ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಡಿಎಚ್‌ ಕಚೇರಿ: ಉಬ್ಬು ಚಿತ್ರ, ಬರಹದಿಂದ ಆರೋಗ್ಯ ಜಾಗೃತಿ

ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ವಿಶಿಷ್ಟ ಪ್ರಯೋಗ
Last Updated 30 ಮಾರ್ಚ್ 2021, 16:53 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಬ್ಬು ಚಿತ್ರ, ಬರಹದಿಂದ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ವಿಶಿಷ್ಟ ಪ್ರಯೋಗ ಮಾಡಲಾಗಿದೆ.

ಕಚೇರಿಗೆ ಬರುವ ಸಾರ್ವಜನಿಕರು ಈ ಉಬ್ಬು ಚಿತ್ರಗಳನ್ನು ನೋಡಿ ಮಾಹಿತಿ ಪಡೆಯಲು ಪ್ರಯೋಗ ಮಾಡಲಾಗಿದೆ.

ಡಿಎಚ್‌ಒ ಡಾ.ಇಂದುಮತಿ ಪಾಟೀಲ ಅವರು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ವಿಷಯಗಳು ಶಾಶ್ವತವಾಗಿ ಇರುವಂತೆ ಇರಬೇಕು ಎಂದು ಆಲೋಚಿಸಿ ಉಬ್ಬು ಚಿತ್ರ, ಬರಹದ ಕಲೆಯನ್ನು ಆಯ್ಕೆ ಮಾಡಿಕೊಂಡು ಇದನ್ನು ಅನುಷ್ಠಾನಕ್ಕೆ ತಂದಿದ್ದಾರೆ.

ಈಗಾಗಲೇ ಭಿತ್ತಪತ್ರ, ಗೋಡೆ ಬರಹ, ಪೋಸ್ಟರ್‌, ಬ್ಯಾನರ್‌ ಮೂಲಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲಾಗಿದೆ. ಆದರೆ, ಯಾವುದೋ ಕಾರಣಕ್ಕಾಗಿ ಅವು ಅಳಸಿಹೋಗುತ್ತಿದ್ದವು. ಇದನ್ನು ಮನಗಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಶ್ವತವಾಗಿ ಉಳಿಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಎರಡು ತಿಂಗಳು ಕಾಮಗಾರಿ:
ಕಲಬುರ್ಗಿಯ ಕಲಾವಿದ ಚಂದನ್‌ ಸಿಂಗ್‌ ಮೂಲಕ ಉಬ್ಬು ಚಿತ್ರ, ಬರಹಗಳು ಜೀಂವತಿಕೆ ಪಡೆದಿವೆ. ಕಳೆದ ಎರಡು ತಿಂಗಳಿಂದ ಉಬ್ಬು ಚಿತ್ರ, ಬರಹಗಳ ರಚನೆ ಸಾಗಿ ಬಂದಿದೆ. ಈ ಎಲ್ಲವೂ ಸಿಮೆಂಟ್‌ ಮೂಲಕ ಮೂಡಿ ಬಂದಿವೆ. ಒಂದು ವಿಭಾಗದ ಕೆಲಸ ಮಾಡಲು 10 ದಿನ ತೆಗೆದುಕೊಳ್ಳಲಾಗಿದೆ.

12 ಇಲಾಖೆಯಗಳ ಚಿತ್ರಗಳು:
ಆರೋಗ್ಯ ಇಲಾಖೆಗೆ ಸಂಬಂಧಿಸಿದ 12 ಇಲಾಖೆಗಳ ಚಿತ್ರ, ಬರಹಗಳನ್ನು ಸಿಮೆಂಟ್‌ ಮೂಲಕ ರಚನೆ ಮಾಡಲಾಗಿದೆ. ಇನ್ಫರ್‌ಮೇಶನ್‌ ಎಜುಕೇಶನ್‌‌ಅಂಡ್ ಕಮ್ಯುನಿಕೇಶನ್ (ಐಇಸಿ) ಮೂಲಕ ಈ ಪ್ರಯೋಗವನ್ನು ಕೈಗೆತ್ತಿಕೊಳ್ಳಲಾಗಿದೆ. ಆ ವಿಭಾಗಗಳ ಮುಖ್ಯಸ್ಥರು ತಮ್ಮ ಇಲಾಖೆಗಳಲ್ಲಿರುವ ಮಾಹಿತಿಯನ್ನು ಪ್ರಚುರ ಪಡಿಸಿದ್ದಾರೆ.

ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಆಗಮಿಸುವ ಸಾರ್ವಜನಿಕರು, ವೈದ್ಯರು, ದಾದಿಯರು ಈ ಬರಹಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ.

‘ನಾನು ಬೀದರ್‌ನಲ್ಲಿ ಇದ್ದಾಗ ಈ ರೀತಿಯ ಉಬ್ಬು ಚಿತ್ರಗಳನ್ನು ಮಾಡಿಸಲಾಗಿತ್ತು. ಅಲ್ಲದೇ ಬೇಟಿ ಸರ್ಕಲ್‌ ಕೂಡ ಮಾಡಲಾಗಿತ್ತು. ಹೀಗಾಗಿ ಇಲ್ಲಿಯೂ ವಿಶಿಷ್ಟ ಕಾರ್ಯಕ್ರಮ ಮಾಡಬೇಕು ಎನ್ನುವ ಆಲೋಚನೆಯಿಂದ ಉಬ್ಬು ಚಿತ್ರ, ಬರಹಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆಡಿಎಚ್‌ಒಡಾ.ಇಂದುಮತಿ ಪಾಟೀಲ.

***

ಏನೇನಿದೇ ಉಬ್ಬು ಚಿತ್ರಿಗಳಲ್ಲಿ?

ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ₹500 ದಂಡ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕೌಟುಂಬಿಕ ಬೆಂಬಲ, ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ, ಜನಸಂಖ್ಯಾ ಸ್ಫೋಟ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ, ಜಿಲ್ಲಾ ಸರ್ವೆಕ್ಷಣ ಘಟಕ, ಕುಷ್ಠರೋಗ ಜಾಗೃತಿ, ರಾಷ್ಟ್ರೀಯ ರೋಗವಾಹಕ, ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ನವಜಾತು ಶಿಶು ಆರೈಕೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ವಿಷಯಗಳನ್ನು ಪ್ರಚುರ ಪಡಿಸಲಾಗಿದೆ.

ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ತಾಯಿ ಹೆಣ್ಣು ಮಗುವಿಗೆ ತಿಳವಳಿಕೆ ನೀಡುವ ಚಿತ್ರ, ಹದಿ ಹರಿಯದವರ ಆರೋಗ್ಯ, 6 ತಿಂಗಳಲ್ಲಿ ಕೇವಲ ತಾಯಿ ಹಾಲನ್ನು ಮಾತ್ರ ಉಣಿಸಲು ಪ್ರಚುರ ಪಡಿಸುವ ನವಜಾತು ಶಿಶು ಆರೈಕೆ, ಭೂಮಿಯ ಮೇಲೆ ಹೆಚ್ಚು ಜನಸಂಖ್ಯೆಯಾದರೆ ಯಾವ ರೀತಿ ಆಗುತ್ತದೆ ಎಂದು ಸೂಚಿಸಲು ಬೈಕ್‌ ಮೇಲಿಂದ ಬಾಲಕ ಬೀಳುತ್ತಿರುವ ಚಿತ್ರ, ನವಜಾತು ಶಿಶುಗೆ ವಿವಿಧ ಲಸಿಕೆಗಳ ಜಾಗೃತಿ, ಧೂಮಪಾನದಿಂದ ದೇಹದ ಮೇಲೆ ಉಂಟಾಗುವ ಪರಿಣಾಮ, ಕುಷ್ಠ ರೋಗಿಗಳ ಆರೈಕೆ ಬಗ್ಗೆ, ಆತ್ಮಹತ್ಯೆ ಮಾಡಿಕೊಳ್ಳದಂತೆ ಒಬ್ಬರೊಬ್ಬರನ್ನು ಕೈ ಹಿಡಿದು ಎಳೆಯುವ ಚಿತ್ರಗಳನ್ನು ವಿಶಿಷ್ಟವಾಗಿ ರಚನೆ ಮಾಡಿ ಆಕರ್ಷಣೆಗೊಳಿಸಲಾಗಿದೆ.

***

ಐಇಸಿ ಕಾರ್ಯಕ್ರಮದ ಅಂಗವಾಗಿ ಉಬ್ಬು ಚಿತ್ರ, ಬರಹಗಳನ್ನು ಸಾರ್ಜನಿಕರಿಗೆ ಆರೋಗ್ಯ ಮಾಹಿತಿ ನೀಡುವುದಾಗಿದೆ. ಇದೊಂದು ವಿಶಿಷ್ಟ ಪ್ರಯೋಗವಾಗಿದೆ. ಮುಂದಿನ ದಿನಗಳಲ್ಲಿ ರೋಗದ ಹೆಸರಿನ ವೃತ್ತ ಮಾಡುವ ಆಲೋಚನೆ ಇದೆ
ಡಾ.ಇಂದುಮತಿ ಪಾಟೀಲ, ಡಿಎಚ್‌ಒ

***

ಉಬ್ಬು ಚಿತ್ರ, ಬರಹಗಳನ್ನು ಕೇವಲ ಪಾರ್ಕ್‌ಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಈಗ ನಮ್ಮ ಕಚೇರಿ ಆಚವರಣದಲ್ಲೇ ಆರೋಗ್ಯದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ
ಡಾ.ಲಕ್ಷ್ಮಿಕಾಂತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ

***

ಆರೋಗ್ಯ ಇಲಾಖೆಯ 15 ವಿಭಾಗಗಳಲ್ಲಿ ಈಗಾಗಲೇ 12 ಉಬ್ಬು ಚಿತ್ರ, ಬರಹಗಳನ್ನು ರಚಿಸಲಾಗಿದೆ. ಇಬ್ಬರು ಕಲಾವಿದರು ಸತತ 60 ದಿನಗಳಿಂದ ಕೆಲಸ ಮಾಡುತ್ತಿದ್ದೇವೆ
ಚಂದನಸಿಂಗ್‌, ಉಬ್ಬುಚಿತ್ರ, ಬರಹ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT