ಬುಧವಾರ, ಸೆಪ್ಟೆಂಬರ್ 22, 2021
29 °C
92 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 17,749 ವಿದ್ಯಾರ್ಥಿಗಳು; 2400 ಸಿಬ್ಬಂದಿ ನಿಯೋಜನೆ

ಜುಲೈ 19 ರಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ, ಗುರುವಾರ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಿಗ್ಗೆ 10.30ರಿಂದ 1.30 ರವರೆಗೆ ಪರೀಕ್ಷೆ ನಡೆಯಲಿದೆ.

ಯಾದಗಿರಿ ತಾಲ್ಲೂಕಿನಲ್ಲಿ 36, ಶಹಾಪುರ ತಾಲ್ಲೂಕಿನಲ್ಲಿ 29, ಸುರಪುರ ತಾಲ್ಲೂಕಿನಲ್ಲಿ 27 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 92 ಪರೀಕ್ಷಾ ಕೇಂದ್ರಗಳಿವೆ. ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜಿಲ್ಲೆಯಲ್ಲಿ ಒಂದು ಕೋಣೆಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದ್ದು, 1,480 ಕೋಣೆ ಮೀಸಲಿಡಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ ಮುಂಚಿತವಾಗಿ ಬಂದು ಥರ್ಮಲ್ ಸ್ಕ್ಯಾನರ್ ಮೂಲಕ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ಒಬ್ಬೊಬ್ಬರಾಗಿ ದೈಹಿಕ ಅಂತರ ಕಾಪಾಡಿಕೊಂಡು ಪರೀಕ್ಷಾ ಕೋಣೆಗೆ ಹೋಗಬೇಕು.  ಕವಚವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

17,749 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 122 ಸರ್ಕಾರಿ ಪ್ರೌಢಶಾಲೆ, 16 ಸರ್ಕಾರಿ ವಸತಿ ಪ್ರೌಢ ಶಾಲೆ, 17 ಅನುದಾನಿತ ಹಾಗೂ 76 ಖಾಸಗಿ ಪ್ರೌಢ ಶಾಲೆಗಳು ಸೇರಿ 231 ಶಾಲೆಗಳಿಂದ 14,060 ವಿದ್ಯಾರ್ಥಿಗಳು ಮತ್ತು 812 ಖಾಸಗಿ ಅಭ್ಯರ್ಥಿಗಳು, 2,549 ಪುನಾರವರ್ತಿತ ಅಭ್ಯರ್ಥಿಗಳು, 327 ಖಾಸಗಿ ಪುನಾರವರ್ತಿತ ಅಭ್ಯರ್ಥಿಗಳು ಸೇರಿ 17,749 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರ ಪ್ರದೇಶಗಳಲ್ಲಿ 51 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 41 ಸೇರಿ ಒಟ್ಟು 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ 2,400 ಸಿಬ್ಬಂದಿ ನೇಮಕ ಮಾಡಲಾಗಿದೆ.

ಜುಲೈ 19ರ ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಗೀತ ವಿಷಯಗಳ ಪರೀಕ್ಷೆಗಳು, ಜುಲೈ 22 ರಂದು ಭಾಷೆ ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದಿರುವ 369 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿಗೊಂದು ಜಿಲ್ಲಾ ಜಾಗೃತ ತಂಡ ರಚಿಸಲಾಗಿದೆ. ರಾಜ್ಯದಿಂದಲೂ  ಜಾಗೃತ ತಂಡದವರೊಬ್ಬರು ಆಗಮಿಸಿದ್ದಾರೆ.

ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ: ಜುಲೈ 19 ಮತ್ತು 22 ರಂದು ಬೆಳಿಗ್ಗೆ 10.30 ರಿಂದ 1.30 ಗಂಟೆಯವರೆಗೆ ನಡೆಯಲಿರುವ ಪರೀಕ್ಷಾ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಪರೀಕ್ಷೆ ಕೇಂದ್ರಗಳ ಸುತ್ತಮುತ್ತ ಲಿನಲ್ಲಿರುವ ಬೆರಳಚ್ಚು ಕೇಂದ್ರ, ಝರಾಕ್ಸ್ ಮಳಿಗೆ ಹಾಗೂ ಪುಸ್ತಕದ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ.

***

ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

ಯಾದಗಿರಿ: ಜುಲೈ 19 ಮತ್ತು 22 ರಂದು ಬೆಳಿಗ್ಗೆ 10.30 ರಿಂದ 1.30 ಗಂಟೆಯವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಬೆರಳಚ್ಚು ಕೇಂದ್ರ, ಝರಾಕ್ಸ್ ಮಳಿಗೆ ಹಾಗೂ ಪುಸ್ತಕದ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
****
ಪೊಲೀಸ್‌ ಬಂದೋಬಸ್ತ್‌

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸುಗಮ ಮತ್ತು ಶಾಂತಿಯುತವಾಗಿ ಪರೀಕ್ಷೆ ನಡೆಯಲು ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಎಸ್ಪಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಡಿಎಸ್‌ಪಿ 2, ಸಿಪಿಐ 5, ಪಿಎಸ್‌ಐ 14, ಎಎಸ್‌ಐ 20, ಎಚ್‌ಸಿ/ಪಿಸಿ-184 ಮತ್ತು ಮಹಿಳಾ ಕಾನ್‌ ಸ್ಟೆಬಲ್‌ 92 ಸಿಬ್ಬಂದಿಯನ್ನು ನೇಮಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ವಿದ್ಯಾರ್ಥಿಗಳ ಪಾಲಕರು ಪರೀಕ್ಷಾ ಕೇಂದ್ರದ ಹತ್ತಿರ ಬಂದು ಜನದಟ್ಟಣೆ ಮಾಡದೇ, ಕೋವಿಡ್ ಮಾರ್ಗಸೂಚಿ ಪಾಲಿಸಲು ತಿಳಿಸಿದ್ದಾರೆ.

***

ಈಗಾಗಲೇ 92 ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿದೆ. ಸ್ಕೌಟ್ಸ್‌ ಮತ್ತು ಗೌಡ್ಸ್‌, ಆರೋಗ್ಯ ಇಲಾಖೆಯ ತಲಾ ಇಬ್ಬರು ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ
ಶಾಂತಗೌಡ ಪಾಟೀಲ, ಡಿಡಿಪಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು