ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

92 ಪರೀಕ್ಷಾ ಕೇಂದ್ರಗಳು, 2,400 ಸಿಬ್ಬಂದಿಗೆ ಕೋವಿಡ್‌ ಲಸಿಕೆ
Last Updated 10 ಜುಲೈ 2021, 4:50 IST
ಅಕ್ಷರ ಗಾತ್ರ

ಯಾದಗಿರಿ: ಇದೇ ಜುಲೈ 19 ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಾರ್ವಜನಿಕರ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.

92 ಪರೀಕ್ಷಾ ಕೇಂದ್ರಗಳಲ್ಲಿ 88 ರೆಗ್ಯುಲರ್‌ ಅಭ್ಯರ್ಥಿಗಳು, 4 ಕೇಂದ್ರಗಳಲ್ಲಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾದಗಿರಿಯಲ್ಲಿ ಮೂರು, ಸುರಪುರದಲ್ಲಿ ಒಂದು ಕೇಂದ್ರದಲ್ಲಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೋವಿಡ್‌ ಕಾರಣದಿಂದ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಯಲಿದೆ.

ಒಂದೇ ವಿಷಯಕ್ಕೆ 120 ಅಂಕಗಳು: ಗಣಿತ, ವಿಜ್ಞಾನ, ಸಮಾಜ ವಿಷಯಗಳು ಸೇರಿ ಒಂದು ವಿಷಯ. ತಲಾ 40 ಅಂಕಗಳು ಒಟ್ಟು 120. ಮತ್ತೊಂದು ವಿಷಯಕ್ಕೆ ಭಾಷೆಯ ವಿಷಯಗಳುಇರಲಿವೆ. ಕನ್ನಡ, ಇಂಗ್ಲಿಷ್‌, ಹಿಂದಿ ಆಯಾ ಮಾಧ್ಯಮಕ್ಕೆ ಅನುಗುಣವಾಗಿ ಭಾಷೆಯ ವಿಷಯಗಳ ಪರೀಕ್ಷೆ ನಡೆಯಲಿದೆ. ಇದಕ್ಕೂ 120 ಅಂಕಗಳನ್ನು ನಿಗದಿ ಪಡಿಸಲಾಗಿದೆ.

ಈಗಾಗಲೇ ಅಣಕು ಪರೀಕ್ಷೆ ಮಾಡಲಾಗಿದೆ. ಪರೀಕ್ಷೆ ಬೆಳಿಗ್ಗೆ 10.30ಕ್ಕೆ ಆರಂಭವಾದರೂ 8.30ಕ್ಕೆ ಎಲ್ಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಲಾಗಿದೆ.

92 ಪರೀಕ್ಷಾ ಕೇಂದ್ರಗಳಲ್ಲಿ 92 ಪರೀಕ್ಷಾ ಅಧೀಕ್ಷಕ, 92 ಮೊಬೈಲ್‌ ಸ್ವಾಧೀನ ಅಧಿಕಾರಿ, 92 ಜಾಗೃತದಳ ಅಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.ಒಂದು ಕೋಣೆಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದ್ದು, 1,480 ಕೋಣೆ ಮೀಸಲಿಡಲಾಗಿದೆ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ: ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ, ಸೋಂಕಿನ ಲಕ್ಷಣಗಳಿದ್ದರೆ ಪಲ್ಸ್‌ ಮೀಟರ್‌ ಮೂಲಕ ಆರೋಗ್ಯ ಪರೀಕ್ಷೆ ಮಾಡಲಿದ್ದಾರೆ. ಅಲ್ಲದೆ ಮಾಸ್ಕ್‌ ಧರಿಸದೇ ಬಂದಿದ್ದರೆ ಉಚಿತವಾಗಿ ಮಾಸ್ಕ್‌ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ದಾನಿಗಳು 20 ಸಾವಿರ ಮಾಸ್ಕ್‌ಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ್ದಾರೆ.

460 ಲೀಟರ್‌ ದ್ರವ ಸಿಂಪಡಣೆ ಮಾಡಲಾಗುತ್ತಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 5 ಲೀಟರ್‌ ತೆಗೆದಿರಿಸಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆಜೊತೆಗೂಡಿಸಿದೆ. ಕೈ ಒರೆಸಿಕೊಳ್ಳುವ ದ್ರಾವಣವನ್ನು ಶಿಕ್ಷಣ ಇಲಾಖೆ ಪೂರೈಸಿದೆ.

‘ಪರೀಕ್ಷಾ ಮುನ್ನಾ ದಿನ, ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಈ ಮೂಲಕ ಸ್ವಚ್ಛತೆ ಕಾಪಾಡಲಾಗುತ್ತದೆ’ ಎಂದು ಡಿಡಿಪಿಐ ಶಾಂತಗೌಡ ಪಾಟೀಲ ತಿಳಿಸುತ್ತಾರೆ.

‘ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸಭೆಗಳನ್ನು ಮಾಡಲಾಗಿದೆ. ಪೊಲೀಸ್‌, ಆರೋಗ್ಯ, ಸಾರಿಗೆ ಇಲಾಖೆ ಅಧಿಕಾರಿಗಳು ಶಿಕ್ಷಣ ಇಲಾಖೆಯೊಂದಿಗೆ ಸೇರಿ ಸಮನ್ವಯತೆಯಿಂದ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ’ ಎನ್ನುತ್ತಾರೆ ಅವರು.

‘ಪುನರಾವರ್ತಿತ ಅಭ್ಯರ್ಥಿಗಳು 2,549, ಖಾಸಗಿ ಅಭ್ಯರ್ಥಿಗಳು 812, ನಾಪಾಸದ ಖಾಸಗಿ ಅಭ್ಯರ್ಥಿಗಳು 390, ಹಳೆ ಪಠ್ಯಕ್ರಮ ಇರುವ 1 ಅಭ್ಯರ್ಥಿ ಸೇರಿದಂತೆ 17, 749 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ’ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಡಾ. ಮಲ್ಲಪ್ಪ ಕೆ ಯರಗೋಳ ಮಾಹಿತಿ ನೀಡುತ್ತಾರೆ.

ಬೇರೆ ಜಿಲ್ಲೆಯ363 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಯಾದಗಿರಿಯಲ್ಲಿ 50, ಶಹಾಪುರದಲ್ಲಿ 80, ಸುರಪುರದಲ್ಲಿ 233 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

***

ಸೋಂಕಿತರೂ ಬರೆಯಲಿದ್ದಾರೆ ಪರೀಕ್ಷೆ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು ಎಂದು ಶಿಕ್ಷಣ ಇಲಾಖೆ ಅವರಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಕೇರ್‌ ಸೆಂಟರ್‌ (ಸಿಸಿಸಿ) ಸ್ಥಾಪಿಸಲಾಗಿದ್ದು, ಪ್ರತಿ ತಾಲ್ಲೂಕು ಕೇಂದ್ರದಿಂದ ಇಲ್ಲಿಗೆ ಬರಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಕೇರ್‌ ಸೆಂಟರ್‌ನಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಯೇ ಪರೀಕ್ಷಾ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ.

***

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ. ಈಗಾಗಲೇ ಬಹುಆಯ್ಕೆ ಪ್ರಶ್ನೆ ಪತ್ರಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ
ಶಾಂತಗೌಡ ಪಾಟೀಲ, ಡಿಡಿಪಿಐ

***

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಪರೀಕ್ಷೆ ಬಗ್ಗೆ ಇರುವ ಗೊಂದಲ ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆ
ಡಾ. ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT