ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಆಗಸ್ಟ್‌ 14 ರಂದು ಮೆಗಾ ಲೋಕ ಅದಾಲತ್‌

1,400 ಪ್ರಕರಣಗಳನ್ನು ಇತ್ಯರ್ಥಕ್ಕೆ ಅರ್ಹ: ನ್ಯಾ.ಶ್ರೀಧರ್
Last Updated 16 ಜುಲೈ 2021, 3:29 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್ ಆಗಸ್ಟ್ 14 ರಂದು ನಡೆಯಲಿದೆ’ ಎಂದು ಯಾದಗಿರಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್. ಶ್ರೀಧರ್ ತಿಳಿಸಿದ್ದಾರೆ.

‘ಆಗಸ್ಟ್ 14 ರ ಲೋಕ ಅದಾಲತ್‌ಗೆ ಈಗಾಗಲೇ 1,400 ಪ್ರಕರಣಗಳನ್ನು ಇತ್ಯರ್ಥಕ್ಕೆ ಅರ್ಹ ಎಂದು ಗುರುತಿಸಲಾಗಿದೆ. ಇನ್ನಷ್ಟು ಪ್ರಕರಣಗಳನ್ನು ನಿರೀಕ್ಷಿಸಲಾಗಿದೆ’ ಎಂದು ಗುರುವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಮೋಟಾರ್ ವಾಹನ, ಅಪಘಾತ ಪರಿಹಾರದ ಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಪ್ರಕರಣಗಳು, ಬ್ಯಾಂಕ್ ಸಂಬಂಧಿಸಿದ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು ಸೇರಿದಂತೆ ಕಾನೂನಿನನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು ಮತ್ತು ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ’ ಎಂದರು.

‘ಲೋಕ ಅದಾಲತ್‌ಗೆ ಯಾದಗಿರಿ ನ್ಯಾಯಾಲಯದ ಸಂಕೀರ್ಣದಲ್ಲಿ ಒಟ್ಟು 3 ಬೆಂಚ್‌ಗಳನ್ನು, ಶಹಾಪುರ 2 ಹಾಗೂ ಸುರಪುರದಲ್ಲಿ 2 ಬೆಂಚ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಬೆಂಚಿನಲ್ಲಿ ಒಬ್ಬರು ನ್ಯಾಯಾಧೀಶರು, ಒಬ್ಬರು ವಕೀಲರು, ಸಂಧಾನಕಾರರು ಭಾಗವಹಿಸುವರು. ಅವರ ಮುಖಾಂತರ ರಾಜೀ ಸಂಧಾನ ಮಾಡಿಸಲಾಗುವುದು’ ಎಂದರು.

‘ಮೆಗಾ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ಸಾಕಷ್ಟು ಸಮಯ ಉಳಿತಾಯ ಮಾಡಬಹುದಾಗಿದೆ. ಸಿವಿಲ್ ಪ್ರಕರಣಗಳಲ್ಲಿ ರಾಜಿಯಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕ ವಾಪಸಾಗುತ್ತದೆ. ಇದರಿಂದ ಉಭಯ ಪಕ್ಷಗಾರರಲ್ಲಿ ದ್ವೇಷದ ಭಾವನೆ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಸಾರ್ವಜನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೆಗಾ ಲೋಕ ಅದಾಲತ್‌ನ ಸದುಪಯೋಗಪಡಿಸಿಕೊಳ್ಳುವಂತೆ’ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಹೀಲ್ ಅಹಮದ್ ಎಸ್. ಕುನ್ನಿಬಾವಿ, ವಕೀಲರ‌ ಸಂಘದ ಕೋಶಾಧಿಕಾರಿ ಮೌನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT