ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ವಿವಿ, ಪಿಜಿ ಸೆಂಟರ್ ವಂಚಿತ ಜಿಲ್ಲೆ

Published 6 ಜೂನ್ 2024, 5:25 IST
Last Updated 6 ಜೂನ್ 2024, 5:25 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾಗಿ ದಶಕ ಕಳೆದರೂ ವಿಶ್ವವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರವಿಲ್ಲದೇ ಜಿಲ್ಲೆಯ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ.

ಈ ಮೊದಲು ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯು ಒಳಪಟ್ಟಿತ್ತು. ಈಗ ರಾಯಚೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ಜಿಲ್ಲೆಯಾದರೂ ಇಲ್ಲಿಯತನಕ ವಿವಿ ಒಳಗೊಳ್ಳದಿರುವುದು ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ ಎಂಬುದು ಜಿಲ್ಲೆಯ ಸಾರ್ವಜನಿಕರ ಅಸಮಾಧಾನವಾಗಿದೆ.

ಜಿಲ್ಲೆಯು ಆರು ತಾಲ್ಲೂಕುಗಳನ್ನು ಒಳಗೊಂಡಿದ್ದು, ವಡಗೇರಾ ಹೊರತು ಪಡಿಸಿ ಉಳಿದೆಡೆ 8 ಪದವಿ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಬೇರೆ ಜಿಲ್ಲೆಗಳಿಗೆ ತೆರಳದೇ ಶಿಕ್ಷಣ ಮೊಟಕುಗೊಳಿಸುವುದು ಸಾಮಾನ್ಯವಾಗಿದೆ.

ಯಾದಗಿರಿ ನಗರದ ಪದವಿ ಮಹಾವಿದ್ಯಾಲಯದಲ್ಲಿ ಸದ್ಯ 11 ವಿಭಾಗಗಳಿವೆ. ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿದರೆ ಮತ್ತಷ್ಟು ವಿಭಾಗಗಳಾದರೂ ಆರಂಭವಾಗುತ್ತವೆ. ಆದರೆ, 11 ವಿಭಾಗಗಳಿಗಷ್ಟೆ ಸೀಮಿತವಾಗಿದೆ.

‘ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಕೃಷಿ ವಿಶ್ವವಿದ್ಯಾಲಯವಿದ್ದು, ಯಾದಗಿರಿಯಲ್ಲೇ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕಾಗಿತ್ತು. ಜಿಲ್ಲೆಯಲ್ಲಿ ವಿವಿ ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿತ್ತು. ಜಿಲ್ಲೆಯು ತೆಲಂಗಾಣದ ಗಡಿ ಭಾಗದಲ್ಲಿರುವುದರಿಂದ ಇಲ್ಲಿ ಕನ್ನಡ ಚಟುವಟಿಕೆಗಳಿಗೆ ಅನುಕೂಲವಾಗುತ್ತಿತ್ತು. ಈ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು ಕ್ರಮ ವಹಿಸಬೇಕು’ ಎನ್ನುವುದು ಪ್ರಾಧ್ಯಾಪಕರ ಅಭಿಮತವಾಗಿದೆ.

ಗುಣಮಟ್ಟ ಶಿಕ್ಷಣ ಸಿಗುತ್ತದೆ:

‘ವಿಶ್ವವಿದ್ಯಾಲಯ ಇದ್ದರೆ ಕ್ಯಾಂಪಸ್‌ ಪರಿಸರದಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಉಂಟಾಗುತ್ತದೆ. ಎಲ್ಲ ವಿಭಾಗಗಳು ಆರಂಭವಾಗುವುದರಿಂದ ಈಗ ಪ್ರವೇಶ ಪರೀಕ್ಷೆಗೆ ಬರೆಯಲು ತೆರಳುವ ಸಮಯ ತಪ್ಪುತ್ತದೆ. ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ಹಾಸ್ಟೆಲ್‌ ಸೌಲಭ್ಯ ಹೆಚ್ಚುವುದರಿಂದ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ’ ಎಂದು ಪ್ರಾಧ್ಯಾಪ‍ಕ ಎಸ್‌.ಎಸ್‌.ನಾಯಕ ಹೇಳುತ್ತಾರೆ.

ಪ್ರತಿಯೊಂದು ಜಿಲ್ಲೆಗೆ ಯುಜಿಸಿ ನಿಯಮದ ಪ್ರಕಾರ ವಿಶ್ವವಿದ್ಯಾಲಯ ಇರಬೇಕು. ಆದರೆ ಜಿಲ್ಲೆಗೆ ಅವಕಾಶ ಇಲ್ಲದಂತೆ ಆಗಿದೆ. ಮುಂದಿನ ದಿನಗಳಲ್ಲಾದರೂ ವಿವಿ ಆರಂಭವಾಗಲಿ ಎನ್ನುವ ಆಶಯವಿದೆ

-ಪ್ರೊ.ಸುಭಾಶ್ಚಂದ್ರ ಕೌಲಗಿ ಲೀಡ್‌ ಕಾಲೇಜು ಪ್ರಾಂಶುಪಾಲ

ಖಾನಾಪುರದಲ್ಲಿ ಸ್ಥಳ ಪರಿಶೀಲನೆ

ಜಿಲ್ಲೆಯ ವಡಗೇರಾ ತಾಲ್ಲೂಕಿನ ಖಾನಾಪುರದಲ್ಲಿ ಈ ಹಿಂದೆ ವಿವಿ ಸ್ಥಾಪನೆಗೆ ವಿವಿಧ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಆದರೆ ಅದು ಪ್ರಸ್ತಾವನೆಯಲ್ಲಿ ಉಳಿದಿದ್ದು ನನೆಗುದಿಗೆ ಬಿದ್ದಿದೆ. ‘ಯಾದಗಿರಿಗೆ ವಿಶ್ವವಿದ್ಯಾಲಯದ ಅವಶ್ಯವಿದೆ. ಕೂಡಲೇ ವಿವಿ ಸ್ಥಾಪನೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಜಿಲ್ಲೆಯ ಜನತೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT