ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೆರುಗು ತಂದ ಮಣ್ಣೆತ್ತಿನ ಅಮಾವಾಸ್ಯೆ

ಕಾರ ಹುಣ್ಣಿಮೆ ಮುಗಿದ 15 ದಿನದ ನಂತರ ರೈತಾಪಿ ವರ್ಗದ ಹಬ್ಬ, ಜಿಲ್ಲೆಯ ವಿವಿಧೆಡೆ ಸಂಭ್ರಮ
Last Updated 9 ಜುಲೈ 2021, 4:16 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದ್ದು, ಬಣ್ಣ ಬಣ್ಣದ ಆಕಾರದ ಮಣ್ಣಿನ ಎತ್ತುಗಳು ಸಿದ್ಧವಾಗಿವೆ.

ನಗರದ ಮೆಥೋಡಿಸ್ಟ್ ಚರ್ಚ್ ಮುಂಭಾಗದ ರಸ್ತೆ ಬದಿ ಮಣ್ಣೆತ್ತಿನ ವಿವಿಧ ಬಗೆಯ ಎತ್ತುಗಳ ಮೂರ್ತಿಗಳನ್ನು ಕುಂಬಾರರು ಸಿದ್ಧಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆಶಾದಾಯಕವಾಗಿಲ್ಲ. ಆದರೂ ರೈತಾಪಿ ವರ್ಗ ಮಣ್ಣೆತ್ತು ಪೂಜಿಸುವ ಮೂಲಕಮಳೆ ಬರಲಿ ಎಂದು ಪ್ರಾರ್ಥಿಸಲು ತಯಾರಿನಡೆಸಿದ್ದಾರೆ.

ರೈತರು ಮಕ್ಕಳ ಸಮೇತ ಬಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಮುಂಗಾರು ಆರಂಭದಲ್ಲಿ ರೈತರ ಹಬ್ಬವಾದ ಕಾರ ಹುಣ್ಣಿಮೆಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸಿ ಬಣ್ಣ ಬಣ್ಣದಿಂದ ಅಲಂಕಾರ ಮಾಡಲಾಗಿತ್ತು. ಸಂಜೆ ವೇಳೆ ಮೆರವಣಿಗೆ ಮೂಡುವ ಮೂಲಕ ರೈತರು ಸಂಭ್ರಮಿಸಿದ್ದರು. ಈಗ ಮತ್ತೊಮ್ಮೆ ಮಣ್ಣಿನಿಂದ ಕೂಡಿದ ಎತ್ತುಗಳನ್ನು ಪೂಜಿಸಲಾಗುತ್ತದೆ.

ಖರೀದಿಗೆ ಚೌಕಾಶಿ

ಮಣ್ಣಿನ ಮೂರ್ತಿಗಳನ್ನು ಖರೀದಿ ಮಾಡಲು ಬರುವ ಗ್ರಾಹಕರು ಚೌಕಾಶಿ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.

ಒಂದು ಜೋಡಿಗೆ 40ರಿಂದ 1,000 ತನಕ ದರ:

ಮಣ್ಣೆತ್ತುಗಳು ಒಂದು ಜೋಡಿಗೆ ₹40ರಿಂದ 100 ಇದ್ದವು. ಆದರೆ, ಪಿಒಪಿ ಎತ್ತುಗಳಿಗೆ ₹40, ₹100, ₹250, ₹350, ₹550ರಿಂದ ₹1,000ರ ತನಕ ಬೆಲೆ ಇದೆ.

15 ದಿನಗಳಿಂದ ತಯಾರಿ

‘ಕಾರ ಹುಣ್ಣಿಮೆ ಮುಗಿದ ನಂತರ ಮಣ್ಣೆತ್ತು ತಯಾರಿಸಲು ಆರಂಭಿಸಲಾಗುತ್ತಿದೆ. ಕೆರೆಯಿಂದ ಮಣ್ಣು ತಂದು ಅದನ್ನು ಹದಗೊಳಿಸಿ ಮಣ್ಣಿನ ಎತ್ತುಗಳನ್ನು ತಯಾರಿಸಲಾಗುತ್ತಿದೆ. ಈಗ ಮಹಾರಾಷ್ಟ್ರದ ಸೊಲ್ಲಾಪುರದಿಂದ ಪಿಒಪಿ ಮಣ್ಣಿನ ಮೂರ್ತಿಗಳು ಬಂದಿವೆ. ಗ್ರಾಹಕರು ಅವುಗಳನ್ನೇ ಹೆಚ್ಚಾಗಿ ಕೇಳುತ್ತಾರೆ. ದೊಡ್ಡ ಎತ್ತುಗಳಿಗಿಂತ ಸಣ್ಣ ಎತ್ತುಗಳಿಗೆ ಬೇಡಿಕೆ ಇದೆ. ನಗರದ ಮೆಥೋಡಿಸ್ಟ್‌ ಚರ್ಚ್, ವಿದ್ಯಾಮಂಗಲ ಕಾಂಪ್ಲೆಕ್ಸ್‌, ಗಾಂಧಿ ವೃತ್ತದ ಬಳಿ ಮಾರಾಟ ಮಾಡಲಾಗುತ್ತಿದೆ. ಎತ್ತುಗಳನ್ನು ಖರೀದಿಸಿವರು ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ಮಳೆರಾಯನ ಬಳಿ ಬೇಡುತ್ತಾರೆ. ಎತ್ತುಗಳು ರೈತನ ಸ್ನೇಹಿತರಾಗಿದ್ದು, ಅವುಗಳಿಗೆ ಪೂಜಿಸುವ ಮೂಲಕ ಗೌರವಿಸಲಾಗುತ್ತಿದೆ’ ಎನ್ನುತ್ತಾರೆಈರಣ್ಣ ಕುಂಬಾರ.

ಗ್ರಾಮೀಣ ಭಾಗದಲ್ಲಿ ಜೋರು

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮದಿಂದ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಕೆರೆ,‌ ಕುಂಟೆ ಮಣ್ಣಿನ ಮೂಲಕ ಎತ್ತುಗಳನ್ನು ರಚಿಸಿ ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುತ್ತಾರೆ. ಹಬ್ಬ ಮುಗಿದ ನಂತರ ಮನೆಯ ಮಾಳಿಗೆಯ ಮೇಲಿಟ್ಟು ಮಳೆ ನೀರಿಗೆ ಕರಗಿ ಹೋಗಲು ಬಿಡುತ್ತಾರೆ.

ಕಡಿಮೆಯಾಗುತ್ತಿರುವ ಸಂಭ್ರಮ:

ಈಚಿನ ವರ್ಷಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕಡಿಮೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ದೊಡ್ಡದಾದ ಮಣ್ಣಿನ ಮೂರ್ತಿಗಳನ್ನು ಮಾಡಿ ಊರು ತುಂಬಾ ಮೆರವಣಿಗೆ ಮಾಡಲಾಗುತಿತ್ತು. ಈಗ ಇಂಥ ಸಂಭ್ರಮ‌ ಕಾಣಲು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಇದು ಮತ್ತಷ್ಟು ಇಳಿಕೆಯಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಎತ್ತುಗಳ ಬದಲಾಗಿ ಟ್ರ್ಯಾಕ್ಟರ್ ಬಂದಿದ್ದು, ರೈತರ ಮಹತ್ವ ಕಳೆದುಕೊಂಡಿದೆ.

***

ಸಮೃದ್ಧ ಬೆಳೆಗಳಿಗಾಗಿ ಮಣ್ಣೆತ್ತಿನ ಹಬ್ಬ

ವರದಿ: ತೋಟೇಂದ್ರ ಎಸ್ ಮಾಕಲ್

ಯರಗೋಳ: ಮುಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆಯಲಿ, ಕೃಷಿಕರು ಸಂತೋಷದಿಂದ ಇರಲಿ ಎನ್ನುವ ಕಾರಣಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತದೆ.

ಮಣ್ಣೆತ್ತಿನ ಅಮಾವಾಸ್ಯೆ ಶುಕ್ರವಾರ (ಜುಲೈ 9) ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ರೈತ ಕುಟುಂಬಗಳು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ, ಕುಂಬಾರರು ಕೆರೆಯ ಕಪ್ಪು ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಾರೆ. ಮೂರು ದಿನ ಮುಂಚೆ ಕುಂಬಾರರು ಕೆರೆಯಲ್ಲಿನ ಕಪ್ಪು ಮಣ್ಣನ್ನು ತಂದು, ಒಂದು ದಿನ ನೀರಲ್ಲಿ ನೆನೆಸಿ ಹದ ಮಾಡುತ್ತಾರೆ. ನಂತರ ಅದೇ ಮಣ್ಣಿಂದ ಎತ್ತುಗಳನ್ನು ತಯಾರಿಸುತ್ತಾರೆ.

ಮಕ್ಕಳು, ಯುವತಿಯರು, ಯುವಕರು ಕುಂಬಾರರ ಮನೆಯಿಂದ ಅಮಾವಾಸ್ಯೆ ದಿನ ಬೆಳಿಗ್ಗೆ ಮಣ್ಣೆತ್ತುಗಳನ್ನು ಖರೀದಿಸಿ ಮನೆಗಳಿಗೆ ತರುತ್ತಾರೆ. ಹೆಣ್ಣುಮಕ್ಕಳು ಸಂಪ್ರಾದಾಯಿಕವಾಗಿ ಮಣ್ಣೆತ್ತುಗಳಿಗೆ ಕುಂಕುಮ, ಅರಿಶಿಣ, ವಿಭೂತಿ ಹಚ್ಚಿ ಕರ್ಪೂರ, ಊದಬತ್ತಿ ಬೆಳಗಿ ತೆಂಗಿನಕಾಯಿ ಒಡೆದು ಪೂಜೆ ನೆರವೇರಿಸುತ್ತಾರೆ. ಹೋಳಿಗೆ, ಕಡುಬು ನೈವೇದ್ಯ ಅರ್ಪಿಸಿ, ನಂತರ ಅದನ್ನು ಜಾನುವಾರುಗಳಿಗೆ ತಿನ್ನಿಸುತ್ತಾರೆ.

‘ಗ್ರಾಮೀಣ ಪ್ರದೇಶದ ರೈತರಿಗೆ ಮಣ್ಣೆತ್ತಿನ ಅಮಾವಾಸ್ಯೆ ಪವಿತ್ರ ಹಾಗೂ ಮಹತ್ವದ ಹಬ್ಬ’ ಎಂದು ಕೋಟಗೇರಾ ಗ್ರಾಮದ ಶಿಕ್ಷಕ ವೆಂಕಟೇಶ ಚಂದನಕೇರಿ ಹೇಳಿದರು.

‘ನಮ್ಮ ಹಿರಿಯರು ಹಾಕಿದ ಸಂಪ್ರದಾಯವನ್ನು ನಾವು ಮುಂದುವರಿಸಿದ್ದೇವೆ. ಯಾವುದೇ ಆದಾಯವಿಲ್ಲ. ರೈತರು ಕೊಟ್ಟ ಜೋಳ, ಒಂದಿಷ್ಟು ಹಣದಿಂದ ಸಂತೃಪ್ತರಾಗುತ್ತೇವೆ’ ಎಂದು ಯರಗೋಳ ಗ್ರಾಮದ ಬಸವರಾಜ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಜೋಡಿ ಮಣ್ಣೆತ್ತಿಗೆ ₹ 50 ರಿಂದ ₹100 ಬೆಲೆಗೆ ನಿಗದಿ ಪಡಿಸಲಾಗಿದೆ. ಧಾನ್ಯಗಳಿಗೂ ಮಾರಾಟ ಮಾಡಲಾಗುತ್ತದೆ’ ಎಂದರು.

‘ಅಮಾವಾಸ್ಯೆ ಅಂಗವಾಗಿ ನಮ್ಮ ಮನೆಯಲ್ಲಿ ಮಣ್ಣೆತ್ತುಗಳಿಗೆ ಪೂಜಿಸಲಾಗುತ್ತಿದೆ. ಹಿಂದಿನಿಂದ ಬಂದಿರುವ ಸಂಪ್ರಾದಾಯ ಹೀಗೆ ಮುಂದುವರಿಯಲಿ’ ಎಂದು ವಿದ್ಯಾರ್ಥಿ ಅಭಿಷೇಕ ಪೊಲೀಸ್ ಪಾಟೀಲ ಹೇಳುತ್ತಾರೆ.
***
ಮಣ್ಣೆತ್ತುಗಳ ಖರೀದಿ ಭರಾಟೆ ಜೋರು

ವರದಿ: ಭೀಮಶೇನರಾವ ಕುಲಕರ್ಣಿ

ಹುಣಸಗಿ: ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಪಟ್ಟಣದ ವಿವಿಧ ಕಡೆ ಮಾರಾಟಕ್ಕೆ ಇಟ್ಟಿರುವ ಮಣ್ಣೆತ್ತುಗಳ ಖರೀದಿ ಭರಾಟೆ ಜೋರಾಗಿದೆ.

ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದ್ದು, ಪಿಒಪಿ ಮತ್ತು ಮಣ್ಣೆತ್ತುಗಳು ಹೆಚ್ಚು ಮಾರಾಟವಾಗುತ್ತಿವೆ.

‘ಕಳೆದ ಎರಡು ದಿನಗಳ ಹಿಂದೆ ಮಂದಗತಿಯಲ್ಲಿದ್ದ ವ್ಯಾಪಾರ ಇದ್ದು, ಗುರುವಾರ ಹೆಚ್ಚು ಜನರು ಖರೀದಿಸುತ್ತಿದ್ದಾರೆ. ನಮ್ಮ ಕುಲ ಕಸಬು ಆಗಿದ್ದರಿಂದಾಗಿ ಹೆಚ್ಚು ಲಾಭಾಂಶ ನಿರೀಕ್ಷೆ ಮಾಡುತ್ತಿಲ್ಲ. ₹50 ರಿಂದ ₹100, ₹250 ವರೆಗೆ ಮಾರಾಟ ಮಾಡುತ್ತಿದ್ದೇವೆ’ ಎಂದು ಮಲ್ಲಮ್ಮ ಕುಂಬಾರ ತಿಳಿಸಿದರು.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರೈತರ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಮುಂಗಾರು ಮಳೆಯ ಆರಂಭದ ಜೊತೆಯಲ್ಲಿ ಬರುವುದೇ ಈ ರೈತರ ಹಬ್ಬಗಳು. ಕಾರಹುಣ್ಣಿಮೆಯಂದು ಜೀವಂತ ಎತ್ತುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರೆ ಅಮಾವಾಸ್ಯೆ ಅಂಗವಾಗಿ (ಮೃತ್ತಿಕಾ) ಮಣ್ಣೆತ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದು ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

‘ಮಹಾರಾಷ್ಟ್ರದ ಸೊಲ್ಲಾಪುರದಿಂದ ಸುಮಾರು 5,000 ವಿವಿಧ ಗಾತ್ರದ ಮಣ್ಣೆತ್ತುಗಳನ್ನು ತಂದಿದ್ದು, ಈ ಬಾರಿ ಎತ್ತುಗಳ ವ್ಯಾಪಾರ ಭರ್ಜರಿಯಾಗಿದೆ. ಮೂರು ದಿನಗಳಲ್ಲಿ 3,000 ಎತ್ತುಗಳು’ ಮಾರಾಟವಾಗಿದೆ ಎಂದು ಹುಣಸಗಿಯ ಪ್ರಭು ಕುಂಬಾರ ಹೇಳಿದರು.

‘ರೈತಾಪಿ ವರ್ಗ ಕುಂಬಾರರಿಂದ ಮಣ್ಣೆತ್ತುಗಳನ್ನು ಪಡೆದು ಅವರಿಗೆ ಉಡಿ ಅಕ್ಕಿ, ಜೋಳ ಹಾಕಿ ದಕ್ಷಿಣೆ ನೀಡಿ ಎತ್ತುಗಳನ್ನು ಪಡೆಯುತ್ತಾರೆ. ಇದು ಇಂದಿಗೂ ಅನುಸರಿಸಿಕೊಂಡು ಬರಲಾಗುತ್ತದೆ’ ಎಂದು ವಜ್ಜಲ ಗ್ರಾಮದ ನಿಂಗಮ್ಮ ಕುಂಬಾರ ಹೇಳಿದರು.

‘ರೈತರಿಗೆ ಎತ್ತುಗಳು ದೇವರ ಸ್ವರೂಪ, ಕೋವಿಡ್ ದೂರವಾಗಿ ಮೊದಲಿನಂತೆ ಎಲ್ಲರೊಂದಿಗೆ ಬೆರೆಯುವಂತಹ ದಿನಗಳ ಬರಲಿ, ಒಂದು ವರ್ಷ ಪೂರ್ತಿ ಯಾವುದೇ ತೊಂದರೆಯಾಗದಂತೆ ಮಳೆ ಬೆಳೆ ಬಂದು ದೇಶಕ್ಕೆ ಅನ್ನ ನೀಡುವ ರೈತರ ಕಷ್ಟ ನಿವಾರಣೆಯಾಗಲಿ. ರೈತರು ಬೆಳೆದ ಫಸಲಿಗೆ ಉತ್ತಮ ಧಾರಣಿ ಸಿಗಲಿ ಎಂದು ಪ್ರಾರ್ಥಿಸುವದೇ ಈ ಹಬ್ಬದ ವಿಶೇಷ’ ಎಂದು ವಜ್ಜಲ ಗ್ರಾಮದ ಸಾಹೇಬಗೌಡ ಶ್ರೀಗಿರಿ ಹಾಗೂ ನಿಂಗಣ್ಣ ಕುಂಬಾರ ತಿಳಿಸಿದರು.

‘ಹುಣಸಗಿ ಪಟ್ಟಣದಲ್ಲಿ ಬಣ್ಣ ಬಣ್ಣಗಳಿಂದ ಅಲಂಕೃತ ಮಣ್ಣೆತ್ತುಗಳಿದ್ದು, ಅವುಗಳನ್ನು ಖರೀದಿಸುತ್ತಿದ್ದೇವೆ’ ಎಂದು ಏದಲಬಾವಿ ಗ್ರಾಮದ ರಮೇಶ ರಾಠೋಡ, ದೇವತಕಲ್ಲ ಗ್ರಾಮದ ಶರಣಪ್ಪ ಹಾಗೂ ದುರಗಪ್ಪ ತಿಳಿಸಿದರು.

***

ಮಳೆ ಬೆಳೆ ಚೆನ್ನಾಗಿ ಆಗಲಿ. ರೈತರ ಮುಖದಲ್ಲಿ ಮಂದಹಾಸ ಮೂಡಲಿ. ಈ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯಿಂದ ರೈತರಿಗೆ ಶುಭವಾಗಲಿ
ಸತ್ಯಬೋಧಾಚಾರ್ಯ ಘಟಾಲಿ, ಯರಗೋಳ ಉತ್ತರಾದಿ ಮಠದ ಅರ್ಚಕ

***

ಮಣ್ಣೆತ್ತುಗಳನ್ನು ಖರೀದಿಸಿ ಜಗುಲಿ ಮೇಲಿಟ್ಟು ಪೂಜಿಸುವ ಸಂಪ್ರದಾಯವಿದೆ. ಇದರಿಂದ ನಮಗೆ ಒಳಿತಾಗಲಿದೆ. ಹೀಗಾಗಿ ಎತ್ತುಗಳನ್ನು ಖರೀದಿಸಲು ಬಂದಿದ್ದೇವೆ
ಪಾರ್ವತಿ ರಾಮಸಮುದ್ರ, ಗ್ರಾಹಕಿ

***

ಗುರುವಾರ ಬೆಳಿಗ್ಗೆಯಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇವೆ. ಹಲವರು ಪಿಒಪಿ ಎತ್ತು ಕೇಳಿದರೆ, ಕೆಲವರು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಖರೀದಿಸುತ್ತಿದ್ದಾರೆ
ಭಾಗ್ಯಶ್ರೀ ಕುಂಬಾರ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT