ಭಾನುವಾರ, ಮೇ 22, 2022
25 °C
73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವ ಪ್ರಭು ಚವಾಣ್

ಯಾದಗಿರಿ: ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಎರಡನೇಯ ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕೆಲಸ ಮಾಡಿ ತೋರಿಸಲು ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವಾಣ್‌ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 73ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸೂರ್ಯ ಚಂದ್ರ ಇರುವ ತನಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಹೆಸರು ಇರಲಿದೆ. ನಮ್ಮದೇ ಶ್ರೇಷ್ಠ ಸಂವಿಧಾನವಾಗಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ಅಂಬೇಡ್ಕರ್‌ ಅವರು ಅನೇಕ ರಾಷ್ಟ್ರಗಳಲ್ಲಿ ಅಧ್ಯಯನ ಮಾಡಿ ನಮಗೆ ಸಂವಿಧಾನ ನೀಡಿದ್ದಾರೆ‘ ಎಂದರು.

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾನು ಕಟಿಬದ್ಧನಾಗಿದ್ದೇನೆ. ಜನಪ್ರತಿನಿಧಿಗಳು ಹಾಗೂ ಎಲ್ಲಾ ಅಧಿಕಾರಿಗಳೊಂದಿಗೆ ಜೊತೆಗೂಡಿ ಜಿಲ್ಲೆಯ ಜನರ ಅಭ್ಯುದಯಕ್ಕಾಗಿ ಶ್ರಮಿಸಲಾಗುವುದು. ಕೋವಿಡ್ ಮೂರನೇ ಅಲೆ ಮತ್ತು ಓಮೈಕ್ರಾನ್ ಸೋಂಕು ತಡೆಯಲು ಎಲ್ಲರೂ ಲಸಿಕೆ ಪಡೆಯಬೇಕು. ಹಿರಿಯ ನಾಗರಿಕರು, ವೈದ್ಯಕೀಯ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆಯಬೇಕು. ಎಲ್ಲರೂ ಲಸಿಕೆ ಪಡೆದು ಅಂತರ ಕಾಪಾಡಿಕೊಂಡು, ಮಾಸ್ಕ್‌ ಧರಿಸಬೇಕು.  ಮದುವೆಗಳಲ್ಲಿ ಜನ ಹೆಚ್ಚು ಸೇರದಂತೆ ಕೋವಿಡ್ ನಿಯಮ ಪಾಲನೆ ಮಾಡಬೇಕು‘ ಎಂದು ಸಲಹೆ ನೀಡಿದರು.

‘ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡು ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ‘ ಎಂದರು.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಜಿಲ್ಲೆಗೆ ಹಣ ನೀಡಲಾಗುತ್ತಿದೆ. ಈ ಮೂಲಕ ಅಭಿವೃದ್ಧಿ ಸಾಧಿಸಲಾಗುತ್ತಿದೆ‘ ಎಂದು ತಿಳಿಸಿದರು.

‘ಕೋವಿಡ್‌ನಿಂದ ಮೃತಪಟ್ಟ 188 ಜನರಿಗೆ ಸರ್ಕಾರದ ₹ 1 ಲಕ್ಷ ಪರಿಹಾರ ವಿತರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರ ಮಕ್ಕಳಿಗೆ ಆದ್ಯತೆ ನೀಡಿದೆ. ರೈತರ ಉನ್ನತಿಯೇ ನಮ್ಮ ಸರ್ಕಾರದ ಧ್ಯೇಯವಾಗಿದೆ‘ ಎಂದು ತಿಳಿಸಿದರು.

‘ನೀತಿ ಆಯೋಗದ ಮಹಾತ್ವಕಾಂಕ್ಷಿ ಜಿಲ್ಲೆ ಯೋಜನೆ ಪ್ರಗತಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌, ವಿಡಿಯೊ ಸಂವಾದ ನಡೆಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಲಿದೆ‘ ಎಂದರು.

ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಾಭಿವೃದ್ಧಿ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶು‍ಪಾಲ ಸುಭಾಷ್ಚಂದ್ರ ಕೌಲಗಿ ನಿರೂಪಿಸಿದರು.

ಜಿಲ್ಲಾಧಿಕಾರಿಗೆ ಸನ್ಮಾನ
ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌, ಶಾಸಕ ವೆಂಕಟರೆಡ್ಡಿ ಮುದ್ನಾಳ ಸೇರಿದಂತೆ ಜನಪ್ರತಿನಿಧಿಗಳು ಸನ್ಮಾನಿಸಿದರು.

ಪ್ರಧಾನಿಯೊಂದಿಗೆ ವಿಡಿಯೊ ಸಂವಾದ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದು, ಹೀಗಾಗಿ ಸನ್ಮಾನಿಸಲಾಗಿದೆ ಎಂದು ಜನಪ್ರತಿನಿಧಿಗಳು ತಿಳಿಸಿದರು.

***

ಜಿಲ್ಲೆಯ ಅಭಿವೃದ್ಧಿಗಾಗಿ ಅಧಿಕಾರಿ, ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಗತಿ ಸಾಧಿಸಲಾಗುವುದು. ಶೀಘ್ರದಲ್ಲೇ ಕೆಡಿಪಿ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಲಾಗುವುದು. ಅಭಿವೃದ್ಧಿಯೇ ನಮ್ಮ ಗುರಿ.
–ಪ್ರಭು ಬಿ. ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.