಟ್ಟೆಗಳಲ್ಲಿ ಜನಜಂಗುಳಿ: ಸೋಮವಾರದಿಂದ ಅನ್‌ಲಾಕ್ ಆಗಿರುವ ಕಾರಣ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಚಾರ ಹೆಚ್ಚಾಗಿತ್ತು. ರಸ್ತೆ, ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಕಂಡು ಬಂದಿತು.
ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್‌ನಲ್ಲಿ ಲಾಕ್‌ಡೌನ್ ವೇಳೆ ದೀಪ ಬೆಳಗುತ್ತಿರಲಿಲ್ಲ. ಈಗ ಸಂಚಾರ ನಿಯಂತ್ರಣಕ್ಕಾಗಿ ಸಿಗ್ನಲ್ ದೀಪ ಹಾಕಲಾಗುತ್ತಿದೆ.
ಸರ್ಕಾರಿ, ಖಾಸಗಿ ಕಚೇರಿಗಳು ತೆಗೆದಿದ್ದು, ಸಿಬ್ಬಂದಿ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ.
ಬಸ್‌ಗಳ ಓಡಾಟವೂ ಏರಿಕೆ: ನಗರದ ಕೇಂದ್ರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಬಸ್‌ಗಳ ಸಂಖ್ಯೆ ಏರಿಕೆ ಕಂಡಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಿದರು. ಸೋಮವಾರದಿಂದ 245ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಣೆ ಮಾಡಲಾಗಿದೆ.
ಮಾಸ್ಕ್ ಇಲ್ಲದೆ ಜನ ಓಡಾಟ: ನಗರದ ಪ್ರಮುಖ ವೃತ್ತ, ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೇ ಸಂಚಾರ ಮಾಡುತ್ತಿರುವುದು ಕಂಡು ಬಂತು. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿವುದು ಕಂಡು ಬಂದಿತು.
ರಾತ್ರಿ ಕರ್ಫ್ಯೂ: ಜುಲೈ 5ರಿಂದ 19 ಜುಲೈ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಪ್ರತಿದಿನ ರಾತ್ರಿ 9 ಗಂಟೆ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಇದೆ. ಅಗತ್ಯ ಚಟುವಟಿಕೆ ಹೊರತು ಪಡಿಸಿ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
******
ಬಾಗಿಲು ತೆಗೆದ ದೇವಸ್ಥಾನ
ಜಿಲ್ಲೆಯ ವಿವಿಧ ಎ ಮತ್ತು ಬಿ ವರ್ಗದ ದೇವಸ್ಥಾನಗಳನ್ನು ಸೋಮವಾರದಿಂದ ತೆಗೆಯಲಾಗಿದೆ.
ಜಿಲ್ಲೆಯ ‘ಎ’ ಗ್ರೇಡ್ ಹಾಗೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ, ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಆರಂಭವಾಗಿದೆ. ಸಿ ಗ್ರೇಡ್ ದೇವಸ್ಥಾನ ಸೇರಿದಂತೆ ಸಣ್ಣಪುಟ್ಟ ದೇವಸ್ಥಾನಗಳು ಈಗಾಗಲೇ ಬಾಗಿಲು ತೆಗೆದು ಪೂಜೆ ಮಾಡುತ್ತಿದ್ದರು.
ದೇವಸ್ಥಾನಗಳು ತೆಗೆದರೂ ಭಕ್ತರ ಸಂಖ್ಯೆ ವಿರಳವಾಗಿದೆ. ಕೆಲವರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಇನ್ನೂ ಕೆಲವರು ಸಂಜೆ ವೇಳೆಗೆ ದರ್ಶನ ಪಡೆದರು. ದರ್ಶನಕ್ಕೆ ಮಾತ್ರ ಅವಕಾಶವಿದೆ ಎಂದು ಸರ್ಕಾರದ ಹೇಳಿದರೂ ವಿವಿಧ ಪೂಜಾ ಸೇವೆಗಳು ನಡೆದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.